ಹುಣಸೂರು: ಜಲಜೀವನ ಮಿಷನ್ ಯೋಜನೆಯಡಿ ಕೆ.ಆರ್.ಎಸ್.ನೀರು ಪೂರೈಸುವ ಬಿಳಿಕೆರೆ ಭಾಗದ 23 ಹಳ್ಳಿ, ಕಾವೇರಿ ನೀರು ಪೂರೈಸುವ ಗಾವಡಗೆರೆ ಹೋಬಳಿಯ 5 ಹಳ್ಳಿ ಸೇರಿದಂತೆ 28 ಹಳ್ಳಿಗಳಲ್ಲಿ ನೀರಿನ ಮಿತ ಬಳಕೆಗಾಗಿ 4,57 ಕೋಟಿ ವೆಚ್ಚದಡಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ನೀರಿನ ಯೋಜನೆ ಹಾಗೂ ಗ್ರಾಮೀಣಾಭಿವೃದಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪ್ರತಿ ಮನೆಗೂ ಟ್ಯಾಪ್, ಮೀಟರ್ ಅಳವಡಿಸಿ ಸಮರ್ಪಕವಾಗಿ ನೀರು ಪೂರೈಸುವುದು. ಚಿಕ್ಕ ಬೀಚನಹಳ್ಳಿಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಸೇರಿದಂತೆ ಒಟ್ಟಾರೆ 4,57 ಕೋಟಿ ರೂ. ಪ್ರಸ್ತಾವನೆಯನ್ನು ಜಿಪಂ ಮೂಲಕ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಯೋಜನೆಯಡಿ ಒಬ್ಬ ವ್ಯಕ್ತಿಗೆ ದಿನಕ್ಕೆ 55 ಲೀಟರ್ ನೀರು ಪೂರೈಸಲಾಗುವುದು. ಒಟ್ಟಾರೆ ವರ್ಷಕ್ಕೆ 10 ಸಾವಿರ ಲೀಟರ್ ನೀರು ಉಚಿತವಾಗಿ ನೀಡಲಾಗುವುದು. ಹೆಚ್ಚಿನ ನೀರು ಬಳಕೆಗೆ ಕಂದಾಯ ಪಾವತಿಸಬೇಕಾಗುತ್ತದೆ ಎಂದು ನೀರು ಯೋಜನೆ ವಿಭಾಗದ ಎ.ಇ.ಇ. ರಮೇಶ್ ಮಾಹಿತಿ ನೀಡಿದರು.
ನೀರಿನ ಸಮಸ್ಯೆಗೆ ಮುನ್ನೆಚ್ಚರಿಕೆ: ನೀರಿನ ಸಮಸ್ಯೆ ಎದುರಾಗುವ ತಾಲೂಕಿನ 30 ಗ್ರಾಮಗಳನ್ನು ಗುರು ತಿಸಲಾಗಿದೆ. ಅಗತ್ಯವಿರುವೆಡೆ 25 ಲಕ್ಷ ರೂ. ವೆಚ್ಚದಡಿ ಟಾಸ್ಕ್ ಫೋರ್ಸ್‌ನಿಂದ ಕಾಮಗಾರಿ ಕೈಗೊಳ್ಳಲಾಗಿದೆ.
2ನೇ ಹಂತದಲ್ಲಿ 15 ಲಕ್ಷ ರೂ ಅನುದಾನ ಬಂದಿದೆ. ಇತ್ತೀಚೆಗೆ ನಡೆದ ಪಿಡಿಒಗಳ ಸಭೆಯಲ್ಲಿ ಕಾಮಗಾರಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಅಲ್ಲದೆ, 41 ಗ್ರಾಪಂಗಳ ಕುಡಿಯುವ ನೀರಿನ ಅಗತ್ಯ ಕಾಮಗಾರಿ ಕೈಗೊಳ್ಳಲು 1,60 ಕೋಟಿ ವೆಚ್ಚದ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಾಪಂ ಇಒ ಗಿರೀಶ್ ಹೇಳಿದರು.
ಶಾಸಕರ ಬೇಸರ: ಜಿಪಂ ಎಂಜಿನಿಯರಿಂಗ್ ವಿಭಾಗ ದಲ್ಲಿ 2 ವರ್ಷದಿಂದ ಯಾವುದೇ ಕಾಮಗಾರಿ ನಡೆ ದಿಲ್ಲ. ಪ್ರಸ್ತಾವನೆ ಸಲ್ಲಿಸಿಲ್ಲ. ಅಗತ್ಯ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಎಂದು ಎಇಇ ಮಹೇಶ್ ಅವರಿಗೆ ಸೂಚಿಸಿದರು.