ಬೆಂಗಳೂರು: ದರೋಡೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ 9 ವರ್ಷಗಳ ಬಳಿಕ ಎಂ-ಸಿಸಿಟಿಎನ್‌ಎಸ್ ಆ್ಯಪ್ ಮೂಲಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹಾಸನ ಮೂಲದ ಲಕ್ಷ್ಮಣ್ (47) ಬಂಧಿತ.
2014ನೇ ಸಾಲಿನಲ್ಲಿ ದರೋಡೆಗೆ ಸಂಚು ಆರೋಪದಡಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ಜಾಮೀನು ಪಡೆದು ಹೊರಗೆ ಬಂದಿದ್ದ ಆರೋಪಿ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಹೀಗಾಗಿ ನ್ಯಾಯಾಲಯ ಈತನ ವಿರುದ್ಧ ಹಲವು ಬಾರಿ ವಾರೆಂಟ್ ಹೊರಡಿಸಿತ್ತು.
ಅನುಮಾನಾಸ್ಪದ ವ್ಯಕ್ತಿಗಳನ್ನು ಪರಿಶೀಲಿಸಲು ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಎಂ ಸಿಸಿಟಿಎನ್‌ಎಸ್ ಮೊಬೈಲ್ ಆ್ಯಪ್ ನೀಡಲಾಗಿದ್ದು, ಬೆರಳು ಮುದ್ರೆ ಮೂಲಕ ಪರಿಶೀಲನೆಗಾಗಿ ಡಿವೈಸ್ ವಿತರಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅವರ ಬೆರಳು ಮುದ್ರೆಯನ್ನು ಈ ಡಿವೈಎಸ್ ಮೇಲೆ ಒತ್ತಿದರೆ, ಆ ವ್ಯಕ್ತಿ ಈ ಹಿಂದೆ ಯಾವುದಾದರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದನೆ ಎಂಬ ಮಾಹಿತಿ ಲಭ್ಯವಾಗುತ್ತದೆ.
ಅದೇ ರೀತಿ ನ.8ರಂದು ರಾತ್ರಿ ರಾಜಗೋ ಪಾಲನಗರ ಠಾಣೆ ಎಎಸ್‌ಐ ಕೃಷ್ಣಮೂರ್ತಿ, ಹೆಡ್‌ಕಾನ್‌ಸ್ಟೇಬಲ್ ಹಾಗೂ ಕಾನ್‌ಸ್ಟೇಬಲ್ ಪೀಣ್ಯ 2ನೇ ಹಂತದ ಗ್ಯಾಸ್ ಬಂಕ್ ಬಳಿ ಹೊಯ್ಸಳ ವಾಹನದಲ್ಲಿ ಗಸ್ತು ಕರ್ತವ್ಯದಲ್ಲಿದ್ದರು. ಈ ವೇಳೆ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಓಡಾಡುತ್ತಿರುವುದು ಕಂಡು ಬಂದಿದೆ.
ಕೂಡಲೇ ಆತನನ್ನು ವಶಕ್ಕೆ ಪಡೆದು ಎಂ-ಸಿಸಿ ಟಿಎನ್‌ಎಸ್ ಮೊಬೈಲ್ ಆ್ಯಪ್ ಡಿವೈಸ್ ನಲ್ಲಿ ಆತನ ಬೆರಳು ಮುದ್ರೆ ಪರಿಶೀಲಿಸಿದಾಗ ಪೊಲೀಸರ ದತ್ತಾಂಶದಲ್ಲಿ ಆ ಬೆರಳು ಮುದ್ರೆ ಇರುವುದು ಕಂಡು ಬಂದಿದೆ.
ಬಳಿಕ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಆತ ತನ್ನ ಹೆಸರು ಲಕ್ಷ್ಮಣ್, ಪೀಣ್ಯ 2ನೇ ಹಂತದ ಬೇಕರಿವೊಂದರಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿದ್ದಾನೆ.ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ 9 ವರ್ಷಗಳ ಹಿಂದೆ ದರೋಡೆಗೆ ಸಂಚು ಪ್ರಕರಣ ದಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದು ಹೊರಗೆ ಬಂದು ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿ ಕೊಂಡಿರುವ ವಿಚಾರ ಗೊತ್ತಾಗಿದೆ.
ಬಳಿಕ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ನೀಡಿ, ಆರೋಪಿ ಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.