Advertisement

ದಯನೀಯ ಸ್ಥಿತಿಯಲ್ಲಿ ಮೈತ್ರಿ ಪಕ್ಷಗಳು

06:34 AM Mar 22, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಬಳಿಕ ಎರಡೂ ಪಕ್ಷಗಳು ದಯನೀಯ ಸ್ಥಿತಿ ತಲುಪಿವೆ. ಮೈತ್ರಿ ಹೋಗಿ “ವಿ ತ್ರಿ’ ಎಂಬಂತೆ ಎರಡು ಪಕ್ಷಗಳ ಜತೆಗೆ ಮೂರನೇ ಗುಂಪೊಂದು ಬೆಳೆಯುತ್ತಿದೆ. ಮೈತ್ರಿಯಿಂದಾಗಿ ಎರಡೂ ಪಕ್ಷಗಳಿಗೆ ಕಾರ್ಯಕರ್ತರು ಬಲಿಯಾಗುತ್ತಿದ್ದು, ಆ ಕಾರ್ಯಕರ್ತರ ಸ್ಥಿತಿ ಬಗ್ಗೆ ಬೇಸರವಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಗೋ.ಮಧುಸೂದನ್‌ ಹೇಳಿದರು.

Advertisement

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಪಕ್ಷಗಳು ತಮ್ಮ ಶಕ್ತಿ ಪ್ರಾಬಲ್ಯದ ಆಧಾರದ ಮೇಲೆ ಕ್ಷೇತ್ರ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು. ಆದರೆ ಜೆಡಿಎಸ್‌ ಎಂಟು ಸ್ಥಾನಕ್ಕೆ ಪಟ್ಟು ಹಿಡಿದು ಕಾಂಗ್ರೆಸ್‌ ಪ್ರಾಬಲ್ಯವಿರುವ ಕೆಲ ಕ್ಷೇತ್ರಗಳನ್ನು ಕಿತ್ತುಕೊಂಡಿದೆ. ಆದರೆ ನಂತರ ಅಭ್ಯರ್ಥಿಯಿಲ್ಲದೆ ಒದ್ದಾಡುತ್ತಿದೆ.

ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್‌ ಪಡೆದಿದ್ದು, ಅಭ್ಯರ್ಥಿ ಇಲ್ಲ. ಕೇಂದ್ರ ಸಚಿವರಾದ ರಮೇಶ್‌ ಜಿಗಜಿಣಗಿ ಅವರ ವಿರುದ್ಧ ಜೆಡಿಎಸ್‌ ಅಭ್ಯರ್ಥಿಗಾಗಿ ಹುಡುಕಾಡುತ್ತಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆ ಎನಿಸಿದ್ದ ಉತ್ತರ ಕನ್ನಡ ಕ್ಷೇತ್ರವನ್ನು ಜೆಡಿಎಸ್‌ ಪಡೆದರೂ ಅಭ್ಯರ್ಥಿಗೆ ಶೋಧ ನಡೆಸುತ್ತಿದೆ. ಇದು ಜೆಡಿಎಸ್‌ನ ದಯನೀಯ ಸ್ಥಿತಿ ಎಂದು ಹೇಳಿದರು.

ಸ್ಪರ್ಧೆ ಮೇಲೆ ಪರಮೇಶ್ವರ್‌ಗೆ ಅವಮಾನ: ಇನ್ನೊಂದೆಡೆ ಕಾಂಗ್ರೆಸ್‌- ಜೆಡಿಎಸ್‌ ಹಿರಿಯ ನಾಯಕರು ಮಹತ್ವದ ಸಭೆ ನಡೆಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರೆ ಪರಮೇಶ್ವರ್‌ ದೂರ ಉಳಿದಿದ್ದರು. ದಾಖಲೆ ಅವಧಿಯ ಏಳು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಪರಮೇಶ್ವರ್‌ ಅವರನ್ನು ಕಾಂಗ್ರೆಸ್‌, ಜೆಡಿಎಸ್‌ ಸ್ಪರ್ಧೆಯ ಮೇಲೆ ಅವಮಾನ ಮಾಡುತ್ತಿವೆ.

ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸಂಸದರಿದ್ದರೂ ಆ ಸ್ಥಾನವನ್ನು ಕಾಂಗ್ರೆಸ್‌ಗೆ ಉಳಿಸಿಕೊಳ್ಳಲಾಗದಿರುವ ನೋವು ಅವರನ್ನು ಕಾಡುತ್ತಿರುವುದು ದುಃಖದ ಸಂಗತಿ ಎಂದು ಹೇಳಿದರು. ಆರ್‌.ವಿ.ದೇಶಪಾಂಡೆ ಅವರು ಪ್ರಭಾವಿ ನಾಯಕರಾಗಿದ್ದು, ಕಾಂಗ್ರೆಸ್‌ ಸರ್ಕಾರವಿರಲಿ, ಸಮ್ಮಿಶ್ರ ಸರ್ಕಾರವಿರಲಿ ಅವರು ಕೈಗಾರಿಕಾ ಸಚಿವರಾಗಿದ್ದವರು.

Advertisement

ಸುದೀರ್ಘ‌ ಕಾಲ ಸಚಿವರಾಗಿ ಕಾರ್ಯ ನಿರ್ವಹಿಸಿದವರು. ಅಂಥವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮನೆಗೆ ಹೋಗಿ ಬಂದಿದ್ದಾರೆ. ಅವರೇನು ಕಾಂಗ್ರೆಸ್‌ಗೆ ಕ್ಷೇತ್ರ ಬಿಟ್ಟುಕೊಡಿ ಎಂದು ಕೇಳಿದರೋ ಅಥವಾ ಪುತ್ರನನ್ನೇ ಜೆಡಿಎಸ್‌ಗೆ ಸೇರಿಸಿಕೊಳ್ಳಿ ಎಂದು ಕೋರಿದರೋ ಗೊತ್ತಿಲ್ಲ. ಒಟ್ಟಾರೆ ಮೈತ್ರಿಯಿಂದ ಕಾಂಗ್ರೆಸ್‌ ನಾಯಕರು ದಯನೀಯ ಸ್ಥಿತಿಗೆ ತಲುಪಿದ್ದಾರೆ ಎಂದು ತಿಳಿಸಿದರು.

ಮೈತ್ರಿ ನಾಯಕರಿಗೆ ಹತಾಶೆ: ಮೈತ್ರಿ ಪಕ್ಷಗಳ ನಾಯಕರು ಹತಾಶರಾಗಿದ್ದಾರೆ. ಸಿದ್ದರಾಮಯ್ಯ ಅವರು ಮಂಡ್ಯ, ಹಾಸನದ ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಮಾತನಾಡುವಾಗ “ಗೆಟ್‌ಔಟ್‌’ ಎಂದು ಕೂಗಾಡಿದ್ದಾರೆ. ಇನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಧ್ಯಮದವರು, ಚಿತ್ರರಂಗ, ನಟರ ಕುರಿತೆಲ್ಲಾ ಕೂಗಾಡುತ್ತಿರುವುದು ಹತಾಶೆಯ ಪರಮಾವಧಿ. ಸುಮಲತಾ ಅವರು ಮಂಡ್ಯದಲ್ಲಿ ನಾಮಪತ್ರ ಸಲ್ಲಿಸುವಾಗ ವ್ಯಕ್ತವಾದ ಜನಬೆಂಬಲ ಕಂಡು ಜೆಡಿಎಸ್‌ನ ಜಂಘಾಬಲವೇ ಕುಸಿದಿದೆ ಎಂದು ಹೇಳಿದರು.

ವಿನಯ್‌ ಕುಲಕರ್ಣಿ ವಿರುದ್ಧ ಎಫ್ಐಆರ್‌ ಹಾಕಬೇಕು: ಧಾರವಾಡದಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಲೀಕರಲ್ಲಿ ಒಬ್ಬರಾದ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ಮಾವ ಗಂಗಪ್ಪ ಸಿಂತಿ ಅವರ ಬಂಧನವಾಗಿದೆ. ಆದರೆ ಆಸ್ತಿಯ ಮೂಲ ಮಾಲೀಕರು ವಿನಯ್‌ ಕುಲಕರ್ಣಿ.

ಅವರ ಪತ್ನಿಯ ತಂದೆಯ ಹೆಸರಿನಲ್ಲಿ ಆಸ್ತಿಯಿದ್ದರೂ ಅದು ವಿನಯ್‌ ಕುಲಕರ್ಣಿ ಅವರ ಬೇನಾಮಿ ಆಸ್ತಿಯಾಗಿದೆ. ಹಾಗಾಗಿ ಕೂಡಲೇ ಅವರ ವಿರುದ್ಧ ಎಫ್ಐಆರ್‌ ದಾಖಲಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡುವಂತೆ ಕೆಪಿಸಿಸಿ ಕಚೇರಿಯಲ್ಲೇ ಕರೆ ನೀಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬಂಧನ ಕೂಡ ಆಗಿಲ್ಲ. ಕಾಂಗ್ರೆಸ್‌ನ ಈ ಧೋರಣೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.

ಶೂನ್ಯ ಸಂಪಾದನೆ: ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿಗೌಡ, ಪುತ್ರನ ರಾಜಕೀಯ ಪ್ರವೇಶಕ್ಕೆ ತಯಾರಿಯಲ್ಲಿ ತೊಡಗಿರುವ ಮುಖ್ಯಮಂತ್ರಿಗಳು ಧಾರವಾಡದಲ್ಲಿ ಕಟ್ಟಡ ಕುಸಿತ ಘಟನಾ ಸ್ಥಳಕ್ಕೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಲಿಲ್ಲ. ಜೆಡಿಎಸ್‌ ಈ ಬಾರಿ ಎಲ್ಲ ಸ್ಥಾನ ಕಳೆದುಕೊಂಡು ಶೂನ್ಯ ಸಂಪಾದನೆ ಮಾಡಲಿದೆ. ಮುಖ್ಯಮಂತ್ರಿಗಳು ತಮ್ಮ ಸ್ವಾರ್ಥ ಸಾಧನೆ ಬಿಟ್ಟು ಧಾರವಾಡಕ್ಕೆ ಭೇಟಿ ನೀಡಲಿ ಎಂದು ಆಗ್ರಹಿಸಿದರು. ಸಹ ವಕ್ತಾರರಾದ ಎ.ಎಚ್‌.ಆನಂದ್‌, ಎಸ್‌.ಪ್ರಕಾಶ್‌, ಜಿ.ಎನ್‌. ಹೆಗಡೆ, ಮಾಳವಿಕಾ ಅವಿನಾಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next