Advertisement

ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ

01:37 AM May 20, 2024 | Team Udayavani |

ಹೊಸದಿಲ್ಲಿ: ನೀವು ದೊಡ್ಡ ಸಾಧನೆಯನ್ನು ಮಾಡಬೇಕಿದ್ದರೆ ದೊಡ್ಡದಾಗಿಯೇ ಯೋಚಿಸಬೇಕು. ಹಾಗಾಗಿ ಮುಂದಿನ ಒಂದು ಸಾವಿರ ವರ್ಷಗಳ ಭಾರತದ ರೂಪುರೇಷೆ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದ ರ್ಶನದಲ್ಲಿ ಮೋದಿಯವರು ಇದಕ್ಕೆ ಉದಾಹರಣೆಯಾಗಿ, ಅಧಿಕಾರ ವರ್ಗದ ಕಾರ್ಯ ನಿರ್ವಹಣೆಯ ಬಗ್ಗೆ ನಾವು ಮರುಪರಿಶೀಲಿಸ ಬೇಕಿದೆ. ಭಡ್ತಿ ಮಾತ್ರವೇ ಅವರ ಕೆಲಸದ ಗುರಿಯಾಗಿರಬಾರದು. ಅಧಿಕಾರ ವರ್ಗದ ನೇಮಕಾತಿ ಮತ್ತು ತರಬೇತಿಯಲ್ಲಿ ಬದಲಾವಣೆ ತರುವುದು ಅಗತ್ಯವಾಗಿದೆ. ಅವರಿಗೆ ತಮ್ಮ ಬದುಕಿನ ಉದ್ದೇಶ ಗೊತ್ತಾಗಬೇಕು ಎಂದರು.

ಇದೇ ಕಾರಣಕ್ಕಾಗಿ ನಾನು ಕೆಂಪುಕೋಟೆಯಿಂದ ಮೊದಲ ಬಾರಿಗೆ ವಿರಾಸತ್‌ (ಪರಂಪರೆ) ಮತ್ತು ವಿಕಾಸ (ಅಭಿವೃದ್ಧಿ)ವನ್ನು ಒಟ್ಟಿಗೆ ಕೊಂಡೊ ಯ್ಯಬೇಕಾದ ಬಗ್ಗೆ ಹೇಳಿದ್ದೆ ಎಂದು ತಿಳಿಸಿದರು. ಇವತ್ತು ಕೂಡ ನಾನು ಅದನ್ನೇ ಹೇಳುತ್ತಿದ್ದೇನೆ… ಕಳೆದ ಸಾವಿರ ವರ್ಷದಲ್ಲಿ ನಮ್ಮನ್ನು ಬದುಕಲು ಪ್ರೇರೇಪಿಸುವಂಥ ಘಟನೆಗಳು ನಡೆದಿವೆ. ಆದರೆ ಈಗ ಏನಾಗುತ್ತಿವೆಯೋ ಅವು ಮುಂದಿನ ಸಾವಿರ ವರ್ಷ ಭಾರತದ ಭವಿಷ್ಯವನ್ನು ಉಜ್ವಲಗೊಳಿಸಲಿವೆ. ಇದು ಭಾರತದ ಸಮಯ. ನಾವು ಈ ಅವಕಾಶವನ್ನು ಬಿಟ್ಟುಕೊಡಲೇಬಾರದು ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಈಗಾಗಲೇ ಸಿದ್ಧತೆ ಆರಂಭ
ಭವಿಷ್ಯದ ಭಾರತದ ಕುರಿತಾದ ರೂಪುರೇಷೆ ಗಾಗಿ ಈಗಾಗಲೇ ಕೆಲಸ ಆರಂಭವಾಗಿದೆ ಎಂದ ಮೋದಿ, ಈ ಸಂಬಂಧ ಅತೀ ದೊಡ್ಡ ಕಸರತ್ತು ಮಾಡುತ್ತಿದ್ದೇವೆ. ಬಿರುಸಿನ ಸಮಾಲೋಚನೆ ನಡೆಸಿದ್ದೇವೆ. ಈ ರೂಪುರೇಷೆಯ ಕುರಿತು ನಾನು ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ ಎಂದರೆ ಕೆಲವು ಅಧಿಕಾರಿಗಳು ನಿವೃತ್ತಿಯಾಗಿ ಹೋದರು. ಇದಕ್ಕಾಗಿ ಸಚಿವರು, ಕಾರ್ಯದರ್ಶಿಗಳು ಮತ್ತು ತಜ್ಞರಿಂದ ಸಲಹೆಗಳನ್ನು ಪಡೆದುಕೊಂಡಿದ್ದೇವೆ ಎಂದು ಹೇಳಿದರು.

ಈ ಯೋಜನೆಗಳನ್ನು ನಾವು ಸಾಧಿಸಲು ಸಾಧ್ಯವಾಗುವ ರೀತಿಯಲ್ಲಿ ಭಾಗಗಳಾಗಿ ವಿಂಗಡಿಸುತ್ತಿದ್ದೇವೆ. 25 ವರ್ಷ, 5 ವರ್ಷ, 1 ವರ್ಷ ಹಾಗೂ 100 ದಿನಗಳ ಯೋಜನೆಗಳಾಗಿ ವಿಂಗಡಿಸಿದ್ದೇವೆ. ಇದಕ್ಕೆ ಹೆಚ್ಚುವರಿಯಾಗಿ ಕೆಲವು ಸೇರ್ಪಡೆಯಾಗಬಹುದು. ಬಹುಶಃ ಕೆಲವು ಯೋಜನೆಗಳನ್ನು ಕೈಬಿಡಬಹುದು. ಆದರೆ ನಮ್ಮೊಂದಿಗೆ ದೊಡ್ಡ ಯೋಜನೆಯಂತೂ ಇದೆ ಎಂದು ಮೋದಿ ಹೇಳಿದರು.

Advertisement

ನಾನು ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದ್ದರ ಬಗ್ಗೆ ಯೋಚಿಸುತ್ತಿಲ್ಲ. ನಾನು 100ನೇ ವರ್ಷದ ಬಗ್ಗೆ ಯೋಜಿಸುತ್ತಿದ್ದೇನೆ. ನಾನು ಎಲ್ಲೇ ಹೋಗಲಿ, ದೇಶಕ್ಕೆ 100 ವರ್ಷ ತುಂಬಿದಾಗ ನೀವು ಏನು ಮಾಡಬಲ್ಲಿರಿ? ನಿಮ್ಮ ಸಂಸ್ಥೆ ಯಾವ ಹಂತದಲ್ಲಿ ಇರಬೇಕೆಂದು ಬಯಸುತ್ತೀರಿ ಎಂದು ನಾನು ಸಂಸ್ಥೆಗಳಿಗೆ ಕೇಳುತ್ತೇನೆ ಎಂದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಐತಿಹಾಸಿಕ 400 ಸೀಟು ಗಳನ್ನು ಗೆಲ್ಲಲಿದೆ ಎಂದು ಮೋದಿ ಹೇಳಿದರು. ಅಲ್ಲದೆ ಸಂವಿಧಾನ ಬದಲಾವಣೆಗಾಗಿ ಬಿಜೆಪಿ 400 ಸೀಟು ಗೆಲ್ಲುವುದಾಗಿ ಹೇಳುತ್ತಿದೆ ಎಂಬುದು ವಿಪಕ್ಷಗಳ ಮೂರ್ಖ ತರ್ಕವಾಗಿದೆ. ಅವರಿಗೆ ಸದನ ಕಾರ್ಯನಿರ್ವಹಿಸುವುದು ಬೇಕಾಗಿಲ್ಲ ಎಂದರು.

ಮೋದಿ ಹೇಳಿದ್ದೇನು?
-ದೇಶದ ಭವಿಷ್ಯಕ್ಕಾಗಿ ರೂಪುರೇಷೆ ಸಿದ್ಧಪಡಿಸಲು ನಾನು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಈ ಮಧ್ಯೆ ಕೆಲವು ಅಧಿಕಾರಿಗಳು ನಿವೃತ್ತಿಯಾಗಿ ಹೋದರು.
-ಯೋಜನೆಗಳನ್ನು 25 ವರ್ಷ, 5 ವರ್ಷ, 1 ವರ್ಷ ಹಾಗೂ 100 ದಿನಗಳದ್ದಾಗಿ ವಿಂಗಡಿಸಿದ್ದೇವೆ.
-ನಾನು ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದ್ದರ ಬಗ್ಗೆ ಯೋಚಿಸುತ್ತಿಲ್ಲ. 100 ವರ್ಷಗಳ ಬಗ್ಗೆ ಯೋಜಿಸುತ್ತಿದ್ದೇನೆ.
-ನಾನು ಎಲ್ಲೇ ಹೋಗಲಿ, ನಾನು ಸಂಸ್ಥೆಗಳಿಗೆ ಮುಂದಿನ 25 ವರ್ಷಗಳ ಯೋಜನೆಗಳ ಬಗ್ಗೆ ಕೇಳುತ್ತೇನೆ.

ಅಂ.ರಾ. ಮಟ್ಟದ ಮಸೂದೆ
ಸಂಸತ್ತಿನಲ್ಲಿ ಮಂಡಿಸುವ ಮಸೂದೆ ಗಳಿಗೆ, ಜಾಗತಿಕ ಗುಣಮಟ್ಟಕ್ಕೆ ಅನುಗುಣ ವಾದ ಟಿಪ್ಪಣಿಯನ್ನು ಅಧಿಕಾರಿಗಳು ತರು ತ್ತಾರೆ. ನಿರ್ದಿಷ್ಟ ಕ್ಷೇತ್ರದಲ್ಲಿ ಯಾವ ದೇಶ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ಅಲ್ಲಿನ ನಿಯಮಗಳು ಏನಿವೆ, ನಾವು ಅವುಗಳನ್ನು ಹೇಗೆ ಸಾಧಿಸುವುದು ಇತ್ಯಾದಿ ಮಾಹಿತಿ ಅದರಲ್ಲಿರುತ್ತದೆ. ಇದರಿಂದ ಅಂತಾರಾಷ್ಟ್ರೀಯ ಗುಣಮಟ್ಟ ಸಾಧ್ಯವಾಗುತ್ತಿದೆ.
-ನರೇಂದ್ರ ಮೋದಿ, ಪ್ರಧಾನಿ

 

Advertisement

Udayavani is now on Telegram. Click here to join our channel and stay updated with the latest news.

Next