Advertisement

ಯೋಜನೆ ಅನುಷ್ಠಾನಕ್ಕೆ ವೇಗ; ಬಜೆಟ್‌ ಕಾರ್ಯಕ್ರಮಗಳ ಆದೇಶ ಹೊರಡಿಸಲು ಮಾಸಾಂತ್ಯದ ಗಡುವು

01:31 AM May 05, 2022 | Team Udayavani |

ಬೆಂಗಳೂರು: ಬಜೆಟ್‌ ಘೋಷಣೆಗಳಿಗೆ ಸಂಬಂಧಿಸಿ ಈ ಮಾಸಾಂತ್ಯದೊಳಗೆ ಆದೇಶ ಹೊರಡಿಸಲು ಗಡುವು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇನ್ಮುಂದೆ ಪ್ರತೀ ತಿಂಗಳು ಹಣಕಾಸು ಸಹಿತ ಪ್ರಮುಖ ಇಲಾಖೆಗಳ ಪ್ರಗತಿ ಪರಿಶೀಲನೆಗೆ ತೀರ್ಮಾನಿಸಿದ್ದಾರೆ.

Advertisement

ಅಮಿತ್‌ ಶಾ ಬಂದು ಹೋದ ಬಳಿಕ ಆಡಳಿತ ಯಂತ್ರಕ್ಕೆ ಚುರುಕು ನೀಡಲು ಮುಂದಾಗಿರುವ ಸಿಎಂ, ಇಲಾ ಖಾ ವಾರು ಬಜೆಟ್‌ ಕಾರ್ಯ ಕ್ರಮಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದ್ದಾರೆ.

ಚುನಾವಣೆ ವರ್ಷವಾಗಿರುವ ಕಾರಣ ಬಜೆಟ್‌ ಕಾರ್ಯಕ್ರಮಗಳ ಅನುಷ್ಠಾನ ಅತೀ ಮುಖ್ಯ. ಸರಕಾರ ಹಾಗೂ ಪಕ್ಷಕ್ಕೆ ಒಳ್ಳೆಯ ಹೆಸರು ತರುವ ಕಾರ್ಯಕ್ರಮಗಳ ಅನು ಷ್ಠಾನಕ್ಕೆ ಆದ್ಯತೆ ನೀಡಿ ಎಂದು ಕೇಂದ್ರ ನಾಯಕರು ಸೂಚಿಸಿದ್ದಾರೆ.

ಈ ಹಿಂದೆ ಎಪ್ರಿಲ್‌ ಒಳಗೆ ಬಜೆಟ್‌ನಲ್ಲಿ ಘೋಷಿಸಿದ ಪ್ರಮುಖ ಯೋಜನೆಗಳಿಗೆ ಸಂಬಂಧಿಸಿ ಆದೇಶ ಹೊರಡಿಸಲು ಸೂಚಿಸಲಾಗಿ ತ್ತಾದರೂ ವಿವಿಧ ಕಾರಣಗಳಿಂದ ವಿಳಂಬವಾಗಿತ್ತು. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ ಬಜೆಟ್‌ ನಲ್ಲಿ ಘೋಷಿಸಿದ ಯೋಜನೆಗಳ ಜಾರಿಯನ್ನು ಡಿಸೆಂಬರ್‌ ಅಂತ್ಯ ದೊಳಗೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಕಾರ್ಯ ಕ್ರಮಗಳ ಅನುಷ್ಠಾನಕ್ಕೆ ಅಗತ್ಯವಾದ ಸಂಪನ್ಮೂಲ ಕ್ರೋಡೀಕರಣಕ್ಕೂ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖವಾಗಿ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಬರುವ ನಿಗಮಗಳಿಗೆ ಅನುದಾನ ಹಾಗೂ ದುರ್ಬಲ ವರ್ಗದವರಿಗೆ ರೂಪಿಸಿರುವ ಕಾರ್ಯಕ್ರಮಗಳಿಗೆ 2,225 ಕೋ. ರೂ. ಘೋಷಿಸಿದ್ದು, ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.
ಈ ಕಾರ್ಯಕ್ರಮಗಳಿಂದ ದಲಿತ, ಹಿಂದುಳಿದ, ಅಲ್ಪಸಂಖ್ಯಾಕ ಸಮುದಾಯದ ಬಡ ವರ್ಗಕ್ಕೆ ಹೆಚ್ಚು ಅನುಕೂಲವಾಗುವುದರಿಂದ ಚುನಾವಣೆಗೂ ಲಾಭವಾಗಬಹುದು ಎಂಬ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.

Advertisement

ಬಜೆಟ್‌ನಲ್ಲಿ ಘೋಷಿಸಿರುವ ವಿವಿಧ ಅಭಿವೃದ್ಧಿ ಮತ್ತು ಜನಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿ ಆದೇಶ ಹೊರಡಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆೆ.

ಹೆಚ್ಚುವರಿ ಗುರಿ
2021-22ನೇ ಸಾಲಿನಲ್ಲಿ ಸಂಪನ್ಮೂಲ ಕ್ರೋಡೀಕರಣ ವಿಚಾರದಲ್ಲಿ ಬಜೆಟ್‌ ಗುರಿಯ ಶೇ.99ರಷ್ಟು ಸಾಧನೆಯಾಗಿದ್ದು, ಕೊನೆಯ ಆರು ತಿಂಗಳಲ್ಲಿ ಶೇ.65ರಷ್ಟು ಸಂಗ್ರಹವಾಗಿದೆ. ಕಳೆದ ವರ್ಷ ಹಣಕಾಸು ಇಲಾಖೆ ಅಧಿಕಾರಿಗಳು ತೆರಿಗೆ ಸಂಗ್ರಹ ಹೆಚ್ಚಳ ಗುರಿ ಕಷ್ಟವಾಗಬಹುದು ಎಂದು ಅಕ್ಟೋಬರ್‌-ನವೆಂಬರ್‌ ತಿಂಗಳಲ್ಲಿ ಅಂದಾಜಿಸಿದ್ದರು. ಆದರೆ, ಖುದ್ದು ಸಿಎಂ ಕೆಲವು ಸೋರಿಕೆಗಳ ಬಗ್ಗೆ ಪ್ರಸ್ತಾಪಿಸಿ ಅವುಗಳನ್ನು ತಡೆಗಟ್ಟಲು ಸೂಚಿಸಿದ್ದರು. ಹೀಗಾಗಿ, ತೆರಿಗೆ ಸಂಗ್ರಹ ಗುರಿ ಮುಟ್ಟಲು ಸಾಧ್ಯವಾಯಿತು.2022-23ನೇ ಸಾಲಿನಲ್ಲಿ ಕಳೆದ ವರ್ಷಕ್ಕಿಂತ 20,545 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹದ ಗುರಿ ನೀಡಲಾಗಿದೆ. ವಾಣಿಜ್ಯ ತೆರಿಗೆ ಮೂಲದಿಂದ 77,010 ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕದಿಂದ 15 ಸಾವಿರ ಕೋಟಿ ರೂ., ಅಬಕಾರಿಯಿಂದ 29 ಸಾವಿರ ಕೋಟಿ ರೂ. ಹಾಗೂ ಸಾರಿಗೆ ಇಲಾಖೆಯಿಂದ 8,007 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ನೀಡಲಾಗಿದೆ.

ಗ್ರಾ.ಪಂ. ಕಾಮ ಗಾರಿ ಜೂನ್‌ಗೆ ಮುಗಿಸಿ
ನರೇಗಾ ಯೋಜನೆಯಡಿ ರೈತರ ಹೊಲಗಳಿಗೆ ಹೋಗುವ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುವುದು ಹಾಗೂ ಅಮೃತ್‌ ಗ್ರಾಮ ಪಂಚಾಯತ್‌ ಯೋಜನೆ ಯಡಿ 750 ಗ್ರಾಮ ಪಂ.ಗಳಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಜೂನ್‌ ಒಳಗೆ ಮುಗಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ.

ಬಜೆಟ್‌ ಘೋಷಣೆಯ ಕಾರ್ಯಕ್ರಮ ಅನುಷ್ಠಾನ ನಿಟ್ಟಿನಲ್ಲಿ ಬುಧವಾರ ವಿವಿಧ ಇಲಾ ಖೆ ಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ರೈತರ ಹೊಲಗಳಿಗೆ ಹೋಗುವ ರಸ್ತೆಯ ಅಭಿವೃದ್ಧಿಗಾಗಿ ಪ್ರತಿ ತಾಲೂಕಿಗೆ ಗರಿಷ್ಠ 2 ಕಿ.ಮೀ. ನಂತೆ ಗಡಿ ಗುರುತಿಸಿ ಡಿಸೆಂಬರ್‌ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.

ಅಮೃತ್‌ ಗ್ರಾಮ ಪಂಚಾಯತ್‌ ಯೋಜನೆಯಡಿ ಗ್ರಾಮ ಪಂಚಾಯತ್‌ಗಳು ತಲಾ 25 ಲಕ್ಷ ರೂ.ಗಳ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗಳಲ್ಲಿ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಗ್ರಾಮೀಣ ಹಾಗೂ ದೇಸೀ ಕ್ರೀಡೆಗಳನ್ನು ಉತ್ತೇಜಿಸಲು ಪ್ರಮುಖವಾಗಿ ಕಬಡ್ಡಿ , ಖೋಖೊ , ಕುಸ್ತಿ, ಎತ್ತಿನಗಾಡಿ ಸ್ಪರ್ಧೆಗಳು ಸಹಿತ ಒಟ್ಟು ಹತ್ತು ಗ್ರಾಮೀಣ ಕ್ರೀಡೆಗಳನ್ನು ಗುರುತಿಸಿ 2-3 ತಿಂಗಳ ಕಾಲ ಖಾಸಗಿ ಪ್ರಾಯೋಜಕತ್ವದಲ್ಲಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಜಾತ್ರೆಯ ಮಾದರಿಯಲ್ಲಿ ಕ್ರೀಡಾಕೂಟ ಆಯೋಜಿಸುವಂತೆ ತಿಳಿಸಿದರು. ಸ್ವಂತ ಕಟ್ಟಡಗಳಿಲ್ಲದ 1,000 ಅಂಗನವಾಡಿ ಗಳಿಗೆ ನರೇಗಾ ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಿರ್ಮಿ ಸಲು ಉದ್ದೇಶಿಸಿರುವ ಕಟ್ಟಡಗಳನ್ನು ಇಲಾಖೆಗಳ ಸಮನ್ವಯ ದೊಂದಿಗೆ ಗುರುತಿಸಿ ಕ್ಷಿಪ್ರಗತಿಯಲ್ಲಿ ಕೈಗೊಳ್ಳಲು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ವತಿಯಿಂದ ಪ್ರತೀ ಘಟಕಕ್ಕೆ ಒದಗಿಸುವ
5 ಲಕ್ಷ ರೂ.ಗಳ ಮೊತ್ತವನ್ನು ಕ್ರಿಯಾ ಯೋಜನೆಗಳಲ್ಲಿ ಕಡ್ಡಾಯವಾಗಿ ನಮೂದಿಸಲು ಪಿಡಿಒಗಳಿಗೆ ನಿರ್ದಿಷ್ಟ ಸೂಚನೆ ನೀಡಬೇಕು ಎಂದರು.

-ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next