ಕೋಲಾರ: ಕೆ.ಜಿ.ಎಫ್ ನಗರದಲ್ಲಿನ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ರೋಜರ್ಸ್ ಕ್ಯಾಂಪ್ ಬಳಿ ಸುಮಾರು 16 ಎಕರೆ ಸರ್ಕಾರಿ ಜಮೀನಿನಲ್ಲಿ ಬಡಾವಣೆ ರೂಪಿಸಲು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಬುಧವಾರ ನಡೆದ ಸಭೆಯಲ್ಲಿ ಅನುಮೋದನೆ ನೀಡಿದರು.
ಕೆಜಿಎಫ್ನಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ಅನುಮೋದನೆ ದೊರೆಯಿತು. ನಿವೇಶನ ರಹಿತರಿಗೆ ನಿವೇಶನ ವಿತರಿಸುವ ಸಲುವಾಗಿಯೇ ಜಮೀನನ್ನು ಗುರುತಿಸಲಾಗಿದ್ದು ಜಿಲ್ಲಾಧಿಕಾರಿಗಳ ಅದೇಶದ ಅನ್ವಯ ಆಶ್ರಯ ಯೋಜನೆಯಡಿ ವಸತಿ ಉದ್ದೇಶಕ್ಕಾಗಿ ಎಂದು ಜಮೀನನ್ನು ಕಾಯ್ದಿರಿಸಲಾಗಿತ್ತು.
ಬಡಾವಣೆಯ ವಿನ್ಯಾಸ ನಕ್ಷೆ ಅಂತಿಮ ಹಂತದಲ್ಲಿದ್ದು ಕೆಜಿಎಫ್. ನಗರಾಭಿವೃದ್ದಿ ಪ್ರಾಧಿಕಾರದಿಂದ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯುವ ವಿಷಯದಲ್ಲಿ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲು ಶಾಸಕರು ಕೋರಿದ್ದರು.
ಜಿಲ್ಲಾಧಿಕಾರಿಗಳು ಕೆ.ಜಿ.ಎಫ್.ನಗರದಲ್ಲಿಯೇ ಸಭೆ ನಡೆಸಲು ಒಪ್ಪಿಗೆ ನೀಡಿದ್ದರು. ಅಂತೆ ಬುಧವಾರ ಜರುಗಿದ ಸಭೆಯಲ್ಲಿ, ಮಾತನಾಡಿದ ಶಾಸಕಿ ರೂಪ ಕಲಾ, ಸದರಿ ಯೋಜನೆಯ ಬಗ್ಗೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಟ್ಟು ಎಷ್ಟೋ ಬಡ ಕುಟುಂಬ ಗಳಿಗೆ ಇದರಿಂದ ಉಪಯೋಗವಾಗಲಿದ್ದು ಬಡಾವಣೆ ವಿನ್ಯಾಸ ನಕ್ಷೆಗೆ ಆದಷ್ಟು ಬೇಗ ಅನಮೋದನೆ ನೀಡಲು ಕೋರಿದರು.
ಶಾಸಕರ ವಿವರಣೆಯನ್ನು ಆಲಿಸಿದ ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಯೋಜನೆಯ ಉದ್ದೇಶ ತುಂಬಾ ಅರ್ಥಪೂರ್ಣವಾಗಿದ್ದು ನಗರಾಭಿವೃದ್ಧಿ ಪ್ರಾಧಿಕಾರ ದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು. ನಂತರ ಪ್ರಸ್ತಾವನೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಕೂಡಲೆ ಪ್ರಾರಂಭಿಸಲು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಿದರು. ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.