Advertisement

ಜಾಹೀರಾತಿಗೆ ಸ್ಥಳ ನಿಗದಿ; ಅನಧಿಕೃತಕ್ಕೆ ದಂಡ

12:14 PM Jan 16, 2022 | Team Udayavani |

ಕನಕಪುರ: ನಗರದಲ್ಲಿ ಇನ್ನು ಮುಂದೆ ಸ್ಥಳೀಯ ಸಂಸ್ಥೆ ನಗರ ಸಭೆಯಿಂದ ಅನುಮತಿ ಪಡೆಯದೆ ಅನಧಿಕೃತ ಜಾಹೀರಾತು ಫ‌ಲಕ ಹಾಕುವಂತಿಲ್ಲ ಎಂದು ಪರಿಸರ ಇಲಾಖೆ ಪಾರ್ವತಿ ತಿಳಿಸಿದರು.

Advertisement

ಅನಧಿಕೃತ ಜಾಹೀರಾತು ನಾಮ ಫ‌ಲಕಕ್ಕೆ ನಿರ್ಬಂಧ ಹೇರುವುದು ಮತ್ತು ನಗರಸಭೆಗೆ ಆದಾಯಹೆಚ್ಚಿಸಿಕೊಳ್ಳುವ ಬಗ್ಗೆ ಸಂಘ ಸಂಸ್ಥೆಗಳಿಂದ ಸಲಹೆ ಸೂಚನೆ ಪಡೆಯಲು ನಗರ ಸಭೆ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕವಾಗಿ ಜಾಹೀರಾತು ಫ‌ಲಕ ಹಾಕಲು ನಗರ ಸ್ಥಳೀಯ ಸಂಸ್ಥೆ, ಗ್ರಾಮಗಳ ಸ್ಥಳೀಯ ಸಂಸ್ಥೆ ಪರವಾನಗಿ ಪಡೆದಿರಬೇಕು. ಅನಧಿಕೃತವಾಗಿ ಜಾಹೀರಾತು ಪ್ರದರ್ಶನ ಮಾಡುವಂತಿಲ್ಲ ಎಂದು 1981ರಲ್ಲಿ ಈ ಕಾಯ್ದೆ ಜಾರಿಯಾಗಿದೆ.

ಆದರೆ ನಗರದಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಜಾಹೀರಾತು ಪ್ರದರ್ಶನ ಮಾಡಲಾಗುತ್ತಿದೆ. ಇದರಿಂದ ನಗರದ ಅಂದವೂಹಾಳಾಗಲಿದೆ. ಹಾಗಾಗಿ ನಿಗದಿತ ಸ್ಥಳಗಳಲ್ಲಿ ಮಾತ್ರಜಾಹಿರಾತು ಪ್ರದರ್ಶನಕ್ಕೆ ಅವಕಾಶ ನೀಡಬೇಕು. ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಸ್ಥಳೀಯ ಸಂಸ್ಥೆ ಕ್ರಮ ಕೈಗೊಳ್ಳಬೇಕು ಎಂಬುದು ಸರ್ಕಾರದ ಆದೇಶವಾಗಿದೆ. ಹಾಗಾಗಿ ಈ ಸಭೆ ಕರೆಯಲಾಗಿದೆ ಎಂದು ಸ್ಪಷ್ಟ ಪಡಿಸಿದರು.

ಜಾಹೀರಾತಿಗೆ ಸ್ಥಳ ನಿಗದಿ: ಈಗಾಗಲೇ ನಗರದಲ್ಲಿ ಸಾರ್ವಜನಿಕ ಜಾಹೀರಾತು ಪ್ರಕಟಿಸಲು ಐದು ಸ್ಥಳ ಗಳನ್ನು ಗುರುತಿಸಲಾಗಿದೆ. ಚನ್ನಬಸಪ್ಪ ವೃತ್ತ, ಕೆಎನ್‌ಎಸ್‌ ವೃತ್ತ, ಮಳಗಾಳು ವೃತ್ತ, ಗ್ರಾಮಾಂತರ ಠಾಣೆ, ಹಳೆ ಬಿಇಒ ಕಚೇರಿ ಈ ಐದು ಸ್ಥಳಗಳನ್ನು ಗುರುತಿಸಲಾಗಿದೆ. ಹೆಚ್ಚು ಜಾಹೀರಾತು ಬಂದರೆ ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರು ಸೂಚಿಸುವ ಸ್ಥಳಗಳಲ್ಲಿ ಜಾಹೀರಾತು ಪ್ರಕಟಕ್ಕೆ ಅವಕಾಶ ನೀಡಲಾಗುವುದು. ಒಂದು ಜಾಹೀರಾತು ಫ‌ಲಕಕ್ಕೆ ಮೂರು ದಿನ ನಿಗದಿ ಪಡಿಸಲಾಗಿದೆ. ಅದರ ದರ ಎಷ್ಟು ಎಂಬುದು ಸಭೆಯಲ್ಲಿ ನಿರ್ಣಯವಾಗಿದೆ.

Advertisement

ನಿಯಮ ಉಲ್ಲಂಘಿಸುವಂತಿಲ್ಲ: ನಗರದಲ್ಲಿ ಸರ್ಕಾರದ ಯೋಜನೆಗಳ ಜಾಹೀರಾತುಗಳಿಗೆ ಫ್ಲೆಕ್ಸ್‌,ಬೋರ್ಡ್‌ ಹಾಕಲಾಗಿದೆ ಅಲ್ಲಿ ಖಾಸಗಿ ಜಾಹೀರಾತು ಫ‌ಲಕ ಹಾಕುವಂತಿಲ್ಲ. ಈ ನಿಯಮ ಉಲ್ಲಂ ಘಿಸುವಂತಿಲ್ಲ. ಖಾಸಗಿ ಜಾಹೀರಾತಿಗೆ ನಗರಸಭೆಯಲ್ಲಿ ಮೂರು ದಿನ ಮುಂಚಿತವಾಗಿಅನುಮತಿ ಪಡೆಯಬೇಕು. ಕಟ್ಟಡಗಳ ಮೇಲೆವೈಯಕ್ತಿಕ ಜಾಹೀರಾತು ಫ‌ಲಕ ಹಾಕಿದರೆ ನಗರಸಭೆಗೆತೆರಿಗೆ ಪಾವತಿ ಮಾಡಬೇಕು. ಅಲ್ಲಿ ಯಾವುದೇ ನಿರ್ಬಂಧಗಳಿಲ್ಲ. ನಗರದಲ್ಲಿರುವ ವಿದ್ಯುತ್‌ ಕಂಬಗಳಿಗೆ ಸ್ಯಾಂಡ್ವಿಚ್‌ ಮೀಡಿಯಾ ಫ್ಲೆಕ್ಸ್‌ಗಳನ್ನು ಒಂದು ವರ್ಷದ ಅವಧಿಗೆ ಅನುಮತಿ ಪಡೆದು ಜಾಹೀರಾತು ಪ್ರದರ್ಶನ ಮಾಡಬಹುದು.

ಪ್ಲಾಸ್ಟಿಕ್‌ ಬಳಕೆ ಜಾಹೀರಾತು ನಿಷೇಧ: ಪತ್ರಕರ್ತರ ಸಂಘದ ಸದಸ್ಯ ಜಗದೀಶ್‌ ಮಾತನಾಡಿ, ಈಗಾಗಲೇ ಪ್ಲಾಸ್ಟಿಕ್‌ ನಿಷೇಧ ಜಾರಿಯಲ್ಲಿದೆ. ನಗರ ಮತ್ತು ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಬಳಕೆಯ ಜಾಹೀರಾತು ಪ್ರದರ್ಶನ ಮಾಡುವಂತಿಲ್ಲ ಎಂದು ಕೋರ್ಟ್‌ ಸೂಚಿಸಿದೆ. ಎಲ್ಲ ಜಾಹಿರಾತು ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳಲ್ಲಿ ಪ್ಲಾಸ್ಟಿಕ್‌ ಕೋಟಿಂಗ್‌ ಇದೆ. ಹಾಗಾಗಿಪ್ಲಾಸ್ಟಿಕ್‌ ಬಳಕೆ ಇರುವ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳ ಪ್ರದರ್ಶನಕ್ಕೆ ನಗರ ಸಭೆಯಿಂದ ಅನುಮತಿ ಕೋಡಬಾರದು. ಪರಿಸರ ಸ್ನೇಹಿ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳಿಗೆ ಮಾತ್ರ ಅನುಮತಿ ಕೊಡಬೇಕು ಎಂದು ಸಲಹೆ ನೀಡಿದರು.

ಬ್ಯಾನರ್‌ಗೆ ನಿಷೇಧ ಹೇರಿ: ಬಿಜೆಪಿ ಕಾರ್ಯಕರ್ತ ಭರತ್‌ಕುಮಾರ್‌ ಮಾತನಾಡಿ, ನಗರದ ಚನ್ನಬಸಪ್ಪದಲ್ಲಿರುವ ಅಶೋಕ ಸ್ತಂಭದ ಸುತ್ತಲೂ ಶ್ರದ್ಧಾಂಜಲಿ ಬ್ಯಾನರ್‌ಗಳನ್ನು ಹಾಕಿ ಅಶೋಕ ಸ್ತಂಭಕ್ಕೆ ಅವಮಾನ ಮಾಡುತ್ತಿದ್ದಾರೆ. ಮೊದಲು ಚನ್ನಬಸಪ್ಪ ವೃತ್ತದ ಲ್ಲಿರುವ ಅಶೋಕ ಸ್ತಂಭಕ್ಕೆ ಯಾವುದೇ ಜಾಹೀರಾತು ಬ್ಯಾನರ್‌ಗಳನ್ನು ಹಾಕದಂತೆ ನಿಷೇಧ ಹೇರಬೇಕು ಎಂದರು.

ಈ ಸಭೆಯಲ್ಲಿ ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್‌, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಶಿವಲಿಂಗಯ್ಯ, ನಗರ ಸಭೆ ಅಧ್ಯಕ್ಷ ವೆಂಕಟೇಶ್‌.ಸದಸ್ಯರಾಮದಾಸು,ಆರೋಗ್ಯ ಇಲಾಖೆಕುಸುಮ,ರಾಘವೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ವಿವಿಧ ಸಂಘ ಸಂಸ್ಥೆ ಮುಖಂಡರು ಉಪಸ್ಥಿತರಿದ್ದರು.

ಪ್ಲಾಸ್ಟಿಕ್‌ ಬ್ಯಾನರ್‌ ಮುದ್ರಿಸುವಂತಿಲ್ಲ :  ಮುದ್ರಣ ಮಳಿಗೆ ಮಾಲಿಕರ ಸಭೆ ಕರೆದು ಇನ್ನು ಮುಂದೆ ಪ್ಲಾಸ್ಟಿಕ್‌ ಇರುವ ಬ್ಯಾನರ್‌ ಮುದ್ರಣ ಮಾಡುವಂತಿಲ್ಲ. ಪರಿಸರ ಮಾಲಿನ್ಯ ತಡೆಯಲು ಪ್ಲಾಸ್ಟಿಕ್‌ ರಹಿತವಾದ ಬ್ಯಾನರ್‌ ಮುದ್ರಣ ಮಾಡಬೇಕು ಎಂದು ಸೂಚನೆ ನೀಡಲಾಗುವುದು. ಫೈನಲ್‌ ನೋಟಿಫಿಕೇಶನ್‌ ಆದ ನಂತರ ಈ ನಿಯಮ ಅನ್ವಯವಾಗಲಿದೆ ಎಂದು ನಗರಸಭೆ ಪೌರಾಯುಕ್ತ ಶುಭ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next