ಇತ್ತೀಚೆಗಷ್ಟೇ ಸುದೀಪ್ ಅಭಿನಯದ “ಪೈಲ್ವಾನ್’ನಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದ ಕನ್ನಡಿಗರೇ ಆದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಇದೀಗ “ಫಿರಂಗಿಪುರ’ ಎಂಬ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಬುಧವಾರ ಸಾಕಷ್ಟು ಕೇಳಿ ಬಂತು. ಅದಕ್ಕೆ ಸರಿಯಾಗಿ ನಿರ್ದೇಶಕ ಜನಾರ್ಧನ್ ಮತ್ತು ಚಿತ್ರತಂಡದ ಇತರೆ ಸದಸ್ಯರು ಸುನೀಲ್ ಶೆಟ್ಟಿ ಜೊತೆಗೆ ಇರುವ ಒಂದಿಷ್ಟು ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡಿದವು. ಇನ್ನೇನು ಸುನೀಲ್ ಶೆಟ್ಟಿ ಮತ್ತೂಂದು ಕನ್ನಡದ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಎಲ್ಲರೂ ಅಂದುಕೊಳ್ಳುವಷ್ಟರಲ್ಲೇ, ಒಂದು ಬಾಂಬ್ ಬಿದ್ದಿದೆ.
ಅದೇನೆಂದರೆ, ಈ ವಿಷಯ ತಿಳಿದ ಸುನೀಲ್ ಶೆಟ್ಟಿ ಒಂದು ಟ್ವೀಟ್ ಮಾಡಿದ್ದಾರೆ. “ಪೈಲ್ವಾನ್’ ಚಿತ್ರದಲ್ಲಿ ನಟಿಸುತ್ತಿರುವುದು ಬಿಟ್ಟರೆ, ಕನ್ನಡದಲ್ಲಿ ಬೇರೆ ಯಾವ ಚಿತ್ರದಲ್ಲೂ ನಟಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಇನಷ್ಟು ಚಿತ್ರಗಳಲ್ಲಿ ನಟಿಸುವ ಆಸೆ ಇದೆಯಾದರೂ, ಸದ್ಯಕ್ಕೆ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿಲ್ಲ ಎಂದು ಖುದ್ದು ಅವರೇ ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ.
ಚಿತ್ರತಂಡದವರು ನೋಡಿದರೆ, ಸುನೀಲ್ ಶೆಟ್ಟಿ ತಮ್ಮ ಚಿತ್ರದಲ್ಲಿ ನಟಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಇನ್ನೊಂದು ಕಡೆ, ಖುದ್ದು ಸುನೀಲ್ ಶೆಟ್ಟಿ ತಾವು “ಪೈಲ್ವಾನ್’ ಬಿಟ್ಟರೆ ಯಾವೊಂದೂ ಚಿತ್ರದಲ್ಲೂ ನಟಿಸುತ್ತಿಲ್ಲ ಎನ್ನುತ್ತಿದ್ದಾರೆ. ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂದು ಗೊಂದಲವಾಗುವುದು ಹೌದು.
ಈ ಕುರಿತು ನಿರ್ದೇಶಕರನ್ನು ಕೇಳಿದರೆ, ಸುನೀಲ್ ಶೆಟ್ಟಿ ಅವರು ಒಪ್ಪಿರುವುದು ಹೌದು, ಅವರಿಗೂ ಇನ್ನೂ ಆಗುವುದು ಬಾಕಿ ಇದೆ ಎನ್ನುತ್ತಾರೆ. “ನಾನು ಮತ್ತು ನನ್ನ ತಂಡದವರು ಸುನೀಲ್ ಶೆಟ್ಟಿ ಅವರನ್ನು ಭೇಟಿ ಮಾಡಿ ಅವರಿಗೆ ಕಥೆ ಮತ್ತು ಪಾತ್ರವನ್ನು ಹೇಳಿ ಬಂದಿದ್ದೇವೆ. ಅವರೂ ಸಹ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಆದರೆ, ಅವರಿಗೆ ಇನ್ನೂ ಅಡ್ವಾನ್ಸ್ ಕೊಟ್ಟಿಲ್ಲ. ಇನ್ನಷ್ಟೇ ಕೊಡಬೇಕು. ಈಗ ನಾನು ಗುಜರಾತ್‌ಗೆ ಬಂದಿದ್ದೇನೆ. ಸುನೀಲ್ ಶೆಟ್ಟಿ ಅವರು ಸಹ ನಾಳೆ ಗುಜರಾತ್‌ಗೆ ಬರುವವರಿದ್ದಾರೆ. ಮತ್ತೂಮ್ಮೆ ಭೇಟಿ ಮಾಡಿ, ಅಗ್ರೀಮೆಂಟ್ ಮಾಡಿಕೊಳ್ಳುತ್ತೇವೆ. ಆ ನಂತರ ಎಲ್ಲವೂ ಪಕ್ಕಾ ಆಗಲಿದೆ’ ಎನ್ನುತ್ತಾರೆ ಜನಾರ್ಧನ್.
“ಫಿರಂಗಿಪುರ’ ಚಿತ್ರ ಇಷ್ಟರಲ್ಲಾಗಲೇ ಶುರುವಾಗಬೇಕಿತ್ತು. ಕಳೆದ ವರ್ಷವೇ ಚಿತ್ರತಂಡದವರು ಪತ್ರಿಕಾಗೋಷ್ಠಿ ಮಾಡಿ, ಸದ್ಯದಲ್ಲೇ ಚಿತ್ರೀಕರಣ ಶುರು ಮಾಡುವುದಾಗಿ ಹೇಳಿದ್ದರು. ಕಾರಣಾಂತರಗಳಿಂದ ಚಿತ್ರ ತಡವಾಗಿದೆ. ಈ ಚಿತ್ರವನ್ನು ಅದಾನಿ ಟೆಲಿಫಿಲ್ಮ್ಸ್ ಸಂಸ್ಥೆಯು ನಿರ್ಮಿಸುತ್ತಿದ್ದು, “ಫಿರಂಗಿಪುರ’ ಆ ಸಂಸ್ಥೆಯ ಮೊದಲ ಕನ್ನಡ ಚಿತ್ರವಾಗಲಿದೆ.
ಈ ಚಿತ್ರವು ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗುತ್ತಿದ್ದು, ಚಿತ್ರದಲ್ಲಿ ಸಂಚಾರಿ ವಿಜಯ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಮೂರು ಶೇಡ್‌ಗಳಿದ್ದು, ಸುನೀಲ್ ಶೆಟ್ಟಿ ರಾಜನಾಗಿ ಅಭಿನಯಿಸುತ್ತಿದ್ದಾರಂತೆ. ಈ ಚಿತ್ರಕ್ಕೆ ಜನಾರ್ಧನ್ ಅವರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿ, ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಕೋನಪ್ಪ ರೆಡ್ಡಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಈಗಾಗಲೇ 12 ಜನರ ಗ್ರಾಫಿಕ್ಸ್ ತಂಡವು ಕಳೆದ ಒಂಬತ್ತು ತಿಂಗಳುಗಳಿಂದ ಚಿತ್ರ ಗ್ರಾಫಿಕ್ಸ್ ಕೆಲಸವನ್ನು ಮಾಡುತ್ತಿದ್ದು, ಈ ಚಿತ್ರ ಸದ್ಯದಲ್ಲೇ ಪ್ರಾರಂಭವಾಗುವ ಸಾಧ್ಯತೆ ಇದೆ.