ಮೈಸೂರು: ನಾಯಕ ಜನಾಂಗದ ಮುಖಂಡರಾದ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ನಾಯಕ ಸಮಾಜದ ಮುಖಂಡರು ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಜನಾಂಗದ ಮುಖಂಡ ದ್ಯಾವಪ್ಪ ನಾಯಕ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು. ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಸೇರಿದಂತೆ ಜನಾಂಗದ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.
ಈ ಚುನಾವಣೆಯಲ್ಲಿ ನಾಯಕ ಸಮಾಜದ 17 ಶಾಸಕರು ಆಯ್ಕೆಯಾಗಿದ್ದಾರೆ. ಈ ಪೈಕಿ ಕಾಂಗ್ರೆಸ್- ಜೆಡಿಎಸ್ ಪಕ್ಷದಲ್ಲಿ 10 ಶಾಸಕರು ಆಯ್ಕೆಯಾಗಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಮಾಜದ ಮೂವರಿಗೆ ಸಚಿವ ಸ್ಥಾನ ನೀಡಿದ್ದು ಬಿಟ್ಟರೆ, ರಾಜ್ಯದಲ್ಲಿ ಈವರೆಗೂ ನಾಯಕ ಸಮಾಜಕ್ಕೆ ರಾಜಕೀಯವಾಗಿ ಸೂಕ್ತ ಸ್ಥಾನಮಾನ ದೊರಕದೆ ಅನ್ಯಾಯವಾಗಿದೆ.
ರಾಜ್ಯದಲ್ಲಿ 50 ಲಕ್ಷ ಜನಸಂಖ್ಯೆ ಹೊಂದಿರುವ ನಾಯಕ ಸಮುದಾಯ ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದರೂ ಪ್ರಮುಖ ಪಾತ್ರವಹಿಸುತ್ತದೆ. ಆದರೂ ನಮ್ಮ ಸಮಾಜಕ್ಕೆ ರಾಜಕೀಯ ಅನ್ಯಾಯ ಮಾಡುತ್ತಾ ಬರಲಾಗುತ್ತಿದ್ದು, ಸತೀಶ್ ಜಾರಕಿಹೊಳಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಸಮಾಜದ ಮೂವರನ್ನು ಮಂತ್ರಿ ಮಾಡಿ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಶ್ರೀರಾಂಪುರ ಗ್ರಾಪಂ ಅಧ್ಯಕ್ಷೆ ಚೂಡಾಮಣಿ, ಜನಾಂಗದ ಮುಖಂಡರಾದ ರಘು ಯಡಕೊಳ, ಗಣೇಶ್, ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.