ಕಲಬುರಗಿ: ವೇಗವಾಗಿ ಬೆಳೆಯುತ್ತಿರುವ ಮಹಾ ನಗರದಲ್ಲಿ ನಳದ ನೀರು ಮನೆಗೆ ಬರುವ ಹಾಗೆ ಮುಂದಿನ ದಿನಗಳಲ್ಲಿ ಮನೆ-ಮನೆಗೂ ಪೈಪ್‌ಲೈನ್ ಮೂಲಕ ನೈಸರ್ಗಿಕ ಆಧಾರಿತ ಅನಿಲ (ಗ್ಯಾಸ್) ಬರಲಿದೆ. ಈ ನಿಟ್ಟಿನಲ್ಲಿ “ಎಜಿ’ ಮತ್ತು “ಪಿ’ ಪ್ರಥಮ ಕಂಪನಿಯು ಕಾರ್ಯೋನ್ಮುಖವಾಗಿದೆ. ಮನೆಗಳಿಗೆ ನೈಸರ್ಗಿಕ ಆಧಾರಿತ (ಪರಿಸರ ಸ್ನೇಹಿ) ಗ್ಯಾಸ್ ಪೂರೈಕೆ ನಿಟ್ಟಿನಲ್ಲಿ ಮೂರು ತಿಂಗಳೊಳಗೆ ಪೈಪ್‌ಲೈನ್ ಕಾರ್ಯ ಪೂರ್ಣಗೊಳಿಸಲು ಯೋಜನೆ ಹೊಂದಿ ಕಾರ್ಯಪ್ರವೃತ್ತ ಹೊಂದಲಾಗಿದೆ ಎಂದು “ಎಜಿ’ ಮತ್ತು “ಪಿ’ ಪ್ರಥಮ್ ಕಂಪನಿಯ ಕ್ಲಸ್ಟರ್ ಮಾರುಕಟ್ಟೆ ಮುಖ್ಯಸ್ಥ ದುಷ್ಯಂತ ವರಂದಾಗಿ, ಪ್ರಾದೇಶಿಕ ಮುಖ್ಯಸ್ಥ ದೇಬಾಶಿಶ್ ಚಟ್ಟೋಪಾಧ್ಯಾಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೂರು ತಿಂಗಳ ಅವಧಿಯೊಳಗೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸುವುದರ ಜತೆಗೆ 17ಸಾವಿರ ನೋಂದಣಿ ಮಾಡುವ ಗುರಿ ಹೊಂದಲಾಗಿದೆ. ಪ್ರಮುಖವಾಗಿ ಈ ನೈಸರ್ಗಿಕ ಅನಿಲದಿಂದ ಸಾಕಷ್ಟು ಉಳಿತಾಯ, ಜತೆಗೆ ಪರಿಸರ ಸ್ನೇಹಿಯಾಗಿರುವುದರಿಂದ ಈಗಾಗಲೇ ಜಾರಿಯಾದ ನಗರದಲ್ಲಿ ಜನಮನ್ನಣೆ ಗಳಿಸಿದೆ ಎಂದು ವಿವರಿಸಿದರು.
ಗೃಹ ಬಳಕೆ, ವಾಣಿಜ್ಯ ವ್ಯವಹಾರಗಳಿಗೆ ಮತ್ತು ಕೈಗಾರಿಕೆಗಳಿಗೆ ಪೈಪ್‌ಲೈನ್ ಮೂಲಕ ನೈಸರ್ಗಿಕ ಗ್ಯಾಸ್ ಮತ್ತು ವಾಹನಗಳಲ್ಲಿ ಬಳಸಲು ನೈಸರ್ಗಿಕ ಅನಿಲ (ಅಓಉ) ವನ್ನು ಪ್ರತ್ಯೇಕವಾಗಿ ಪೂರೈಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯಿಂದ ನೀಡಲಾದ ಪರವಾನಗಿ ಹಾಗೂ ಇತರ ಸವಲತ್ತುಗಳನ್ನು ನೀಡಲು ಕಂಪನಿ ಆಸಕ್ತಿ ಹೊಂದಿದೆ ಎಂದು ತಿಳಿಸಿದರು.
ಅನಿಲ ವಾಹನಗಳನ್ನು ಹೊಂದಿದ್ದಲ್ಲಿ 30ರಿಂದ 50 ಸಾವಿರ ರೂ. ಉಳಿತಾಯವಾಗುತ್ತದೆ. ಒಟ್ಟಾರೆ ಶೇ. 30ರಷ್ಟು ಉಳಿತಾಯವಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ವ್ಯಾಪಾರ ವಿಸ್ತರಣೆ ಕಾರ್ಯತಂತ್ರದ ಭಾಗವಾಗಿ “ಎಜಿ ಆ್ಯಂಡ್ ಪಿ’ ಪ್ರಥಮ ವಿಜಯಪುರ ಜಿಲ್ಲೆಯಲ್ಲಿ ನೈಸರ್ಗಿಕ ಅನಿಲದ ಪೂರೈಕೆ ಮತ್ತು ಬೇಡಿಕೆಯ ಅಂತರ ಕಡಿಮೆ ಮಾಡಲು ವಿಜಯಪುರ ನಗರದ ಬಳಿ ಎಲ್‌ಸಿ ಎನ್‌ಜಿ ಸ್ಟೇಷನ್ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಗೃಹ ಬಳಕೆ ಅನಿಲ ವಿತರಣೆ ಮತ್ತು ಸಿಎನ್‌ಜಿ ಲಭ್ಯತೆಯನ್ನು ಪರಿಣಾಮಕಾರಿಯಾಗಿಸಲು ಸ್ಟೇಷನ್ ಸ್ಥಾಪಿಸಲಾಗುತ್ತಿದೆ. ಇದರಿಂದ ನೈಸರ್ಗಿಕ ಆಧಾರಿತ ಅನಿಲ ಜನತೆಗೆ ದೊರೆಯಲಿದೆ ಎಂದರು.
ವಿಜಯಪುರ ಎಲ್‌ಸಿಎನ್‌ಜಿ ಸ್ಟೇಷನ್ ಮತ್ತು ಕಲಬುರಗಿ ಸ್ಟೀಲ್ ಪೈಪ್‌ಲೈನ್ ಸಂಪರ್ಕದ ನಿರ್ಮಾಣ ಯೋಜನೆ ಕಲಬುರಗಿ ಮತ್ತು ವಿಜಯಪುರದ ಜನರಿಗೆ ತಮ್ಮ ಇಂಧನ ಬಿಲ್‌ನ್ನು ದುಬಾರಿ ಪೆಟ್ರೋಲ್‌ಗಿಂತ ಶೇ. 30ರಷ್ಟರ ವರೆಗೆ ಕಡಿಮೆ ಮಾಡುವುದಲ್ಲದೇ ಮತ್ತು ಎಲ್‌ಪಿಜಿ ಸಿಲಿಂಡರ್‌ಗಿಂತ ಅಡುಗೆ ಇಂಧನದಲ್ಲಿ ಶೇ. 20ರ ವರೆಗೆ ಉಳಿತಾಯವಾಗುತ್ತದೆ ಎಂದು ಪುನರುಚ್ಚರಿಸಿದರು.
ಎಜಿ ಮತ್ತು ಪಿ ಪ್ರಥಮ್ ಕಂಪನಿಯ ಪೈಪ್‌ಲೈನ್ ಮುಖಾಂತರದ ಅನಿಲ ಪೂರೈಕೆಯಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ದೊರಕಲಿದೆ. ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪ್ರಮುಖವಾಗಿ ನೇರ ಹಾಗೂ ಪರೋಕ್ಷವಾಗಿ ಸಹಸ್ರಾರು ಜನರಿಗೆ ಉದ್ಯೋಗ ದೊರಕಲಿದೆ. ಎಜಿ ಮತ್ತು ಪ್ರಥಮ್ 2027ರ ವೇಳೆಗೆ ಕರ್ನಾಟಕದಲ್ಲಿ 5ಸಾವಿರ ಕೋ. ರೂ ಹೂಡಿಕೆಯೊಂದಿಗೆ 6 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಿದೆ.
–ದುಷ್ಯಂತ ವರಂದಾನಿ, ಕ್ಲಸ್ಟರ್ ಮಾರುಕಟ್ಟೆ ಮುಖ್ಯಸ್ಥ , ಎಜಿ ಮತ್ತು ಪಿ ಪ್ರಥಮ್ ಕಂಪನಿ.