Advertisement

ವಿಜಯನಗರ ಅಭಿವೃದ್ಧಿಗೆ ಕ್ರಿಯಾಯೋಜನೆ

01:12 PM May 02, 2022 | Team Udayavani |

ಹೂವಿನಹಡಗಲಿ: ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 224 ಕೋಟಿ ರೂಗಳ ಕ್ರಿಯಾಯೋಜನೆ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯ ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

Advertisement

ಶನಿವಾರ ಮಾಜಿ ಶಾಸಕ ಬಿ. ಚಂದ್ರನಾಯ್ಕ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಜಿಲ್ಲೆಯ ಎಲ್ಲ ತಾಲೂಕುಗಳಿಗೆ ವಿಶೇಷವಾಗಿ ಮೈನಿಂಗ್‌ ಫಂಡ್‌, ಕೆಕೆಆರ್‌ಡಿಬಿ ಫಂಡ್‌ನ‌ಲ್ಲಿ ಕ್ರಿಯಾಯೋಜನೆ ರೂಪಿಸಲು ಸೂಚಿಸಲಾಗಿದೆ.

ಜಿಲ್ಲೆಯ ಯಾವ ತಾಲೂಕು 40% ಹೆಚ್ಚು ಮೈನಿಂಗ್‌ ಬಾಧಿತ ತಾಲೂಕುಗಳಾಗಿರುತ್ತವೆಯೋ ಅಂಥ ತಾಲೂಕುಗಳಿಗೆ ಸುಮಾರು 40%ರಷ್ಟು ಮೈನಿಂಗ್‌ ಅನುದಾನವನ್ನು ಖರ್ಚು ಮಾಡಲಾಗುವುದು. ಜನತೆಗೆ ಮೂಲ ಸೌಕರ್ಯಗಳನ್ನೊಳಗೊಂಡ ಕುಡಿಯುವ ನೀರು, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಪ್ರತಿ ತಾಲೂಕಿನಲ್ಲಿಯೂ ಸರ್ಕಾರಿ ಶಾಲೆಗಳನ್ನು ಗಮನದಲ್ಲಿಟ್ಟುಕೊಂಡು ಗ್ರಂಥಾಲಯ, ಕ್ರೀಡೆಗಳಿಗೆ ಒತ್ತು ನೀಡಲಾಗುತ್ತದೆ. ಇನ್ನೂ ತಾಲೂಕಿನಲ್ಲಿನ ಅಂಗನವಾಡಿ, ರಸ್ತೆ ಕುರಿತು ಈಗಾಗಲೇ ಹೊಸಪೇಟೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದರು. ಹಂಪಿಯನ್ನು ಐತಿಹಾಸಿಕ ಕೇಂದ್ರವನ್ನಾಗಿ, ಸಾಂಸ್ಕೃತಿಕವಾಗಿ ಪ್ರವಾಸಿಗರಿಗೆ ಹೆಚ್ಚಿನ ಮಾಹಿತಿ ನೀಡಲು ಹಂಪಿಯಲ್ಲಿ ಒಂದು ಪ್ರವಾಸಿ ಮಾಹಿತಿ ಕೇಂದ್ರವನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದರು. ಹಡಗಲಿ ತಾಲೂಕಿನಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಸಮಸ್ಯೆ ಕಂಡು ಬಂದಿದ್ದು ರೈತರಿಗೆ ಅನುಕೂಲವಾಗಲು ರೈತ ಸಂಪರ್ಕ ಕೇಂದ್ರಗಳನ್ನು ಸುಸಜ್ಜಿತವಾದ ರೀತಿಯಲ್ಲಿಡಲು ಯೋಚನೆ ಮಾಡಲಾಗಿದೆ.

ಕಳೆದ ಭಾರಿ ಜಿಲ್ಲೆಯಲ್ಲಿ ಮೈನಿಂಗ್‌ ಫಂಡ್‌ ನಿಂದಾಗಿ 1113 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು ಇದರಲ್ಲಿ ಈಗಾಗಲೇ 580 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Advertisement

ದೈವ ಸಂಕಲ್ಪ ಯೋಜನೆ

ರಾಜ್ಯದಲ್ಲಿ ದೇವಸ್ಥಾನಗಳನ್ನು ಅಭಿವೃದ್ಧಿಗೊಳಿಸಲು ದೈವ ಸಂಕಲ್ಪ ಎನ್ನುವ ಹೊಸ ಯೋಜನೆ ಜಾರಿ ಮಾಡಲಾಗುತ್ತಿದ್ದು ಅವುಗಳಲ್ಲಿ ದೇವಸ್ಥಾನಗಳನ್ನು 3 ಭಾಗಗಳನ್ನಾಗಿ ಮಾಡಲಾಗುವುದು. ಪ್ರಥಮವಾಗಿ 25 ಲಕ್ಷಕ್ಕಿಂತಲೂ ಹೆಚ್ಚಿನ ಆದಾಯವಿರುವ ದೇವಸ್ಥಾನಗಳನ್ನು ಎ ಗ್ರೇಡ್‌ ದೇವಸ್ಥಾನಗಳೆಂದು. ನಂತರದಲ್ಲಿ ಬ. ಹಾಗೂ ಸಿ. ಗ್ರೇಡ್‌ ದೇವಸ್ಥಾನಗಳೆಂದು ವರ್ಗ ಮಾಡಲಾಗಿದ್ದು ಗ್ರಾಮೀಣ ಪ್ರದೇಶದಲ್ಲಿರುವ ಸಿ ಗ್ರೇಡ್‌ ದೇವಸ್ಥಾನಗಳ ಅಭಿವೃದ್ಧಿಗೂ ಗಮನ ನೀಡಲಾಗುವುದು ಎಂದರು. ರಾಜ್ಯದಲ್ಲಿನ ಜನತೆಗೆ ಈ ಭಾರಿ ಕಾಶಿಯಾತ್ರೆಗೆ ಹೆಚ್ಚಿನ ಅನುಕೂಲ ಕೈಗೊಳ್ಳಲಾಗುವುದು ಎಂದರು.

ಚಂದ್ರನಾಯ್ಕ ಗೆಲುವಿಗೆ ಶ್ರಮ

2023ರ ವಿಧಾನಸಭಾ ಚುನಾವಣೆ ಕುರಿತು ಮಾತನಾಡಿದ ಸಚಿವೆ ನಾವುಗಳು ಚುನಾವಣೆ ಎದುರಿಸಲು ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇದ್ದಲ್ಲಿ ಅವುಗಳನ್ನು ಸರಿಪಡಿಸಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುವುದು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಡಗಲಿ ಕ್ಷೇತ್ರದಿಂದ ನಮ್ಮ ಪಕ್ಷದ ಅಭ್ಯರ್ಥಿ ಬಿ. ಚಂದ್ರನಾಯ್ಕ ಅವರನ್ನು ಗೆಲ್ಲಿಸುವುದು ನಮ್ಮ ಗುರಿ ಎಂದರು. ಮಾಜಿ ಶಾಸಕ ಬಿ. ಚಂದ್ರನಾಯ್ಕ, ಪಕ್ಷದ ಮುಖಂಡರುಗಳಾದ ಸೋಗಿ ವೀರಭದ್ರಪ್ಪ, ವರ್ಕನಳ್ಳಿ ಮೋಹನರೆಡ್ಡಿ, ಪಿ. ವಿಜಯ್‌ ಕುಮಾರ್‌, ಈಟಿ ಮಾಲತೇಶ್‌, ಮಹಿಳಾ ಸಂಘಟನೆಯ ಭಾಗ್ಯಮ್ಮ, ವಿಜಯಲಕ್ಷ್ಮೀ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next