Advertisement

ನದಿಗಳ ಜೋಡಣೆಗೆ ಯೋಜನೆ

10:39 AM Feb 21, 2018 | Team Udayavani |

ಇಂಡಿ: ದೇಶದಲ್ಲಿ ನೀರಿನ ಸಮಸ್ಯೆ ಇದೆ. ನದಿಗಳ ಜೋಡಣೆ ಕುರಿತು ಈಗಾಗಲೇ ಯೋಜನೆ ತಯಾರಿಸಲಾಗುತ್ತಿದೆ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತೀನ್‌ ಗಡ್ಕರಿ ಹೇಳಿದರು. ತಾಲೂಕಿನ ಝಳಕಿ ಗ್ರಾಮದಲ್ಲಿ ವಿಜಯಪುರ-ಸೊಲ್ಲಾಪುರ ಚತುಷ್ಪಥ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

Advertisement

ಗೋದಾವರಿ ನದಿಯಿಂದ ಸುಮಾರು ಮೂರು ಸಾವಿರ ಟಿಎಂಸಿ ನೀರು ಸಮುದ್ರದ ಪಾಲಾಗುತ್ತಿದೆ. ಅದನ್ನು ರಕ್ಷಿಸಿ ಉಪಯೋಗಿಸಿಕೊಂಡರೆ ಗುಜರಾತ, ಕರ್ನಾಟಕ, ಆಂಧ್ರ, ತೆಲಂಗಾಣ, ಗೋವಾ ರಾಜ್ಯಗಳಿಗೆ ನೀರಾವರಿಗೆ ಅನುಕೂಲವಾಗಲಿದೆ ಎಂದರಲ್ಲದೇ ಗಂಗಾ-ಕಾವೇರಿ ನದಿ ಜೋಡಿಸಲು ಶ್ರಮಿಸುವುದಾಗಿ ತಿಳಿಸಿದರು.

ನದಿ ಜೋಡಣೆ ಮೊದಲು ಸ್ಥಳೀಯವಾಗಿ ನೀರನ್ನು ರಕ್ಷಿಸಿ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಸಣ್ಣ ನಾಲೆ, ನದಿ, ಹಳ್ಳ, ಕೆರೆಯ ನೀರನ್ನು ರಕ್ಷಿಸಿಕೊಳ್ಳಬೇಕು. ನೀರು ಇಂಗುವಂತೆ ವ್ಯವಸ್ಥೆ ಮಾಡಬೇಕು. ಹಳ್ಳ-ಕೊಳ್ಳಗಳಿಗೆ ಬಾಂದಾರು ನಿರ್ಮಿಸಿ ನೀರು ಇಂಗಿಸಬೇಕು. ದೇಶದಲ್ಲಿ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದಂತಾಗಿದೆ. ಇದಕ್ಕೆ ಜಾಗತೀಕರಣ ಮಾರುಕಟ್ಟೆಯೇ ಕಾರಣವಾಗಿದೆ. ರೈತರು ಬಯೋ ಡಿಸೆಲ್‌ ತಯಾರಿಸುವ ಬೆಳೆ ಬೆಳೆಯಬೇಕಿದೆ ಎಂದರು.

ವಿಜಯಪುರ-ಸೊಲ್ಲಾಪುರ ಚತುಷ್ಪಥ ಕಾಮಗಾರಿ 2012ರಲ್ಲಿ ಆರಂಭವಾಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಆರಂಭವಾಗಲಿಲ್ಲ. ಈಗ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದ್ದು, ಕಾಮಗಾರಿ ಆರಂಭವಾಗಲಿದೆ. ಕಾಮಗಾರಿಗೆ ಎರಡು ವರ್ಷ ಆರು ತಿಂಗಳು ಕಾಲಾವಕಾಶ ನೀಡಲಾಗಿದ್ದು ಒಂದೂವರೆ ವರ್ಷದ ಅವಧಿಯಲ್ಲೇ ಕಾಮಗಾರಿ ಮುಗಿಸಿಕೊಡುವ ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಐವತ್ತು ಲಕ್ಷ ಕೋಟಿ ರೂ. ಕಾಮಗಾರಿ ಆರಂಭಿಸಲಾಗಿದೆ. ಮುಂಬೈ ನಗರದಲ್ಲಿ ನೀರಿನಲ್ಲಿ ಚಲಿಸುವ
ಬಸ್‌ ಆರಂಭಿಸಲಾಗಿದೆ. ವಿಜಯಪುರ ಜಿಲ್ಲೆಯ ಕೆರೆಗಳು ಹಾಗೂ ನದಿಗಳಿಂದ ವಿಜಯಪುರದ ಜನತೆ ದೆಹಲಿಗೆ ಪ್ರಯಾಣ ಬೆಳೆಸುವಂತೆ ಮಾಡುವುದಾಗಿ ಹೇಳಿದರು. ಇದರಿಂದ ಏರ್‌ಪೋರ್ಟ್‌ ಅವಶ್ಯಕತೆ ಬೀಳುವುದಿಲ್ಲ. ನೀರಿನಲ್ಲಿ ಇಳಿಯುವ ವಿಮಾನಗಳು ಬರಲಿವೆ. ವಾಟರ್‌ ಫೋರ್ಟ್‌ಗಳು ನಿರ್ಮಾಣವಾಗಲಿವೆ. ಇದನ್ನು ನಮ್ಮ ಸರ್ಕಾರ
ಸಾಧಿಸಿ ತೋರಿಸಲಿದೆ ಎಂದರು.

Advertisement

ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ ಮಾತನಾಡಿ, ಗಡ್ಕರಿ ಅವರು ಮುಂಬರುವ ದಿನಗಳಲ್ಲಿ ಕರ್ನಾಟಕಕ್ಕೆ 2 ಲಕ್ಷ ಕೋಟಿ ರೂ. ಮೌಲ್ಯದ ರಸ್ತೆಗಳನ್ನು ನಿರ್ಮಿಸಲಿದ್ದಾರೆ. ಭಾರತದ ಎಲ್ಲ 32 ನದಿಗಳನ್ನು ಜೋಡಿಸಬೇಕೆಂಬುದು ನನ್ನ ಬೇಡಿಕೆಯಾಗಿದೆ. ದೇಶದ 32 ನದಿಗಳನ್ನು ಜೋಡಿಸಿ ಸುಜಲಾಂ ಸುಫಲಾಂ ಮಾಡಬೇಕಿದೆ. ಎಲ್ಲ ನದಿಗಳ ಜೋಡಣೆ ಮೋದಿ ಅವರ ಕನಸಾಗಿದೆ ಎಂದರು.

ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸಂಸದ ಪ್ರಹ್ಲಾದ ಜೋಶಿ
ಮಾತನಾಡಿದರು.ಶಾಸಕ ರಮೇಶ ಭೂಸನೂರ, ಎಂಎಲ್‌ಸಿ ಅರುಣ ಶಹಾಪುರ, ಬಸವನಗೌಡ ಪಾಟೀಲ (ಯತ್ನಾಳ),
ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ, ಜಿಲ್ಲಾಧ್ಯಕ್ಷ ವಿಠ್ಠಲ ಕಟಕದೋಂಡ, ಚಂದ್ರಶೇಖರ ಕವಟಗಿ, ಬಿಜೆಪಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ, ರವಿಕಾಂತ ಬಗಲಿ, ದಯಾಸಾಗರ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಪಾಪು ಕಿತ್ತಲಿ, ಶೀಲವಂತ ಉಮರಾಣಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next