Advertisement

ಮಣಿಪಾಲದಲ್ಲಿ ಪೈಪ್‌ಲೈನ್‌ ಬಿರುಕು: ಮನೆಗಳಿಗೆ ಕಲುಷಿತ ನೀರು

08:17 PM Nov 20, 2021 | Team Udayavani |

ಉಡುಪಿ: ನಗರಸಭೆಯ ಮಣಿಪಾಲದ ಮುಖ್ಯ ವಾಟರ್‌ ಟ್ಯಾಂಕ್‌ನ ಪೈಪ್‌ಲೈನ್‌ ಒಂದು ಹಾನಿಯಾದ ಪರಿಣಾಮ ಮಾಧವಕೃಪಾ ಶಾಲೆಯ ಸಮೀಪದಿಂದ ಅಂಚೆ ಕಚೇರಿ ಕಡೆಗೆ ಸಾಗುವ ಕೊಳವೆ ಮಾರ್ಗದಲ್ಲಿ ಯಥೇತ್ಛ ನೀರು ಪೋಲಾಗುವ ಜತೆ ಕಲುಷಿತ ನೀರು ಶುದ್ಧ ಕುಡಿಯುವ ನೀರಿನ ಸಂಪರ್ಕದ ಪೈಪ್‌ಲೈನ್‌ ಸೇರುತ್ತಿದೆ.

Advertisement

ನೀರು ಪೂರೈಕೆಯಾಗುವ ಕೆಲವು ಸಂಪರ್ಕದಲ್ಲಿ ಕೊಳಕು ನೀರು ಬರುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ. ನಗರಕ್ಕೆ ನೀರು ಪೂರೈಸಲು ವಾರಾಹಿ ಪೈಪ್‌ಲೈನ್‌ ಪ್ರಾಜೆಕ್ಟ್ ಕಾಮಗಾರಿ ಚುರುಕಾಗಿ ಸಾಗುತ್ತಿದೆ. ಬೃಹತ್‌ ಯಂತ್ರ ಬಳಸಿ ಕಾಮಗಾರಿ ನಡೆಸುತ್ತಿರುವುದರಿಂದ ಕೆಲವು ದಿನಗಳ ಹಿಂದೆ ನೀರು ಪೂರೈಸುವ ಹಳೇ ಕೊಳವೆ ಮಾರ್ಗಕ್ಕೆ ಹಾನಿಯಾಗಿದ್ದು, ದೊಡ್ಡಮಟ್ಟದಲ್ಲಿ ನೀರು ಪೋಲಾಗುತ್ತಿದೆ. ಸಾಕಷ್ಟು ದಿನ ಕಳೆದರೂ ಕಾಮಗಾರಿಗೆ ಸಂಬಂಧಪಟ್ಟವರು ಅಥವಾ ನಗರಸಭೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಕೆಲವು ಸಂಪರ್ಕದಲ್ಲಿ ಕೊಳಕು ನೀರು:  

ಮಣಿಪಾಲ, ಈಶ್ವರನಗರ ಮೊದಲಾದ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಕೊಳಾಯಿಯಲ್ಲಿ ಕಲುಷಿತ ನೀರು ಬರುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಮನೆಯ ನೀರಿನ ಟ್ಯಾಪ್‌ ತಿರುಗಿಸಿದಾಗ ಮಣ್ಣು ಮಿಶ್ರಿತ ಕೆಂಪು ನೀರು ಬರುತ್ತಿದೆ. ಮಾಧವಕೃಪಾ ಶಾಲೆ ಸಮೀಪ ಪೈಪ್‌ಲೈನ್‌ಗೆ ಗಂಭೀರ ಹಾನಿಯಾಗಿರುವುದೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ತಿಳಿಸಿದರು.

ಪೈಪ್‌ಲೈನ್‌ನಲ್ಲಿ ನೀರು ಪೂರೈಕೆ ಇದ್ದಾಗ ಸಾಕಷ್ಟು ನೀರು ಸೋರಿಕೆಯಾಗುತ್ತದೆ. ಪೂರೈಕೆ ಬಂದ್‌ ಆದಾಗ ನೀರು ಹಿಮ್ಮುಖ ಒತ್ತಡದಲ್ಲಿ ಮಣ್ಣಿನ ಅಂಶ ಸೇರಿ ಕೆಳ ಭಾಗದ ಸಂಪರ್ಕಕ್ಕೆ ಸೇರಿಕೊಳ್ಳುತ್ತದೆ ಎಂದು ಕೆಲವರು  ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಪರಿಶೀಲಿಸಿ ಕ್ರಮ :

ನಗರಕ್ಕೆ  ನೀರು ಪೂರೈಸುವ ಸ್ವರ್ಣಾ ನದಿ ಬಜೆ ಡ್ಯಾಂನಲ್ಲಿ ಮತ್ತು ಮಣಿಪಾಲ ಸೇರಿದಂತೆ ವಿಶೇಷ ತಂತ್ರಜ್ಞಾನ ಸಹಾಯದಿಂದ ಎರಡು, ಮೂರು ಹಂತದಲ್ಲಿ ನೀರನ್ನು ಸಂಪೂರ್ಣ ಶುದ್ಧೀಕರಿಸಿ, ಎಲ್ಲ ಮನೆಗಳಿಗೆ ಪೂರೈಸಲಾಗುತ್ತಿದೆ. ಬೇರೆ ಜಾಗದಲ್ಲಿ ಸಣ್ಣ ಪೈಪ್‌ಲೈನ್‌ಗೆ ಹಾನಿಯಾಗಿದ್ದರೆ, ಕೆಲವು ಪೈಪುಗಳ ಸಂಪರ್ಕಕ್ಕೆ ಮಣ್ಣು ಮಿಶ್ರಿತ ನೀರು ಸೇರಿರುವ ಸಾಧ್ಯತೆ ಇದೆ. ಈ ಬಗ್ಗೆ ಸಾರ್ವಜನಿಕರು ನಿಖರ ಮಾಹಿತಿಯೊಂದಿಗೆ ದೂರು ಸಲ್ಲಿಸಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಎಇಇ ಮೋಹನ್‌ರಾಜ್‌ ತಿಳಿಸಿದ್ದಾರೆ.

ಮಣಿಪಾಲದಲ್ಲಿ ನೀರಿನ ಪೈಪ್‌ ಹಾನಿಯಾಗಿ ನೀರು ಸೋರಿಕೆಯಾಗುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು. ವಾರಾಹಿ ಕಾಮಗಾರಿ ವೇಳೆ ಪೈಪ್‌ಗೆ ಹಾನಿಯಾಗಿದ್ದಲ್ಲಿ ಅವರಿಂದಲೇ ಸರಿಪಡಿಸುವಂತೆ  ಸೂಚನೆ ನೀಡಲಾಗುವುದು. – ಸುಮಿತ್ರಾ ನಾಯಕ್‌, ಅಧ್ಯಕ್ಷೆ, ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next