Advertisement

ರಸ್ತೆಯಲ್ಲಿ ಹೊಂಡ; ಬಸ್‌ ವ್ಯವಸ್ಥೆಯೂ ಇಲ್ಲ

10:58 AM Oct 25, 2018 | |

ಅಜ್ಜಾವರ : ರಸ್ತೆ ಹೊಂಡ ಬಿದ್ದಿದೆ, ಬಸ್‌ ವ್ಯವಸ್ಥೆಯೂ ಇಲ್ಲ. ಹೀಗಾಗಿ, ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಅಜ್ಜಾವರ ಗ್ರಾಮದ ಮುಳ್ಯದ ನಿವಾಸಿಗಳು ಪರದಾಡುವಂತಾಗಿದೆ. ಈ ಭಾಗದಲ್ಲಿ ಅಂದಾಜು 250ರಿಂದ 300 ಮನೆಗಳಿವೆ. ಹೆಚ್ಚುಕಡಿಮೆ 2,000ದಷ್ಟು ಜನಸಂಖ್ಯೆ ಹೊಂದಿದೆ. ಹೀಗಿದ್ದರೂ ಈ ಭಾಗದಲ್ಲಿ ಸರಕಾರಿ ಬಸ್‌ ಓಡಾಡುವುದಿಲ್ಲ.

Advertisement

ಹೊಂಡ- ಗುಂಡಿಗಳ ರಸ್ತೆ
ಸುಮಾರು 5 ಕಿ.ಮೀ. ಉದ್ದವಿರುವ ಸುಳ್ಯ- ಮುಳ್ಯ ರಸ್ತೆ ನಿರ್ಮಾಣವಾಗಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸಂದಿದೆ. ಕಾಂತಮಂಗಲದಿಂದ ಮುಳ್ಯಕ್ಕೆ ಹೋಗುವ ರಸ್ತೆಗಳು ಸಂಪೂರ್ಣ ಶಿಥಿಲಗೊಂಡಿವೆ. ದಾರಿಯುದ್ದಕ್ಕೂ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ದುರಸ್ತಿ ಮಾಡದಿರುವುದೇ ರಸ್ತೆ ಇಷ್ಟು ಪ್ರಮಾಣದಲ್ಲಿ ಹಾಳಾಗಲು ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಸ್ಥರಿಂದ ರಸ್ತೆಗೆ ತೇಪೆ
ಮುಳ್ಯ ರಸ್ತೆ ತೀರ ಹದೆಗೆಟ್ಟಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿಗೆ ಮುಂದಾಗಿಲ್ಲ. ಗ್ರಾಮಸ್ಥರೇ ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಿದ್ದಾರೆ. ರಸ್ತೆಯ ಹೊಂಡಗಳಿಗೆ ಕಾಂಕ್ರೀಟ್‌ ತೇಪೆ ಹಾಕಿದ್ದಾರೆ. ಕೆಲವು ಕಡೆ ಮಣ್ಣು ಹಾಕಿ ಮುಚ್ಚಿದ್ದಾರೆ. ಊರಿನವರೇ ಸಿಮೆಂಟ್‌ ಹಾಗೂ ಜಲ್ಲಿ ವೆಚ್ಚವನ್ನು ಭರಿಸಿದ್ದಾರೆ. ರಸ್ತೆಗಳು ಶಿಥಿಲಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ದ್ವಿಚಕ್ರ ವಾಹನ ಹಾಗೂ ಆಟೋ ಸಂಚಾರಕ್ಕೆ ತೊಂದರೆ ಆಗುತ್ತಿದ್ದ ಕಾರಣ ಅನಿವಾರ್ಯವಾಗಿ ದುರಸ್ತಿ ಮಾಡಬೇಕಾಯಿತು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಖಾಸಗಿ ವಾಹನಗಳ ಬಳಕೆ
ಸುಳ್ಯ-ಮುಳ್ಯ ಭಾಗದಲ್ಲಿ ಬಸ್‌ ಓಡಾಟವಿಲ್ಲದೆ ಜನರು ಅನಿವಾರ್ಯವಾಗಿ ಆಟೋ ರಿಕ್ಷಾ, ಜೀಪುಗಳನ್ನು ಅವಲಂಬಿಸಿದ್ದಾರೆ. ಪ್ರತಿನಿತ್ಯ ಪ್ರಯಾಣಿಸಲು ದ್ವಿಚಕ್ರ ವಾಹನ, ಆಟೋ ರಿಕ್ಷಾಗಳನ್ನು ಬಳಸುವುದರಿಂದ ಸಂಚಾರ ವೆಚ್ಚ ದುಬಾರಿಯಾಗುತ್ತಿದೆ. ಆಟೋ ರಿಕ್ಷಾಗಳಿಗೆ ಸುಳ್ಯದ ಕಡೆಗೆ ತೆರಳಲು 75ರಿಂದ 80 ರೂ. ಕೊಡಬೇಕು. ರಾತ್ರಿಯಾದರೆ 120ರಿಂದ 150 ರೂ. ಬಾಡಿಗೆ ತೆರಬೇಕು. ಇದು ಸ್ಥಳೀಯರಿಗೆ ಹೊರೆಯಾಗುತ್ತಿದೆ. ಶಾಲೆ, ಕಾಲೇಜಿಗೆ ಹೋಗುವ ಮಕ್ಕಳ ಸ್ಥಿತಿಯೂ ಇದೇ ರೀತಿಯಿದೆ. ಮುಳ್ಯ ಪರಿಸರದಲ್ಲಿ ಯಾವುದೇ ಕಾಲೇಜು ಇಲ್ಲ. ಮಕ್ಕಳು ಸುಳ್ಯಕ್ಕೆ ಸಂಚರಿಸಬೇಕು. ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಒಂದಾದರೂ ಬಸ್‌ ಓಡಾಡಿದರೆ ಒಳ್ಳೆಯದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಬಸ್ಸುಗಳ ಓಡಾಟವಿಲ್ಲ 
ಮುಳ್ಯದಿಂದ ಸುಳ್ಯಕ್ಕೆ ಸಂಚರಿಸಲು ಯಾವುದೇ ಬಸ್ಸುಗಳಿಲ್ಲ. ಸುಮಾರು 5 ಕಿ.ಮೀ. ದೂರದ ಈ ರಸ್ತೆಯಲ್ಲಿ ಸರಿಯಾದ ವಾಹನಗಳ ಸೌಕರ್ಯವೂ ಇಲ್ಲ. ಒಂದು ವರ್ಷದ ಹಿಂದೆ ಸುಳ್ಯ – ಮುಳ್ಯ- ಅಟ್ಲೂರು ಮಾರ್ಗವಾಗಿ ಖಾಸಗಿ ಬಸ್ಸೊಂದು ಓಡಾಡಲು ಪ್ರಾರಂಭಿಸಿದ್ದರೂ ಒಂದೇ ತಿಂಗಳಲ್ಲಿ ಸ್ಥಗಿತಗೊಂಡಿತು. ಈ ಭಾಗದಲ್ಲಿ ಸರಕಾರಿ ಬಸ್ಸುಗಳ ಸಂಚಾರ ಆರಂಭವಾದರೆ ಅನುಕೂಲ ಎನ್ನುತ್ತಾರೆ ಸ್ಥಳೀಯರು.

Advertisement

ಕಾಂಕ್ರೀಟ್‌ ತೇಪೆ
ರಸ್ತೆ ದುರಸ್ತಿಗೆ ಅಧಿಕಾರಿಗಳು ಇನ್ನೂ ಕ್ರಮ ಕೈಗೊಂಡಿಲ್ಲ. ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಸದ್ಯಕ್ಕೆ ಊರಿನವರೆಲ್ಲ ಸೇರಿ ರಸ್ತೆಗೆ ಕಾಂಕ್ರೀಟ್‌ ತೇಪೆ ಹಾಕಿದ್ದೇವೆ.
ಸದಾನಂದ,
  ಆಟೋ ಚಾಲಕ

 ವೆಚ್ಚ ಭರಿಸುವುದೇ ಸಮಸ್ಯೆ
ಈ ಭಾಗದ ಜನರು ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಸುಳ್ಯಕ್ಕೆ ಸಂಚರಿಸುವುದು ಅನಿವಾರ್ಯವಾಗಿದೆ. ಬಸ್ಸುಗಳ ಓಡಾಟವಿಲ್ಲದೆ ಆಟೋ ರಿಕ್ಷಾಗಳನ್ನು ಬಳಸಬೇಕು. ಸಂಚಾರ ವೆಚ್ಚವನ್ನು ಭರಿಸುವುದೇ ದೊಡ್ಡ ಸಮಸ್ಯೆ.
– ಕೃಷ್ಣ,
ಗ್ರಾಮಸ್ಥ

ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next