ವಾಡಿ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಲಕ್ಷಾಂತರ ರೂ. ವೆಚ್ಚದ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಸಂಪೂರ್ಣ ಅವೃಜ್ಞಾನಿಕ ಪದ್ಧತಿಯಿಂದ ಕೂಡಿದ್ದು, ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಪುರಸಭೆ ಸದಸ್ಯ, ಬಿಜೆಪಿ ಹಿರಿಯ ಮುಖಂಡ ಭೀಮಶಾ ಜಿರೊಳ್ಳಿ ಆರೋಪಿಸಿದ್ದಾರೆ.
ಪುರಸಭೆ ವ್ಯಾಪ್ತಿಯ ವಾರ್ಡ್ 13ರ ಮಲ್ಲಿಕಾರ್ಜುನ ದೇವಸ್ಥಾನ ಬಡಾವಣೆ, ನೇತಾಜಿ ನಗರದಲ್ಲಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿ ಪರಿಶೀಲನೆ ನಡೆಸುವ ಮೂಲಕ ಕಾಮಗಾರಿ ಸ್ಥಳದಲ್ಲಿ ಕಿರಿಯ ಅಭಿಯಂತರ ಅಶೋಕ ಪುಟ್ಪಾಕ್ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿ ಅವರು ಮಾತನಾಡಿದರು.
ಪೈಪ್‌ಗ್ಳನ್ನು ತಂದು ಐದಾರು ತಿಂಗಳು ರಸ್ತೆ ಮೇಲೆ ಎಸೆಯಲಾಗಿತ್ತು. ನೆಲದ ಮಣ್ಣು ತೆಗೆಯದೆ ಅಡ್ಡಾದಿಡ್ಡಿ ಪೈಪ್‌ಲೈನ್ ಜೋಡಣೆ ಮಾಡಿದ್ದೀರಿ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಕ್ಕಳು ಮತ್ತು ವಯಸ್ಕರು ಕಬ್ಬಿಣದ ಪೈಪ್‌ಗ್ಳನ್ನು ಎಡವಿ ಬೀಳುತ್ತಿದ್ದಾರೆ. ಇಡೀ ಕಾಮಗಾರಿ ಕಳಪೆ ಗುಣಮಟ್ಟ, ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ದೂರಿದರು.
ಪುರಸಭೆ ಸದಸ್ಯರೆ ಗುತ್ತಿಗೆದಾರರು: ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಮಂಜೂರಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಆಯಾ ವಾರ್ಡ್ ಸದಸ್ಯರೆ ಗುತ್ತಿಗೆದಾರರಾಗಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚರಂಡಿ, ರಸ್ತೆ, ಪೈಪ್‌ಲೈನ್, ಶೌಚಾಲಯ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪುರಸಭೆ ಕಾಂಗ್ರೆಸ್ ಸದಸ್ಯರೆ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮೂಲ ಗುತ್ತಿಗೆದಾರನಿಂದ ಕೆಲಸ ಪಡೆದು ತಮ್ಮ ವಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಗುತ್ತಿಗೆದಾರರು ಪುರಸಭೆ ಖಜಾನೆ ಲೂಟಿ ಮಾಡುತ್ತಿದ್ದಾರೆ. ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಅವರು ಮಾಡಿದ್ದೇ ಕಾನೂನು ಎನ್ನುವಂತಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ಭ್ರಷ್ಟಾಚಾರ ನಡೆಸುತ್ತಿದ್ದರೂ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಮೌನ ವಹಿಸಿದ್ದಾರೆ. ಕುಡಿಯುವ ನೀರಿನ ಪೈಪ್‌ಗ್ಳನ್ನು ನೆಲದಡಿ ಹಾಕಬೇಕು. ಗುತ್ತಿಗೆದಾರಿಕೆಯಲ್ಲಿ ತೊಡಗಿರುವ ಪುರಸಭೆ ಸದಸ್ಯರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು. ಕಾಂಗ್ರೆಸ್ ಸದಸ್ಯರ ಕೈಗೊಂಬೆಯಂತೆ ಕುಣಿಯುತ್ತಿರುವ ಮುಖ್ಯಾಧಿಕಾರಿ ಮತ್ತು ಕಿರಿಯ ಅಭಿಯಂತರರ ವಿರುದ್ಧ ಬಿಜೆಪಿ ಹೋರಾಟ ರೂಪಿಸಲಿದೆ ಎಂದು ಭೀಮಶಾ ಜಿರೊಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕಿರಿಯ ಅಭಿಯಂತರ ಅಶೋಕ ಪುಟ್ಪಾಕ್, ಪೈಪ್‌ಲೈನ್ ಅಳವಡಿಕೆಯಲ್ಲಿ ಗುತ್ತಿಗೆದಾರ ಎಡವಿದ್ದಾನೆ. ಆತನಿಗೆ ಎಚ್ಚರಿಕೆ ನೀಡಿ ಕಾಮಗಾರಿ ಸರಿಪಡಿಸಲಾಗುವುದು ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಮತ್ತಷ್ಟು ಅಸಮಧಾನವಾದ ಭೀಮಶಾ ಜಿರೊಳ್ಳಿ, ಗುತ್ತಿಗೆದಾರನ ಕಾಮಗಾರಿ ಪರಿಶೀಲನೆ ಮಾಡಬೇಕಾದ ನೀವು ಕಚೇರಿಯಲ್ಲಿ, ಹೋಟೆಲ್‌ಗಳಲ್ಲಿ ಕುಳಿತು ಬಿಲ್ ಬರೆಯುತ್ತಿರಿ. ನಿಮಗೆ ಸಾರ್ವಜನಿಕರ ಕಷ್ಟ ಅರ್ಥವಾಗೋದಿಲ್ಲ ಎಂದು ಕಿಡಿಕಾರಿದರು.
ಪುರಸಭೆ ಬಿಜೆಪಿ ಸದಸ್ಯ ಭೀಮರಾಯ ನಾಯ್ಕೋಡಿ, ಗುತ್ತಿಗೆದಾರ ಹಾಜಪ್ಪ ಲಾಡ್ಲಾಪುರ, ಮುಖಂಡರಾದ ಶ್ರವಣಕುಮಾರ ಮೌಸಲಗಿ, ರಘುವೀರ ಪವಾರ ಇದ್ದರು.