Advertisement

ಪಿಂಜಾರ-ನದಾಫ ಸಮಾಜ ಶಿಕ್ಷಣಕ್ಕೆ ಆದ್ಯತೆ ನೀಡಲಿ: ಸ್ವಾಮೀಜಿ

05:06 PM Jan 29, 2018 | Team Udayavani |

ಮಾನ್ವಿ: ಯಾವುದೇ ಒಂದು ಸಮಾಜ ಪ್ರಗತಿಯತ್ತ ಹೆಜ್ಜೆ ಹಾಕಲು ಶಿಕ್ಷಣ ಅಗತ್ಯವಾಗಿದೆ. ಈ ದಿಶೆಯಲ್ಲಿ ನದಾಫ
ಪಿಂಜಾರ ಸಮಾಜ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಕಲ್ಮಠದ ಶ್ರೀ ವಿರೂಪಾಕ್ಷಿ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

Advertisement

ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಮಾಜ ತಾಲೂಕು ಘಟಕದಿಂದ ರವಿವಾರ ಪಟ್ಟಣದ ಟಿಎಪಿಸಿಎಂಎಸ್‌
ಆವರಣದಲ್ಲಿ ಏರ್ಪಡಿಸಿದ್ದ ತಾಲೂಕು ಸಮಾವೇಶದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಸಮುದಾಯದ
ಜನರು ಮುಖ್ಯವಾಹಿನಿಗೆ ಬರಲು ಶಿಕ್ಷಣ ಒಂದು ಪ್ರಮುಖ ಅಸ್ತ್ರ. ಏನೇ ಕಷ್ಟಗಳಿದ್ದರೂ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ನಿಲ್ಲಿಸಬಾರದು ಎಂದರು.

ಅತ್ಯಂತ ಮಿಶ್ರ ಜಾತಿಗಳಿಂದ ಕೂಡಿದ ಈ ದೇಶದಲ್ಲಿ ನಮ್ಮ ಪೂರ್ವಜರು ಹೇಗೆ ಬದುಕಿದ್ದರೋ ಅದೇ ರೀತಿ
ನಾವು ಅನೋನ್ಯವಾಗಿ ಬದುಕಬೇಕು. ಎಲ್ಲ ಧರ್ಮಗಳನ್ನು ಗೌರವಿಸಬೇಕು. ನಾವು ಮಾಡುವ ಕೆಲಸ ಎಲ್ಲ ಜಾತಿ, ಜನಾಂಗ ಒಪ್ಪುವಂತಿರಬೇಕು. ಸದಾ ಮಾನವೀಯತೆಯಿಂದ ಕೆಲಸ ಮಾಡಿ ದೇವರ ಮೆಚ್ಚುಗೆ ಪಡೆಯಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಮಾತನಾಡಿ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕಾಂಗ್ರೆಸ್‌
ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಪಿಂಜಾರ ನದಾಫ ಸಮುದಾಯದ ಅಭಿವೃದ್ಧಿ ನಿಗಮ
ಸ್ಥಾಪನೆಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುತ್ತೇನೆ. ಪಟ್ಟಣದಲ್ಲಿ ಪಿಂಜಾರ ಸಮುದಾಯದ ಭವನ ನಿರ್ಮಿಸಲು
ಸಿಎ ಸೈಟ್‌ ಗುರುತಿಸಿ, ಭವನ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ಲಾಲ್‌ಹುಸೇನ್‌ ಕಂದಗಲ್‌ ವಿಶೇಷ ಉಪನ್ಯಾಸ ನೀಡಿದರು. ಸಂಸದ ಬಿ.ವಿ.ನಾಯಕ, ಶಾಸಕ ಹಂಪಯ್ಯ
ನಾಯಕ, ಶಾಸಕ ಶಿವನಗೌಡ ನಾಯಕ ಮಾತನಾಡಿದರು. ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ| ಚಮನ್‌ ಫರ್ಜಾನ್‌ ಮಾತನಾಡಿದರು.

Advertisement

ರಾಜ್ಯಾಧ್ಯಕ್ಷ ಪ್ರೊ| ಎಂ.ಎಂ.ನದಾಫ, ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ್‌, ಗಂಗಾಧರ ನಾಯಕ, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಾ ವೆಂಕಟಪ್ಪ ನಾಯಕ, ಮೆಕೋ ಕನ್ಸಟ್ರಕ್ಷನ್‌ ಅಧ್ಯಕ್ಷ ಎಂ.ಈರಣ್ಣ, ಬಶೀರುದ್ದೀನ್‌ ರಾಯಚೂರು, ಅಸ್ಲಂ ಪಾಷಾ, ಮಹಿಬೂಬಸಾಬ್‌, ಬಾಲಸ್ವಾಮಿ ಕೊಡ್ಲಿ, ಎಪಿಎಂಸಿ ಅಧ್ಯಕ್ಷ ಬೀರಪ್ಪ ಕಡದಿನ್ನಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಸ್‌.ತಿಮ್ಮಾರೆಡ್ಡಿ ಭೋಗಾವತಿ, ಸಮಾಜದ ತಾಲೂಕು ಅಧ್ಯಕ್ಷ ಮೌಲಾಸಾಬ್‌ ಗಣದಿನ್ನಿ, ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next