Advertisement

ಹಿತ್ತಲ ಹೊನ್ನು ! ಪೈಪ್‌ ಕಾಂಪೋಸ್ಟ್‌

12:24 PM Jul 30, 2018 | Harsha Rao |

ಅಡುಗೆಮನೆಯಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಮತ್ತಿತರ ತ್ಯಾಜ್ಯಗಳು, ಮಜ್ಜಿಗೆ ಇದನ್ನೆಲ್ಲ ಪೈಪಿನೊಳಗೆ ತುಂಬಬಹುದು. ಆದರೆ ಗಟ್ಟಿಯಾಗಿರುವ ಚಿಪ್ಪುಗಳು, ಗೆರಟೆ, ಬೆಣ್ಣೆಹಣ್ಣಿನ ಬೀಜ, ಲಿಂಬೆ, ಕಿತ್ತಳೆ ಇತ್ಯಾದಿ ಸಿಟ್ರಸ್‌ ಅಂಶವಿರುವ ಹಣ್ಣುಗಳ ತ್ಯಾಜ್ಯ, ಬೇಯಿಸಿದ ಆಹಾರಗಳು, ಸಾಂಬಾರು, ಈರುಳ್ಳಿ ಸಿಪ್ಪೆ ಇದೊಂದನ್ನೂ ತುಂಬಿಸಬಾರದು. 

Advertisement

ಮನೆಯೊಳಗಿನ ತ್ಯಾಜ್ಯಗಳನ್ನು ತಿಪ್ಪೆಗೆ ಎಸೆದರೆ ದುರ್ವಾಸನೆ ಬೀರುತ್ತವೆ. ರೋಗಕಾರಕ ಅಣುಗಳ ಸೃಷ್ಟಿಗೆ ಕಾರಣವಾಗುತ್ತವೆ. ಆದರೆ ಇದೇ ತ್ಯಾಜ್ಯವನ್ನು ಗೊಬ್ಬರವಾಗಿಸಿದರೆ ಹಿತ್ತಲಿನಲ್ಲಿ ಹಸಿರಿನ ಹೊನ್ನು ಬೆಳೆಯಬಹುದು. ಇದರ ಪ್ರತ್ಯಕ್ಷ ನಿದರ್ಶನವೆಂದರೆ ರಾಜಗೋಪಾಲ ಭಟ್ಟರು.

ಗುರುವಾಯನಕೆರೆಯ ಹವ್ಯಕ ಭವನದ ಬಳಿ ಅವರ ಮನೆ, ಸಣ್ಣ ಹಿತ್ತಿಲು, ಒಂದು ಅಂಗಡಿ ಇದೆ. ಕೆಲವು ವರ್ಷಗಳ ಹಿಂದೆಯೇ ಅವರು ಕಸವನ್ನು ರಸವಾಗಿಸುವ ವಿದ್ಯೆಯಲ್ಲಿ ಪರಿಣತರು. ಏನಿದು ಈ ವಿದ್ಯೆಯೆಂದು ತಿಳಿಯಬೇಕಾದರೆ, ಅವರ ಮನೆಯಂಗಳದ ಸುತ್ತಲೂ ಇರುವ ವೈವಿಧ್ಯಮಯ ಗಿಡಗಳ ಸಾಲಿನಲ್ಲೊಮ್ಮೆ ಸುತ್ತಬೇಕು. ಕಣ್ಣಿಗೆ ರಾಚುವ ಹಚ್ಚ ಹಸಿರಿನ ನಡುವೆ ನೆಲದಲ್ಲಿ ಅಲ್ಲಲ್ಲಿ ಹೂಳಿದ ಪಿಸಿ ಪೈಪುಗಳು ಗಮನ ಸೆಳೆಯುತ್ತವೆ.

ಈ ಪೈಪುಗಳಲ್ಲಿದೆ ರಾಜಗೋಪಾಲ ಭಟ್ಟರು ತ್ಯಾಜ್ಯವನ್ನು ಹಸಿರ ಸಿರಿಯ ಚಿನ್ನವಾಗಿಸುವ ಗುಟ್ಟು. ಅದು ಪೈಪು ಕಾಂಪೋಸ್ಟ್‌. ವರ್ಷಗಳ ಹಿಂದೆಯೇ ಗ್ರಾಮ ಪಂಚಾಯಿತಿಗಳಿಗೆ ಇದರ ಪ್ರಯೋಜನದ ಬಗೆಗೆ ಜನರ ಗಮನ ಸೆಳೆಯುವಂತೆ ಆದೇಶಗಳು ಬಂದಿದ್ದರೂ ಅಳವಡಿಸಿದ ಅಧಿಕಾರಿ ವರ್ಗ ಅಪರೂಪ. ಆದರೆ ಭಟ್ಟರು ಅದನ್ನು ಅಳವಡಿಸಿದ್ದಾರೆ. ಹತ್ತು ಮಂದಿ ತಮ್ಮಲ್ಲೂ ಅನುಷ್ಠಾನಗೊಳಿಸಲು ಪ್ರೇರೇಪಿಸಿದ್ದಾರೆ. ಅವರ ಮಡದಿ, ನಿವೃತ್ತ ಶಿಕ್ಷಕಿ ಜಯಶ್ರೀ ಆಸ್ಥೆಯಿಂದ ಅದರ ನಿರ್ವಹಣೆ ಮಾಡುತ್ತಾರೆ.

ಪೇಟೆ-ಪಟ್ಟಣಗಳಲ್ಲಿರುವವರು ಕೂಡ ಪೈಪು ಕಾಂಪೋಸ್ಟಿನ ಲಾಭ ಹೊಂದಬಹುದೆಂದು ಹೇಳುತ್ತಾರೆ. ನಾಲ್ಕು ಮಿಲಿ ಲೀಟರ್‌ ದಪ್ಪವಿರುವ ಉತ್ತಮ ಗುಣಮಟ್ಟದ ಬಲವಾದ ಪಿವಿಸಿ ಪೈಪು ಆಯ್ದುಕೊಳ್ಳಬೇಕು. ಹತ್ತು ಇಂಚು ಅಗಲವಾದ ಬಾಯಿ ಇದ್ದರೆ ಉತ್ತಮ. ಒಂದೂವರೆ ಮೀಟರ್‌ ಉದ್ದದ ಪೈಪಿನ ಕಾಲುಭಾಗವನ್ನು ಮಣ್ಣಿನ ಗುಂಡಿ ತೋಡಿ ಹೂಳಬೇಕು. ಗ್ರಾನೈಟ್‌ ತುಂಡು ಮತ್ತು ಮರಳು ಬಳಸಿ ಬುಡವನ್ನು ಗಟ್ಟಿ ಮಾಡಿದರೆ ಒಳ್ಳೆಯದು. ಇಲ್ಲವಾದರೆ ಒಳಗೆ ಎರೆಹುಳಗಳಿದ್ದರೆ ಬುಡದಲ್ಲಿ ಇಲಿಗಳು ಕೊರೆದು ಹಾನಿ ಮಾಡುತ್ತವೆ.

Advertisement

ಅಡುಗೆಮನೆಯಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಮತ್ತಿತರ ತ್ಯಾಜ್ಯಗಳು, ಮಜ್ಜಿಗೆ ಇದನ್ನೆಲ್ಲ ಪೈಪಿನೊಳಗೆ ತುಂಬಬಹುದು. ಆದರೆ ಗಟ್ಟಿಯಾಗಿರುವ ಚಿಪ್ಪುಗಳು, ಗೆರಟೆ, ಬೆಣ್ಣೆಹಣ್ಣಿನ ಬೀಜ, ಲಿಂಬೆ, ಕಿತ್ತಳೆ ಇತ್ಯಾದಿ ಸಿಟ್ರಸ್‌ ಅಂಶವಿರುವ ಹಣ್ಣುಗಳ ತ್ಯಾಜ್ಯ, ಬೇಯಿಸಿದ ಆಹಾರಗಳು, ಸಾಂಬಾರು, ಈರುಳ್ಳಿ ಸಿಪ್ಪೆ ಇದೊಂದನ್ನೂ ತುಂಬಿಸಬಾರದು. ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಜೀವಾಣುಗಳಿಗೆ ಇದೆಲ್ಲವೂ ಹಾನಿ ಮಾಡುತ್ತವೆಯಂತೆ. ನೀರಿನಂಶ ಶೇ. 50ಕ್ಕಿಂತ ಹೆಚ್ಚಿದ್ದರೂ ಗೊಬ್ಬರ ಚೆನ್ನಾಗಿರುವುದಿಲ್ಲ. ಪೈಪು ಭರ್ತಿಯಾದ ಬಳಿಕ ಲಭ್ಯವಿದ್ದರೆ ಎರೆಹುಳಗಳ ಮರಿಗಳನ್ನು ಒಳಗೆ ಬಿಡಬಹುದು. ಬಳಿಕ ಮುಚ್ಚಳ ಹಾಕಬೇಕು. ಆದರೆ ಭದ್ರವಾಗಿ ಮುಚ್ಚಳ ಹಾಕಬಾರದು. ಒಳಗೆ ಗಾಳಿಯಾಡಲು ಅವಕಾಶ ಬೇಕು. ಇದರಿಂದ ತುಂಬಿದ ತ್ಯಾಜ್ಯವನ್ನು ನಾವು ಕಲಸುವ ಪ್ರಕ್ರಿಯೆ ಅಗತ್ಯ ಬೀಳುವುದಿಲ್ಲ. ಗಾಳಿಯೇ ಆ ಕ್ರಿಯೆಯನ್ನು ನಡೆಸಿ ಮೂರು ತಿಂಗಳಲ್ಲಿ ಹದನಾದ ಗೊಬ್ಬರವಾಗಿ ಮಾರ್ಪಡಿಸುತ್ತದೆಂಬುದು ಭಟ್ಟರು ಹೇಳುವ ವಿವರಣೆ.

ಲಭ್ಯವಿದ್ದರೆ ವಾರಕೊಮ್ಮೆ ಸೆಗಣಿಯನ್ನು ಕರಗಿಸಿ ಪೈಪಿನೊಳಗೆ ಹಾಕಬಹುದು. ಇನ್ನು ಇದರೊಳಗಿಂದ ದುರ್ವಾಸನೆ ಬರತೊಡಗಿದರೆ ಒಳಗೆ ಕೊಳೆಯುವ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿಲ್ಲ ಎಂದರ್ಥವಂತೆ. ಚಳಿಗಾಲದಲ್ಲಿ ಗೊಬ್ಬರವಾಗಲು ಸ್ವಲ್ಪ ಹೆಚ್ಚು ಅವಧಿ ಬೇಕು.  ಬೇಸಿಗೆಯಲ್ಲಿ ಬೇಗನೆ ಆಗುತ್ತದೆ. ಹಲಸಿನಂತಹ ಮರಗಳು ಪೈಪಿನ ಬಳಿ ಇದ್ದರೆ ಅದರ ಬೇರುಗಳು ಒಳಗೆ ಪ್ರವೇಶಿಸಿ ಗೊಬ್ಬರವನ್ನು ಮೊದಲೇ ತಿಂದುಬಿಡುತ್ತವೆ. ಹೀಗಾಗಿ ಸ್ಥಳದ ಆಯ್ಕೆ ಎಚ್ಚರಿಕೆಯಿಂದ ಮಾಡಬೇಕು.

ಜಾಗವಿದ್ದರೆ, ಹೆಚ್ಚು ತ್ಯಾಜ್ಯ ಸಿಗುವುದಾದರೆ ಒಂದಕ್ಕಿಂತ ಹೆಚ್ಚು ಪೈಪುಗಳ ಮೂಲಕ ಗೊಬ್ಬರ ತಯಾರಿಸಬಹುದೆಂಬುದು ಭಟ್ಟರ ಹಿತ್ತಿಲಿನಲ್ಲಿರುವ ಪೈಪುಗಳನ್ನು ನೋಡಿದರೆ ತಿಳಿಯುತ್ತದೆ.

ಒಂದು ಪೈಪಿನಲ್ಲಿ ಒಂದು ಅಡಿ ವ್ಯಾಸದಷ್ಟು ಹುಡಿ ಗೊಬ್ಬರ ಸಿಗುತ್ತದೆ. ಭಟ್ಟರು ರಾಸಾಯನಿಕ ಬಳಸದೆ ಇದೇ ಗೊಬ್ಬರ ಮಾತ್ರ ಬಳಸಿ ತೊಂಡೆ, ಬೆಂಡೆ, ಬಸಳೆಯಂತಹ ತರಕಾರಿಗಳು, ಬಾಳೆ, ವಿಧವಿಧದ ಹೂಗಿಡಗಳನ್ನು ಬೆಳೆಯಬಹುದೆಂಬುದನ್ನು ಸುಂದರವಾದ ತಮ್ಮ ಹಿತ್ತಿಲಿನ ಗಿಡಗಳ ಸಾಕ್ಷ್ಯದ ಮೂಲಕ ತೋರಿಸುತ್ತಾರೆ. ಈ ಸಾವಯವ ಸಣ್ತೀವನ್ನುಂಡ ತರಕಾರಿಗಳಿಗೆ ಒಳ್ಳೆಯ ಬಣ್ಣ, ಮೃದುವಾಗಿ ಬೇಯುವ ಗುಣ, ಪರಿಮಳ, ರುಚಿಗಳ ಹಿರಿಮೆ ಇದೆ. ಒಂದು ಸ್ಥಾವರಕ್ಕೆ ಸುಮಾರು ಎರಡು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೂ ಅದರಿಂದ ಪರಿಸರವೂ ಸ್ವತ್ಛವಾಗುತ್ತದೆ. ಕೃಷಿಗೂ ಲಾಭವಾಗುತ್ತದೆಂಬ ಲೆಕ್ಕಾಚಾರ ಭಟ್ಟರದು. 
ಎಲ್ಲರ ಮನೆಯ ಹಿತ್ತಿಲಲ್ಲೂ ಇದರ ಅಳವಡಿಕೆ ಬಲು ಸುಲಭ.

– ಪ. ರಾಮಕೃಷ್ಣ ಶಾಸ್ತ್ರೀ

Advertisement

Udayavani is now on Telegram. Click here to join our channel and stay updated with the latest news.

Next