ಬೆಳಗಾವಿ: ಹುಬ್ಬಳ್ಳಿ, ಬೆಳಗಾವಿ ಹಾಗೂ ಧಾರವಾಡ ತ್ರಿವಳಿ ನಗರ ಜೋಡಿಸುವ ಮೂಲಕ ಜನರಿಗೆ ಅನುಕೂಲ ಮಾಡುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಹೊಸ ರೈಲ್ವೆ ಯೋಜನೆ ಕುರಿತು ಅಧ್ಯಯನ ನಡೆಸಲಾಗುತ್ತಿದೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯಿಂದ ಬಹಳಷ್ಟು ಜನರಿಗೆ ಅನುಕೂಲಕರವಾಗಲಿದೆ. ವೇಗವಾಗಿ ಈ ನಗರಗಳು ಬೆಳೆಯುತ್ತಿರುವುದರಿಂದ ಆದಷ್ಟು ಬೇಗ ಹೊಸ ಯೋಜನೆ ಅನುಷ್ಠಾನಗೊಳಿಸಲಾಗುವುದು. ಇದರಿಂದ ಯುವಕರು, ಸಾರ್ವಜನಿಕರು ಉದ್ಯೋಗಕ್ಕಾಗಿ ಓಡಾಡಲು ಈ ನಗರಗಳು ಸೇತುವೆಯಾಗಿ ಕಾರ್ಯ ನಿರ್ವಹಿಸಲಿವೆ ಎಂದರು.
ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ರಿಂಗ್ ರೋಡ್ ನಿರ್ಮಾಣ ಮಾಡಲಾಗುತ್ತಿದ್ದು, ಯೋಜನೆಗೆ ಅನೇಕ ರೈತರು ಜಮೀನು ನೀಡುತ್ತಿದ್ದಾರೆ. ಕೆಲ ರೈತರ ಜಮೀನುಗಳ ಸಮಸ್ಯೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಸಮಸ್ಯೆ ಬಗೆಹರಿಸಿ ಅಧಿಕಾರಿಗಳು ಅನುಕೂಲ ಮಾಡಿಕೊಡಬೇಕು. ರಿಂಗ್ ರೋಡ್ ನಿರ್ಮಾಣಗೊಂಡರೆ ಬೆಳಗಾವಿಯಲ್ಲಿಯ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತದೆ ಎಂದರು.
ರಿಂಗ್ ರೋಡ್ ನಿರ್ಮಾಣಕ್ಕೆ ಅಡಚಣೆ ಆಗುತ್ತಿರುವ ರೈತರ ಜಮೀನುಗಳ ಕುರಿತು ರಾಜ್ಯಸಭಾ ಸದಸ್ಯ ಡಾ| ಪ್ರಣಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮೇಯರ್ ಹಾಗೂ ಪಾಲಿಕೆ ಸದಸ್ಯರು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಇತಿಶ್ರೀ ಹೇಳಲಾಗುವುದು ಎಂದರು.
ದಂಡು ಮಂಡಳಿ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಕುರಿತು ಪ್ರತಿಕ್ರಿಯಿಸಿದ ಸಚಿವ ಸುರೇಶ ಅಂಗಡಿ, ದಂಡು ಮಂಡಳಿಗೆ ತನ್ನದೇ ಆದ ಕಾನೂನಿದೆ. ಅವರಿಂದ ಪಡೆದ ಜಮೀನನ್ನು ಮತ್ತೆ ಹಿಂದಿರುಗಿಸಬೇಕಾಗುತ್ತದೆ. ಈ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆದು ದಂಡು ಮಂಡಳಿಗೆ ಜಮೀನು ನೀಡಬೇಕೆಂದು ಕೊರಲಾಗಿದೆ. ಈ ಪ್ರದೇಶದಲ್ಲಿ ಕೆಲವು ನಿಬಂಧನೆಗಳಿದ್ದು, ಅವುಗಳನ್ನು ಹಂತ-ಹಂತವಾಗಿ ರಾಜ್ಯ ಸರ್ಕಾರ ಮಾತುಕತೆ ಮೂಲಕ ಬಗೆ ಹರಿಸಲಿದೆ. ಆದಷ್ಟು ಬೇಗ ಮುಂದಿನ ದಿನಗಳಲ್ಲಿ ಕಂಟೋನಮೆಂಟ್ ವ್ಯಾಪ್ತಿಯಲ್ಲಿಯೂ ಕಾಮಗಾರಿಗಳು ನಡೆಯಲಿವೆ ಎಂದು ತಿಳಿಸಿದರು.
ದಂಡು ಮಂಡಳಿ ಪ್ರದೇಶದಲ್ಲಿ ಶನಿವಾರ ಸ್ಮಾರ್ಟ್ ಸಿಟಿ ಯೋಜನೆಗೆ ದಂಡು ಮಂಡಳಿಯ ಸಹಕಾರ ಹಾಗೂ ಕಂಟೋನಮೆಂಟ್ ಪ್ರದೇಶದಲ್ಲಿ ಕೇಂದ್ರ ಸರ್ಕಾರದಿಂದ ನಡೆಯುವ ಕಾಮಗಾರಿ ಕುರಿತು ಸಚಿವ ಸುರೇಶ ಅಂಗಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ, ಬ್ರಿಗೇಡಿಯರ್ ಗೋವಿಂದ ಕಾಲವಾಡ, ಶಾಸಕ ಅನಿಲ ಬೆನಕೆ, ಕಂಟೋನಮೆಂಟ್ ಸದಸ್ಯರಾದ ಸಾಜೀದ್ ಶೇಖ, ನಿರಂಜನಾ ಅಷ್ಟೇಕರ, ಅಲ್ಲಾದ್ದಿನ್ ಕಿಲ್ಲೇದಾರ, ರಿಜ್ವಾನ್ ಬೇಪಾರಿ, ವಿಕ್ರಮ ಪುರೋಹಿತ, ದಂಡುಮಂಡಳಿ ಸಿಇಒ ಸೇರಿದಂತೆ ಇತರರು ಇದ್ದರು.