Advertisement

ಮಹಿಳೆಯರಿಗಾಗಿ ಪಿಂಕ್‌ ಮತಗಟ್ಟೆ

07:00 AM Apr 26, 2018 | Team Udayavani |

ಉಡುಪಿ: ಪಿಂಕ್‌ ಮತಗಟ್ಟೆ! ಇದು ಈ ಬಾರಿ ಚುನಾವಣೆ ಸ್ಪೆಷಲ್‌. ಪಿಂಕ್‌ ಸೀರೆಯುಟ್ಟ ಮಹಿಳಾ ಅಧಿಕಾರಿಗಳು, ಮತದಾನ ಮಾಡುವ ಸ್ಥಳದಲ್ಲೂ ಗುಲಾಬಿ ರಂಗು. ಅಷ್ಟೇ ಅಲ್ಲ ನಿಯೋಜನೆಗೊಂಡ ಪೊಲೀಸರೂ ಮಹಿಳೆಯರೇ. 

Advertisement

ಲಿಂಗ ಸಮಾನತೆಯನ್ನು ಚುನಾವಣಾ ಪ್ರಕ್ರಿಯೆಯಲ್ಲಿಯೂ ಸಾಧಿಸಿ ತೋರಿಸುವ ಉದ್ದೇಶದಿಂದ ಚುನಾವಣಾ ಆಯೋಗ ಮಹಿಳೆಯರು ಮತ್ತು ಇತರರಿಗೂ ಮತದಾನಕ್ಕೆ ಅವಕಾಶ ನೀಡುವ ವಿಶೇಷ ಪಿಂಕ್‌ ಮತಗಟ್ಟೆ ಸ್ಥಾಪನೆಗೆ ಮುಂದಾಗಿದೆ. ಉಡುಪಿ ಜಿಲ್ಲೆಯಲ್ಲಿ ಇಂತಹ 10 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.  

ಎಲ್ಲೆಲ್ಲಿ? 
ಬೈಂದೂರು ಕ್ಷೇತ್ರದ ಶೀರೂರು ಗ್ರಾ.ಪಂ. ಕಚೇರಿಯಲ್ಲಿ 1, ಕುಂದಾಪುರದ ವಡೇರಹೋಬಳಿ ಪಿ.ವಿ.ಎಸ್‌. ಸರೋಜಿನಿ ಮಧುಸೂದನ ಕುಶೆ ಸರಕಾರಿ ಪ್ರೌಢಶಾಲೆಯಲ್ಲಿ 1, ಉಡುಪಿ ಕ್ರಿಶ್ಚಿಯನ್‌ ಹೈಸ್ಕೂಲ್‌ನಲ್ಲಿ 3, ಕನ್ನರ್ಪಾಡಿಯ ಸೈಂಟ್‌ ಮೆರೀಸ್‌ ಆಂಗ್ಲಮಾಧ್ಯಮ ಶಾಲೆಯಲ್ಲಿ 2, ಕಾಪು ವಿಧಾನಸಭಾ ಕ್ಷೇತ್ರದ ಕುರ್ಕಾಲು ಗ್ರಾ.ಪಂ.ನಲ್ಲಿ 1 ಹಾಗೂ ಕಾರ್ಕಳ ಕ್ಷೇತ್ರದ ಪೆರ್ವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಹೀಗೆ ಒಟ್ಟು 10  ಬೂತ್‌ಗಳು ಇರಲಿವೆ. ಇದರೊಂದಿಗೆ ಅಂಗವಿಕಲರಿಗಾಗಿ ಒಂದು ವಿಶೇಷ ಮತದಾನ ಕೇಂದ್ರವನ್ನು ಕುಂದಾಪುರದ ಬೇಲೂರಿನಲ್ಲಿ ತೆರೆಯಲಾಗುವುದು. ಇಲ್ಲಿ ಇತರರಿಗೂ ಮತದಾನ ಮಾಡಲು ಅವಕಾಶವಿರುತ್ತದೆ.
 
ಬರಲಿದ್ದಾರೆ ವೋಟರ್‌ ಗೈಡ್‌
ಪ್ರತಿ ಮನೆಗೂ ವೋಟರ್‌ ಗೈಡ್‌ಗಳನ್ನು ಕಳುಹಿಸಿ ಮತದಾರರು ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು, ಅವರ ಭಾಗ ಸಂಖ್ಯೆ ಎಷ್ಟು ಮೊದಲಾದ ಮಾಹಿತಿಗಳನ್ನು ಮತದಾರರಿಗೆ ನೀಡುವ ವ್ಯವಸ್ಥೆಯನ್ನು ಕೂಡ ಜಿಲ್ಲಾಡಳಿತ ಮಾಡಲಿದೆ. ಈ ಹಿಂದೆ ಮತಚೀಟಿಯನ್ನು ರಾಜಕೀಯ ಪಕ್ಷಗಳೇ ನೀಡುತ್ತಿದ್ದವು. ಈ ಬಾರಿ ಈ ಕೆಲಸವನ್ನು ವೋಟರ್‌ ಗೈಡ್‌ಗಳು ಮಾಡಲಿದ್ದಾರೆ. ಇದರೊಂದಿಗೆ ಬಸ್‌ಗಳಲ್ಲೂ ಮತದಾನ ಬಗ್ಗೆ ಜಾಗೃತಿ ಪೋಸ್ಟರ್‌ಗಳನ್ನು ಹಾಕಲಾಗುತ್ತದೆ.  

ಕಸ ಸಾಗಾಟದಲ್ಲೂ ಜಾಗೃತಿ
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಸ ಸಾಗಾಟ ಮಾಡುವ ಸ್ಥಳೀಯ ಸಂಸ್ಥೆಗಳ ವಾಹನಗಳಲ್ಲಿ ಮತದಾನ ಜಾಗೃತಿಯ ಸಂದೇಶ, ಹಾಡು ಬಿತ್ತರಿಸುವ ಕೆಲಸವನ್ನು ಕೂಡ ಸ್ವೀಪ್‌ ಸಮಿತಿ ಕೈಗೆತ್ತಿಕೊಂಡಿದೆ. ಅದರಂತೆ ಉಡುಪಿ ಖ್ಯಾತ ಸಂಗೀತಗಾರ ಚಂದ್ರಶೇಖರ ಕೆದ್ಲಾಯ ಅವರು ಹಾಡಿರುವ ಹಾಡುಗಳು, ಇತರ ತುಳು ಹಾಡುಗಳು, ಎಲೆಕ್ಷನ್‌ ಐಕಾನ್‌ಗಳ ಧ್ವನಿಮುದ್ರಿಕೆಗಳು ಕಸ ಸಾಗಾಟದ ವಾಹನಗಳಲ್ಲಿ ಮೊಳಗಲಿವೆ.

ಬುಡಕಟ್ಟು  ಸಮುದಾಯ ಮತದಾನ ಕೇಂದ್ರ 
ಚುನಾವಣೆ ಪ್ರಕ್ರಿಯೆಯಲ್ಲಿ ಸಮಾಜದ ಮುಖ್ಯವಾಹಿನಿ ಯೊಂದಿಗೆ ಬುಡಕಟ್ಟು ಸಮುದಾಯ ವಾದ ಕೊರಗ ಜನಾಂಗದವರು ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಹೇರೂರು ರಾಗಿಹಕ್ಲು ಸ.ಹಿ.ಪ್ರಾ. ಶಾಲೆಯನ್ನು “ಬುಡಕಟ್ಟು ಸಮುದಾಯದ ಮತದಾನ ಕೇಂದ್ರ’ವಾಗಿ(ಟ್ರೈಬಲ್‌ ಪೋಲಿಂಗ್‌ ಸ್ಟೇಷನ್‌) ಸಿದ್ಧಗೊಳಿಸಲಾಗುತ್ತದೆ. ಈ ಕೇಂದ್ರಗಳಲ್ಲಿ ಬುಡಕಟ್ಟು ಸಮುದಾಯದ ಹೊರಗಿನವರಿಗೂ ಮತ ಚಲಾವಣೆಗೆ ಅವಕಾಶವಿದೆ. ಬುಡಕಟ್ಟು ಸಮುದಾಯದವರು ಹೆಚ್ಚಿರುವ ಕಾರಣಕ್ಕೆ ವಿಶೇಷ ಮತಕೇಂದ್ರ ಸ್ಥಾಪಿಸಲಾಗುತ್ತಿದೆ. ಇದರೊಂದಿಗೆ ಬುಡಕಟ್ಟು ಸಂಸ್ಕೃತಿ ಬಿಂಬಿಸುವಂತೆ ಮತಕೇಂದ್ರ ಅಲಂಕಾರಗೊಳಿಸಲೂ ಉದ್ದೇಶಿಸಲಾಗಿದೆ.

Advertisement

ಎಲ್ಲವೂ ಪಿಂಕ್‌
ಮಹಿಳಾ ಸಿಬಂದಿಯ ದಿರಿಸು, ಬಳಸಲಾಗುವ ಸೂಚನಾ ಫ‌ಲಕ, ಟೇಬಲ್‌ಗೆ ಹಾಕುವ ಬಟ್ಟೆಗಳು, ಮತಗಟ್ಟೆಗೆ ಗುಲಾಬಿ ಬಣ್ಣದ ಬಲೂನು ಕಟ್ಟಲಾಗುತ್ತದೆ. ಇದರೊಂದಿಗೆ ಕೇಂದ್ರದಲ್ಲಿ ಬಟ್ಟೆಯ ಕಮಾನಿನಿಂದ ಆಕರ್ಷಣೀಯಗೊಳಿಸಲು ಯೋಜಿಸಲಾಗಿದೆ.

ಸೌಕರ್ಯ ಇದ್ದ‌ಲ್ಲಿ ಮಹಿಳಾ ಮತಗಟ್ಟೆ  
ಮಹಿಳೆಯರು ಕೂಡ ಮತಗಟ್ಟೆಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂಬುದನ್ನು ಸಾಬೀತುಪಡಿಸುವ ಉದ್ದೇಶದಂದ ಇಂತಹ ಪಿಂಕ್‌ ಮತಗಟ್ಟೆ ತೆರೆಯಲಾಗುತ್ತದೆ. ಮಹಿಳಾ ಸಿಬಂದಿ, ಪೊಲೀಸರಿಗೆ ಅನುಕೂಲವಾದ ಸೂಕ್ತ ಸೌಕರ‌Âವಿರುವ ಮತಗಟ್ಟೆಗಳನ್ನೇ ಪಿಂಕ್‌ ಪೋಲಿಂಗ್‌ ಸ್ಟೇಷನ್‌ಗಳಾಗಿ ಆಯ್ಕೆ ಮಾಡಿಕೊಂಡಿದ್ದೇವೆ.

– ಶಿವಾನಂದ ಕಾಪಶಿ, ಮತದಾರರ ಜಾಗೃತಿ ಅಭಿಯಾನದ ಅಧ್ಯಕ್ಷ

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next