Advertisement

ಯೋಜನೆ ಅನುಷ್ಠಾನ: ಅನುದಾನದ ಕ್ರಿಯಾಯೋಜನೆಗೆ ಅಸ್ತು

09:04 PM Feb 24, 2020 | Team Udayavani |

ತುಮಕೂರು: 2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಸೇರಿ ಜಿಲ್ಲೆಯಲ್ಲಿ 34 ಇಲಾಖೆಗಳ ಮೂಲಕ ಕೈಗೊಳ್ಳಲಿರುವ ಪ್ರಸ್ತಾಪಿತ ಯೋಜನೆಗಳಿಗೆ ಅಗತ್ಯವಿರುವ 3,95,504.50 ರೂ. ಅನುದಾನದ ಕ್ರಿಯಾಯೋಜನೆಗೆ ಜಿಲ್ಲಾ ಯೋಜನಾ ಸಮಿತಿ ಒಪ್ಪಿಗೆ ನೀಡಿತು.

Advertisement

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷ, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ, ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಆಯಾಯ ಇಲಾಖೆಗಳ ಮೂಲಕ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಕೈಗೊಳ್ಳಬೇಕಾಗಿರುವ ಯೋಜನೆಗಳ ಸಂಪೂರ್ಣ ಅನುಷ್ಠಾನಕ್ಕೆ ಅಗತ್ಯವಿರುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.

16 ಲಕ್ಷ ರೂ. ಅಗತ್ಯವಿದೆ: ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯ ಕ್ಷೇತ್ರ ನೀರು ನಿರ್ವಹಣೆ ಕಾರ್ಯಕ್ರಮದಡಿ ತುಂತುರು ನೀರಾವರಿ ಘಟಕಗಳ ವಿತರಣೆಗೆ 2019-20ನೇ ಸಾಲಿನಲ್ಲಿ 10.44 ಲಕ್ಷ ರೂ. ಆಯವ್ಯಯ ನೀಡಿದ್ದು, 5.15 ಲಕ್ಷ ರೂ. ಖರ್ಚು ಮಾಡಲಾಗಿದೆ. 2020-21ನೇ ಸಾಲಿನಲ್ಲಿ 16 ಲಕ್ಷ ರೂ. ಅಗತ್ಯವಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಬೇಡಿಕೆ ಅನುದಾನದ ಕುರಿತು ಮಾಹಿತಿ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ತುಂತುರು ನೀರಾವರಿ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಈ ಬಗ್ಗೆ ರೈತರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ಇಲ್ಲದಿದ್ದಲ್ಲಿ ಅನುದಾನ ಸಂಪೂರ್ಣವಾಗಿ ಸದ್ಬಳಕೆಯಾಗುವುದಿಲ್ಲ. ಕಳೆದ ಬಾರಿ ನೀಡಿರುವ ಅನುದಾನ ಸಂಪೂರ್ಣವಾಗಿ ಖರ್ಚು ಮಾಡದೆ, 2020-21ನೇ ಸಾಲಿನಲ್ಲಿ ಹೆಚ್ಚುವರಿ ಅನುದಾನ ಕೋರಿದರೆ ಅದಕ್ಕೆ ಸೂಕ್ತ ಕಾರಣ ನೀಡಬೇಕು ಎಂದು ತಿಳಿಸಿದರು.

ಬೇಡಿಕೆ ಅನುದಾನ ಮಾಹಿತಿ: ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಮಾತನಾಡಿ, ತೋಟಗಾರಿಕೆ ಇಲಾಖೆಯಡಿ 2020-21ನೇ ಸಾಲಿಗೆ ಪ್ರಸ್ತಾಪಿತ ಕಾರ್ಯಕ್ರಮಗಳಿಗೆ 8.484 ಲಕ್ಷ ರೂ. ಹಾಗೂ ಹೆಚ್ಚುವರಿಯಾಗಿ 2.866 ಲಕ್ಷ ರೂ. ಬೇಡಿಕೆ ಅನುದಾನದ ಬಗ್ಗೆ ಮಾಹಿತಿ ನೀಡಿದರು.

Advertisement

2020-21ನೇ ಸಾಲಿಗೆ ಸಮಾಜಕಲ್ಯಾಣ ಇಲಾಖೆ-8,759 ಲಕ್ಷ ರೂ., ಪಶುಪಾಲನಾ ಇಲಾಖೆ-4,458 ಲಕ್ಷ ರೂ., ಸಾರ್ವಜನಿಕ ಶಿಕ್ಷಣ-10,98,77 ಲಕ್ಷ ರೂ., ಆರೋಗ್ಯ ಇಲಾಖೆ-16,690 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-18,337 ಲಕ್ಷ ರೂ. ಹೇಮಾವತಿ ನಾಲಾ-113020 ಲಕ್ಷ ರೂ. ಸೇರಿ 34 ಇಲಾಖೆಗಳ ಒಟ್ಟು 39,5,504 ಲಕ್ಷ ರೂ. ಪ್ರಸ್ತಾಪಿತ ಅನುದಾನ ಕ್ರಿಯಾಯೋಜನೆಗೆ ಜಿಲ್ಲಾ ಯೋಜನಾ ಸಮಿತಿ ಒಪ್ಪಿಗೆ ನೀಡಿತು.

ಇದರ ಜೊತೆಗೆ 2020-21ನೇ ಸಾಲಿಗೆ ಹೆಚ್ಚುವರಿಯಾಗಿ ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ಪಶುಪಾಲನಾ ಸೇರಿ ವಿವಿಧ 27 ಇಲಾಖೆಗಳ 11,50,27 ಲಕ್ಷ ರೂ. ಪ್ರಸ್ತಾಪಿತ ಅನುದಾನಕ್ಕೆ ಸಮಿತಿಯಲ್ಲಿ ಚರ್ಚಿಸಿ ಒಪ್ಪಿಗೆ ಸೂಚಿಸಲಾಯಿತು.

ಶಾಸಕ ಜಯರಾಮ್‌, ವಿಧಾನಪರಿಷತ್‌ ಸದಸ್ಯ ತಿಪ್ಪೇಸ್ವಾಮಿ, ಜಿಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಾರದಾ, ಜಿಲ್ಲಾಧಿಕಾರಿ ಡಾ. ರಾಕೇಶ್‌ ಕುಮಾರ್‌, ಜಿಪಂ ಸಿಇಒ ಶುಭಾಕಲ್ಯಾಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೋನ ವಂಶಶಿಕೃಷ್ಣ, ಪಾಲಿಕೆ ಆಯುಕ್ತ ಟಿ.ಭೂಬಾಲನ್‌ ಸೇರಿ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಅಟಲ್‌ ಭೂಜಲ್‌ಗೆ 6 ತಾಲೂಕು ಆಯ್ಕೆ: ಅಟಲ್‌ ಭೂಜಲ್‌ ಯೋಜನೆಯಡಿ ಚಿಕ್ಕನಾಯಕನಹಳ್ಳಿ, ಮಧುಗಿರಿ, ಕೊರಟಗೆರೆ, ಶಿರಾ ಸೇರಿ 6 ತಾಲೂಕುಗಳು ಆಯ್ಕೆಯಾಗಿದ್ದು, ಈ ಬಗ್ಗೆ ಸಮನ್ವಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಪಂ ಸದಸ್ಯರಿಗೆ ತಾಲೂಕುವಾರು ತರಬೇತಿ ನೀಡಬೇಕಾಗಿದೆ. ಇದಕ್ಕಾಗಿ ತಾಲೂಕುವಾರು ದಿನಾಂಕ ನಿಗದದಿಪಡಿಸಿ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ಸೂಚಿಸಿದರು.

ಬರುವ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಹೇಮಾವತಿ ಜಲಾಶಯದಿಂದ ಇನ್ನೂ 8 ಟಿಎಂಸಿ ನೀರು ಪಡೆಯಬಹುದು. ಏಪ್ರಿಲ್‌, ಮೇನಲ್ಲಿ ನೀರಿನ ಸಮಸ್ಯೆ ಎದುರಾದರೆ ಜಲಾಶಯದಿಂದ ನೀರು ಪಡೆಯಲು ಕ್ರಮ ಕೈಗೊಳ್ಳಲಾಗುವುದು.
-ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next