1960ರಿಂದ 2019ರವರೆಗೆ ತುಳುನಾಡಿನಲ್ಲಿ ಆಗಿರುವ ಬದಲಾವಣೆಯ ಚಿತ್ರಣಗಳನ್ನು ಬಿಂಬಿಸುವ ಹೊಸ ಸಿನೆಮಾ “ಪಿಂಗಾರ’ ಸದ್ಯ ಕೋಸ್ಟಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ. ಬೀಡಿ ಉದ್ಯಮ, ಉಳುವವನೇ ಹೊಲದೊಡೆಯ ಮುಂತಾದವುಗಳೆಲ್ಲ ತುಳುನಾಡಿನ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಿದೆ ಹಾಗೂ ದೈವದ ಕಾರಣಿಕ ಮುಂತಾದ ಕಥಾನಕಗಳನ್ನೇ ತುಂಬಿರುವ ಪಿಂಗಾರ ಸಾಕಷ್ಟು ವಿಚಾರಗಳೊಂದಿಗೆ ಪ್ರಸ್ತುತ ಚರ್ಚೆಗೆ ಬಂದಿದೆ.
ಅದರಲ್ಲಿಯೂ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಲನಚಿತ್ರ ಸ್ಪರ್ಧೆ ವಿಭಾಗ ಮತ್ತು ಭಾರತೀಯ ಚಲನಚಿತ್ರ ಸ್ಪರ್ಧೆ ವಿಭಾಗದಲ್ಲಿ ಆಯ್ಕೆಯಾಗಿರುವ ಮೊದಲ ತುಳು ಚಿತ್ರ ಎಂಬ ಮಾನ್ಯತೆಗೂ ಪಿಂಗಾರ ಪಾತ್ರವಾಗಿದೆ.
ಗುರುಪುರದ ಆರ್. ಪ್ರೀತಮ್ ಶೆಟ್ಟಿ ಎಂಬ ಉತ್ಸಾಹಿ ಯುವಕನ ನಿರ್ದೇಶನದ ಸಿನೆಮಾ. ಅವಿನಾಶ್ ಯು. ಶೆಟ್ಟಿ ಮತ್ತು ಡಿ.ಎನ್. ಮಂಜುನಾಥ್ ಶೆಟ್ಟಿ ಅವರು ನಿರ್ಮಾಣ ಮಾಡಿದ್ದಾರೆ.
ತುಳುನಾಡಿನಲ್ಲಿ ಭೂತಾರಾಧನೆ ಒಂದು ವಿಶಿಷ್ಠ ಪದ್ದತಿ. ಇಲ್ಲಿ ತನಿಯ ಎಂಬಾತನ ಮೈಯಲ್ಲಿ ದೈವ ಆವಾಹನೆಯಾಗಿ ಸತ್ಯವನ್ನೇ ನುಡಿಯುತ್ತದೆ. ಇದರಿಂದ ಮೇಲ್ವರ್ಗದ ವ್ಯಕ್ತಿಗಳು ಕಸಿವಿಸಿಗೊಳ್ಳುತ್ತಾರೆ. ಪ್ರತಿಷ್ಠೆ ಮತ್ತು ಜಾತಿ ತಾರತಮ್ಯದ ಅಮಾನವೀಯ ಘಟನೆಗಳು ಚಲಾವಣೆಯಲ್ಲಿದ್ದು, ಸಾಮಾಜಿಕ ನ್ಯಾಯ ಕಾಣೆಯಾಗಿದೆ ಎಂಬ ಅಂಶಗಳು ಈ ಮೂಲಕ ಬಹಿರಂಗವಾಗುತ್ತವೆ. ಇದರಿಂದ ಮುಂದೆ ನಡೆಯುವ ಕಥಾನಕವೇ ಪಿಂಗಾರ.
ನೀಮಾ ರೈ, ಶರಣ್ ಶೆಟ್ಟಿ, ಉಷಾ ಭಂಡಾರಿ, ಗುರು ಹೆಗ್ಡೆ, ಸುನೀಲ್ ನೆಲ್ಲಿಗುಡ್ಡೆ, ಸಿಂಚನಾ ಚಂದ್ರ ಮೋಹನ್, ಪ್ರಶಾಂತ್ ಸಿ.ಕೆ. ಮುಂತಾದವರು ನಟಿ ಸಿ ದ್ದಾರೆ. ಶಶಿರಾಜ್ ಕಾವೂರು ಅವರ ಸಂಭಾಷಣೆ ಹೊಂದಿರುವ ಸಿನೆಮಾಕ್ಕೆ ಮೈಮ್ ರಾಮದಾಸ್ ಹಾಗೂ ಶೀನಾ ನಾಡೋಲಿ ಅವರ ಸಾಹಿತ್ಯವಿದೆ. ಛಾಯಾಗ್ರಹಣದಲ್ಲಿ ವಿ. ಪವನ್ ಕುಮಾರ್ ಸಹಕರಿಸಿದ್ದು, ಗಣೇಶ್ ನೀರ್ಚಾಲ್ ಮತ್ತು ಶೇಷಾಚಲ ಕುಲಕರ್ಣಿ ಅವರ ಸಂಕಲನವಿದೆ. ನಿರ್ದೇಶಕ ಪ್ರೀತಂ ಶೆಟ್ಟಿ ಅವರು ತುಳುನಾಡಿನ ಸಂಸ್ಕೃತಿ ಮತ್ತು ದೈವಾರಾಧನೆ ಬಗ್ಗೆ ಆಳವಾದ ಮಾಹಿತಿ ಮತ್ತು ಆಸಕ್ತಿ ಹೊಂದಿದವರು. ಧಾರಾವಾಹಿ ನಿರ್ದೇಶನದ ಮೂಲಕ ವೃತ್ತಿ ರಂಗ ಪ್ರವೇಶಿಸಿದವರು. ಪ್ರೀತಮ್ ಶೆಟ್ಟಿ ಕರಾವಳಿಯ ಹುಡುಗ. ತುಳುವಿನಲ್ಲಿ ಪಿಂಗಾರ ಸಿನೆಮಾ ನಿರ್ದೇಶಿಸಿರುವ ಇವರು ಕನ್ನಡದಲ್ಲಿ “ಸದ್ಗುಣ ಸಂಪನ್ನ ಮಾಧವ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಆ ಚಿತ್ರಕ್ಕೆ ರವಿಶಂಕರ್ ನಾಯಕ ನಟನಾಗಿದ್ದು, ಕಥೆ ಚಿತ್ರಕಥೆ ಕೂಡ ಪ್ರೀತಮ್ ಅವರದ್ದಾಗಿದೆ. ಹಿಂದಿ, ಕನ್ನಡ ಕಿರುತೆರೆಯಲ್ಲಿ ಪ್ರೀತಮ್ ಅವರು ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ ಅನುಭವವಿದೆ.
– ದಿನೇಶ್ ಇರಾ