ಬೀಳಗಿ: ಹೂಳು ತೆಗೆದು ಕೆರೆಗಳನ್ನು ರಕ್ಷಣೆ ಮಾಡುವುದರಿಂದ ಅಂತರ್ಜಲ ಸಂರಕ್ಷಣೆಗೆ ಸಹಕಾರಿ ಆಗಲಿದೆ. ಕೆರೆಕಟ್ಟೆಗಳ ಸಂರಕ್ಷಣೆ ಅಗತ್ಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪಳ ಪ್ರಾದೇಶಿಕ ನಿರ್ದೇಶಕ ಪಿ.ಕೆ. ಪುರುಷೋತ್ತಮ ಹೇಳಿದರು.
ಸುನಗ ಗ್ರಾಮದ ದೈತೇಶ್ವರ ಕೆರೆ ಬಳಕೆದಾರರ ಸಂಘ, ಗ್ರಾಪಂ ಸಹಕಾರದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ನಮ್ಮೂರು ನಮ್ಮ ಕೆರೆ ಯೋಜನೆಯಡಿ 8 ಲಕ್ಷ ರೂ. ಅನುದಾನದಲ್ಲಿ ಗ್ರಾಮದ ದೈತೇಶ್ವರ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೆರೆಕಟ್ಟೆಗಳ ಆತಿಕ್ರಮಣದಿಂದ ಪ್ರಸ್ತುತ ಕೆರೆಗಳು ಮಾಯವಾಗಿವೆ. ಕೆರೆಗಳೆಂದರೆ ಕೇವಲ ಕಾಗದದ ದಾಖಲಾತಿಯಲ್ಲಿ ಮಾತ್ರ ತನ್ನ ಅಸ್ತಿತ್ವ ಉಳಿಸಿಕೊಂಡಿವೆ. ಕೆರೆಕಟ್ಟೆಗಳ ಅತಿಕ್ರಮಣಕ್ಕೆ ಜನಸಂಖ್ಯಾ ಸ್ಫೋಟ ಹಾಗೂ ಮನುಷ್ಯನ ದುರಾಸೆಯೇ ಮೂಲ ಕಾರಣವೆಂದು ವಿಷಾದಿಸಿದರು. ನೀರು ನಮ್ಮ ಪ್ರಾಣ. ಜೀವಜಲ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಅಂತರಗಂಗೆಯ ಅಸ್ಥಿತ್ವಕ್ಕಾಗಿ ಪ್ರತಿ ಗ್ರಾಮಗಳ ಕೆರೆಗಳನ್ನು ಪುನರುಜ್ಜೀವನಗೊಳಿಸುವುದು ಅವಶ್ಯಕವಾಗಿದೆ. ಕೆರೆ ಹೂಳೆತ್ತುವ ಅನುದಾನ ಸದ್ಭಳಕೆ ಮಾಡಿಕೊಂಡು ಕಾಮಗಾರಿಯನ್ನು ತಿಂಗಳಲ್ಲಿ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ 9 ಕೆರೆಗಳ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ. ಬರುವ ದಿನಗಳಲ್ಲಿ ಜಿಲ್ಲೆಯ ಒಟ್ಟು 25 ಕೆರೆಗಳ ಹೂಳೆತ್ತುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಸಾಮಾಜಿಕ ಹೋರಾಟಗಾರ ಪ್ರಕಾಶ ಅಂತರಗೊಂಡ ಮಾತನಾಡಿ, ಸಾಮಾಜಿಕ ಜವಾಬ್ದಾರಿಯಿದ್ದರೆ ಮಾತ್ರ ಸರಕಾರಿ ಯೋಜನೆ ಯಶಸ್ವಿಯಾಗುತ್ತವೆ. ಕೆರೆ, ಹಳ್ಳಗಳು ದೇವಾಲಯವಿದ್ದಂತೆ. ಅವುಗಳನ್ನು ದುರಾಸೆಯಿಂದ ಸಾರ್ವಜನಿಕರು ಒತ್ತುವರಿ ಮಾಡಿಕೊಳ್ಳದೆ ಅವುಗಳ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದರು.
ಸಿದ್ಧಲಿಂಗ ಸ್ವಾಮೀಜಿ, ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎಂ.ಡಿ. ಮಹೇಶ, ಭಾರತೀಯ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ವಿ.ಜಿ. ರೇವಡಿಗಾರ, ಕಸಾಪ ಅಧ್ಯಕ್ಷ ಕಿರಣ ಬಾಳಗೋಳ, ಗ್ರಾಪಂ ಉಪಾಧ್ಯಕ್ಷ ಮಲ್ಲಪ್ಪ ತೋಳಮಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ನಿರ್ದೇಶಕ ಡಿ.ಎಂ.ಸಾಹುಕಾರ ಇದ್ದರು.