ಚಿತ್ರದುರ್ಗ: ಪೈಪ್‌ಲೈನ್ ಮೂಲಕ ಪರಿಸರ ಸ್ನೇಹಿಯಾಗಿ ಗ್ಯಾಸ್ ಸಂಪರ್ಕ ಕಲ್ಪಿಸಬಹುದಾದ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಶನ್ ಯೋಜನೆ ಚಿತ್ರದುರ್ಗ, ದಾವಣಗೆರೆ ಜಿಲ್ಲೆ ಸೇರಿದಂತೆ ದೇಶದ 129 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ಇಲ್ಲಿನ “ದುರ್ಗದ ಸಿರಿ’ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೆಹಲಿಯ ವಿಜ್ಞಾನಭವನದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದು ಅತ್ಯಂತ ಉತ್ತಮ ಕಾರ್ಯವಾಗಿದೆ. ಆದರೆ ಚಿತ್ರದುರ್ಗ ನಗರದಲ್ಲಿ ರಸ್ತೆ ನಿರ್ಮಾಣ ನಡೆಯುತ್ತಿದ್ದು, ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ರಸ್ತೆಗಳನ್ನು ಗೇಲ್ ಇಂಡಿಯಾ ಕಂಪನಿಯಿಂದ ಮತ್ತೆ ಅಗೆಯಲಾಗುತ್ತಿದೆ. ಕಂಪನಿಯವರು ಅಗೆದ ರಸ್ತೆಯನ್ನು ಮತ್ತೆ ದುರಸ್ತಿ ಮಾಡಿಸಿಕೊಡಬೇಕು ಎಂದು ಸೂಚಿಸಿದರು.
ಪೈಪ್‌ಲೈನ್ ಹಾದು ಹೋಗಿರುವ ಹಳ್ಳಿಗಳಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿಕೊಡುವ ಭರವಸೆಯನ್ನು ಗೇಲ್ ಕಂಪನಿ ಅಧಿಕಾರಿಗಳು ನೀಡಿದ್ದಾರೆ. ಜಿಲ್ಲೆಯ ಬಹುತೇಕ ಕಡೆ ಇದರಿಂದ ಅನುಕೂಲವಾಗಲಿದೆ ಎಂದರು.
ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ಸ್ನೇಹಿಯಾಗಿರುವ ಸಿಎನ್‌ಜಿ (ಕಾಂಪ್ರಸ್ ನ್ಯಾಚುರಲ್ ಗ್ಯಾಸ್) ಅನ್ನು ದೇಶದ 129 ಜಿಲ್ಲೆಗಳ 65 ಭೌಗೋಳಿಕ ಪ್ರದೇಶಗಳಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ. ಇದು ಎಲ್‌ಪಿಜಿ ಗ್ಯಾಸ್ ಗಿಂತ ಅತ್ಯಂತ ಉಪಯುಕ್ತವಾಗಿದೆ. ಈ ಗ್ಯಾಸ್ ಸಂಪರ್ಕ ಪಡೆಯುವುದರಿಂದ ಹೆಚ್ಚಿನ ಅಪಾಯವೂ ಇರುವುದಿಲ್ಲ. ಗಾಳಿಗಿಂತ ಹಗುರ ಇರುವುದರಿಂದ ಲೀಕ್ ಆದರೂ ಹೆಚ್ಚೇನು ಅನಾಹುತ ಆಗುವುದಿಲ್ಲ. ಸಾರಿಗೆ ವೆಚ್ಚವಾಗದು. ತೂಕ, ಅಳತೆಯಲ್ಲಿ ಮೋಸವೂ ಆಗುವುದಿಲ್ಲ. ಬಳಕೆದಾರ ಗ್ರಾಹಕರಿಗೆ ಕಡಿಮೆ ದರದಲ್ಲಿ ಈ ಗ್ಯಾಸ್ ಲಭ್ಯವಾಗಲಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಪ್ರಾಕೃತಿಕ ಗ್ಯಾಸ್ ಅನ್ನು ಕೇವಲ ಮನೆಗಳಿಗೆ ಮಾತ್ರ ಪೂರೈಕೆ ಮಾಡುವುದಿಲ್ಲ. ಕೈಗಾರಿಕೆಗಳಿಗೆ, ಆಟೋ, ಜನರೇಟರ್‌ಗಳಿಗೆ, ಎಲ್ಲ ರೀತಿಯ ವಾಹನಗಳಿಗೆ ಬಳಕೆ ಮಾಡಬಹುದಾಗಿದೆ. ಇದಕ್ಕೆ ಗೇಲ್ ಕಂಪನಿ ವ್ಯವಸ್ಥೆ ಮಾಡಲಿದೆ. ಅಲ್ಲದೆ ಈ ಯೋಜನೆ ಅನುಷ್ಠಾನಕ್ಕಾಗಿ ಒಂದಿಷ್ಟು ಭೂಮಿಯ ಅಗತ್ಯವಿದ್ದು, ಭೂಸ್ವಾಧಿನ ಮಾಡಿಕೊಡಲಾಗುತ್ತದೆ. ಜಿಲ್ಲೆಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಯುನಿಸನ್ ಎನ್‌ವಿರೊ ಪ್ರೈವೆಟ್ ಲಿಮಿಟೆಡ್ ಅನುಷ್ಠಾನಾಧಿಕಾರಿ ಘನಶ್ಯಾಂ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೇಲ್ ಕಂಪನಿ ಅಧಿಕಾರಿಗಳು ಉಪಸ್ಥಿತರಿದ್ದರು.