Advertisement

ರೈಲ್ವೆ ನಿಲ್ದಾಣಕ್ಕೆ ಪಿಯೂಷ್‌ ಗೋಯೆಲ್‌ ದಿಢೀರ್‌ ಭೇಟಿ

11:23 AM Jan 19, 2018 | Team Udayavani |

ಬೆಂಗಳೂರು: ಬಹುನಿರೀಕ್ಷಿತ ಉಪನಗರ ರೈಲು ಯೋಜನೆಯನ್ನು 80:20 (ರಾಜ್ಯದ ಹೂಡಿಕೆ 80 ಹಾಗೂ ಕೇಂದ್ರದ ಹೂಡಿಕೆ 20) ಅನುಪಾತದ ಬದಲಿಗೆ 50:50ರ ಪಾಲುದಾರಿಕೆಯಲ್ಲಿ ಅನುಷ್ಠಾನಗೊಳಿಸಲು ರೈಲ್ವೆ ಇಲಾಖೆ ಸಿದ್ಧವಾಗಿದ್ದು, ಆದರೆ, ಅದಕ್ಕೊಂದು ಷರತ್ತು ವಿಧಿಸಿದೆ.

Advertisement

ನಗರದ ಪ್ರಮುಖ ಐದು ಕಡೆಗಳಲ್ಲಿ ಫ್ಲೋರ್‌ ಸ್ಪೇಸ್‌ ಇಂಡೆಕ್ಸ್‌ (ಎಫ್ಎಸ್‌ಐ)ಗೆ ಅನುಮತಿ ನೀಡಬೇಕು ಎಂದು ಸ್ವತಃ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಷರತ್ತು ಹಾಕಿದ್ದಾರೆ. ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲೇ ಕರ್ನಾಟಕ ಸರ್ಕಾರವು ನಗರದ ಐದು ಪ್ರಮುಖ ಜಾಗಗಳಲ್ಲಿ ಎಫ್ಎಸ್‌ಐಗಳಿಗೆ ಅವಕಾಶ ಕಲ್ಪಿಸಿದರೆ, 80:20ರ ಬದಲಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮಾನ ಪಾಲುದಾರಿಕೆಯಲ್ಲೇ ಅಂದರೆ, ಸಬ್‌ ಅರ್ಬನ್‌ ರೈಲು ಯೋಜನೆಗೆ ತಗಲುವ ಒಟ್ಟಾರೆ ವೆಚ್ಚದಲ್ಲಿ ರೈಲ್ವೆಯಿಂದ ಶೇ.50ರಷ್ಟು ಹಣ ಹೂಡಿಕೆ ಮಾಡಲು ಸಿದ್ಧವಾಗಿದೆ ಎಂದು ತಿಳಿಸಿದರು.

ಎಲ್ಲೆಲ್ಲಿ ಅವಕಾಶ ಇದೆ?: ಮೂಲಗಳ ಪ್ರಕಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ, ಕಂಟೋನ್‌ಮೆಂಟ್‌, ಬೈಯ್ಯಪ್ಪನಹಳ್ಳಿ ಸೇರಿದಂತೆ ಐದು ಕಡೆ.  ಹೃದಯಭಾಗದಲ್ಲಿರುವ ಈ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ, ಅಲ್ಲಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುವ ಯೋಜನೆ ರೈಲ್ವೆ ಇಲಾಖೆ ಮುಂದಿದೆ. ಅಲ್ಲೆಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಬೇಕು ಎನ್ನುವುದೇ ಆ ಷರತ್ತು. 

ಏರ್‌ಪೋರ್ಟ್‌ಗೆ ಸಂಪರ್ಕ?: ಬೆಳೆಯುತ್ತಿರುವ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸಂಚಾರದಟ್ಟಣೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಉಪನಗರ ರೈಲು ಯೋಜನೆ ಅತ್ಯವಶ್ಯಕವಾಗಿದೆ. ಆದ್ದರಿಂದ ಈ ಸಂಬಂಧ ಸಮಗ್ರ ಯೋಜನೆಯೊಂದನ್ನು ರೈಲ್ವೆ ಇಲಾಖೆ ರೂಪಿಸಿದೆ. ಇದರಲ್ಲಿ ನಿಲ್ದಾಣಗಳ ಮರು ಅಭಿವೃದ್ಧಿಪಡಿಸುವುದರ ಜತೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದೆ.

Advertisement

ಅಲ್ಲಿ ಇಂಟರ್‌ಚೇಂಜ್‌ ಮಾಡಿ, ಮೆಟ್ರೋ ಮತ್ತು ಸಬ್‌ ಅರ್ಬನ್‌ ರೈಲು ಒಂದೇ ನಿಲ್ದಾಣದಡಿ ಕಾರ್ಯಾಚರಣೆ ಮಾಡುವುದು, ಎಲೆಕ್ಟ್ರಾನಿಕ್‌ ಸಿಟಿಗೂ ಸಬ್‌ ಅರ್ಬನ್‌ ರೈಲು ಸಂಪರ್ಕ ಕಲ್ಪಿಸುವುದು ಸೇರಿದಂತೆ ಹಲವು ಪರಿಕಲ್ಪನೆಗಳನ್ನು ಒಳಗೊಂಡಿದೆ. ಆದರೆ, ಇದಕ್ಕಾಗಿ ರಾಜ್ಯ ಸರ್ಕಾರವು ರೈಲ್ವೆಗೆ ಕೈಜೋಡಿಸಬೇಕಿದೆ ಎಂದು ಹೇಳಿದರು. 

ಸಬ್‌ ಅರ್ಬನ್‌ ಯೋಜನೆಗಾಗಿ ಈಗಾಗಲೇ ರೈಟ್ಸ್‌ ಸಂಸ್ಥೆ ಮಾಡಿದ ಪ್ರಾಥಮಿಕ ಅಧ್ಯಯನ ವರದಿ ಪರಿಗಣಿಸಲಾಗಿದೆ. ಜತೆಗೆ ಇಸ್ರೋದಿಂದ ರೈಲ್ವೆ ನಕ್ಷೆಯನ್ನು ತರಿಸಿಕೊಳ್ಳಲಾಗಿದೆ. ಅದರಂತೆ ಒಟ್ಟಾರೆ 160 ಕಿ.ಮೀ. ಉದ್ದದ ರೈಲ್ವೆ ಮಾರ್ಗದಲ್ಲಿ ಅರ್ಧದಷ್ಟು ನೆಲದಲ್ಲಿ ಮತ್ತು ಉಳಿದರ್ಧ ಎತ್ತರಿಸಿದ ಮಾರ್ಗದಲ್ಲಿ ಹಾದುಹೋಗಿದೆ ಎಂದರು.  

ಇದಕ್ಕೂ ಮುನ್ನ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್‌, ಬೆಂಗಳೂರಿನ ಏಳು ದಿಕ್ಕುಗಳಲ್ಲಿ ಜೋಡಿ ಮಾರ್ಗ ಮಾಡಿ, ಸ್ವಯಂಚಾಲಿತ ಸಿಗ್ನಲ್‌ ಅಳವಡಿಸುವುದರೊಂದಿಗೆ ಐದು ಕಿ.ಮೀ.ನಷ್ಟು ಫ್ಲಾಟ್‌ಫಾರಂ ನಿರ್ಮಿಸಿದರೆ ಬೆಂಗಳೂರಿಗೆ ಬೇಕಾದ ಸಬ್‌ ಅರ್ಬನ್‌ ರೈಲು ಲಭ್ಯವಾಗುತ್ತದೆ ಎಂಬುದನ್ನು ರೈಲ್ವೆ ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದರು.

ಸಚಿವರ ದಿಢೀರ್‌ ಭೇಟಿಗೆ ತಬ್ಬಿಬ್ಟಾದ ಅಧಿಕಾರಿಗಳು: ಇದಕ್ಕೂ ಮುನ್ನ ರೈಲ್ವೆ ನಿಲ್ದಾಣಕ್ಕೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು. ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಸಂಸದ ಪಿ.ಸಿ. ಮೋಹನ್‌ ಮತ್ತಿತರರು ಉಪಸ್ಥಿತರಿದ್ದರು.

ಸಚಿವರ ದಿಢೀರ್‌ ಭೇಟಿಯಿಂದ ರೈಲ್ವೆ ನಿಲ್ದಾಣದಲ್ಲಿದ್ದ ಅಧಿಕಾರಿಗಳು ಒಂದು ಕ್ಷಣ ತಬ್ಬಿಬ್ಟಾದರು. ನಂತರ ಸಚಿವರನ್ನು ಕರೆದುಕೊಂಡು ರೈಲ್ವೆ ಫ್ಲಾಟ್‌ಫಾರಂಗೆ ತೆರಳಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ಸಚಿವರು ಸಮಾಧಾನ ವ್ಯಕ್ತಪಡಿಸಿದರಾದರೂ ಇನ್ನಷ್ಟು ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next