Advertisement

ಸಿಹಿಗೂ ಸೈ, ಸಾಂಬಾರಿಗೂ ಜೈ; ಇದು ಪೈನಾಪಲ್ ಪಾಕ ಲೋಕ!

04:25 PM Aug 13, 2020 | Sriram |

ಪೈನಾಪಲ್(ಅನಾನಸ್)ಕೇವಲ ಹಣ್ಣಿನ ರೂಪದಲ್ಲಿ ಅಥವಾ ಪಾನೀಯ ರೂಪದಲ್ಲಿ ಮಾತ್ರ ಉಪಯೋಗಿಸುತ್ತಾರೆ. ಅದರಿಂದ ವಿಶೇಷವಾದ ಅಡುಗೆ ಮತ್ತು ತಿಂಡಿ ಮಾಡಬಹುದೆಂದು ಅನೇಕರಿಗೆ ತಿಳಿದಿರಲಾರದು. ಹೇರಳವಾದ ಮಿಟಮಿನ್ ಸಿ, ಕಬ್ಬಿಣಾಂಶ, ನಾರಿನಂಶ ಹಾಗೂ ಕಡಿಮೆ ಕೊಬ್ಬಿನಾಂಶ ಹೊಂದಿರುವ ಪೈನಾಪಲ್ ಹಣ್ಣಿನಿಂದ ಹಲವಾರು ರೆಸಿಪಿ ಮಾಡಬಹುದು. ಕೇವಲ ಸಿಹಿಯೊಂದೇ ಅಲ್ಲ, ಅನ್ನಕ್ಕೆ ಮತ್ತು ಚಪಾತಿಗೆ ಹೊಂದುವ ರುಚಿಯಾದ ಪದಾರ್ಥಗಳನ್ನು ತಯಾರಿಸ ಬಹುದು. ಹಾಗಿದ್ದರೆ ಇನ್ನೇಕೆ ತಡ ಪೈನಾಪಲ್ ನಿಂದ ತಯಾರಿಸಬಹುದಾದ ಕೆಲವೊಂದು ರೆಸಿಪಿಗಳು ಇಲ್ಲಿವೆ…..

Advertisement

ಪೈನಾಪಲ್ ಕೇಸರಿ ಬಾತ್
ಬೇಕಾಗುವ ಸಾಮಗ್ರಿ
ಬಾಂಬೆ (ಚಿರೋಟಿ)ರವೆ 1ಕಪ್, ಸಕ್ಕರೆ 2 ಕಪ್, ಪೈನಾಪಲ್ ನ ತುರಿ 1ಕಪ್ , ತುಪ್ಪ  4 ಚಮಚ, ಹಾಲು 2 ಕಪ್, ಕೇಸರಿ ಬಣ್ಣ, ಏಲಕ್ಕಿ ಪುಡಿ ಸ್ವಲ್ಪ, ದ್ರಾಕ್ಷಿ, ಗೋಡಂಬಿ ಸ್ವಲ್ಪ.

ತಯಾರಿಸುವ ವಿಧಾನ
ಬಾಂಬೆ ರವೆಯನ್ನು ಸ್ವಲ್ಪ ತುಪ್ಪ ಹಾಕಿ ಪರಿಮಳ ಬರುವವರೆಗೆ ಹುರಿದಿಟ್ಟುಕೊಳ್ಳಿ. 2 ಕಪ್ ಹಾಲನ್ನು ಕುದಿಯಲು ಇಟ್ಟು ಅದಕ್ಕೆ ಕೇಸರಿ ಬಣ್ಣವನ್ನು ಹಾಕಿರಿ. ನಂತರ ಹುರಿದಿಟ್ಟ ರವೆಯನ್ನು ಹಾಕಿ. ರವೆ ಚೆನ್ನಾಗಿ ಬೆಂದ ನಂತರ ಸಕ್ಕರೆ , ಪೈನಾಪಲ್ ತುರಿ, ತುಪ್ಪವನ್ನು ಹಾಕಿರಿ. ಸ್ವಲ್ಪ ಹೊತ್ತು ಮುಚ್ಚಿಟ್ಟು ಸಣ್ಣ ಉರಿಯಲ್ಲಿ ಇಡಿ. ನಂತರ ಏಲಕ್ಕಿ ಪುಡಿ, ತುಪ್ಪದಿಲ್ಲಿ ಹುರಿದ ಗೋಡಂಬಿ, ದ್ರಾಕ್ಷಿಯನ್ನು ಹಾಕಿರಿ. ಬಿಸಿ ಬಿಸಿಯಾದ ಪೈನಾಪಲ್ ಕೇಸರಿ ಬಾತ್ ಸವಿಯಲು ಸಿದ್ಧ.

ಪೈನಾಪಲ್ ಮೆಣಸುಕಾಯಿ
ಬೇಕಾಗುವ ಸಾಮಗ್ರಿ
ಪೈನಾಪಲ್ 1 ಕಪ್, ಬೆಲ್ಲ ಸ್ವಲ್ಪ, ಒಣಮೆಣಸು 6 ರಿಂದ 8, ಉದ್ದಿನ ಬೇಳೆ 3 ಚಮಚ, ದನಿಯಾ 2 ಚಮಚ, ಎಳ್ಳು 3 ಚಮಚ, ಅರಶಿನ ಪುಡಿ ಸ್ವಲ್ಪ, ಹುಣಸೇ ಹುಳಿ ಒಂದು ಲಿಂಬೆ ಗಾತ್ರದಷ್ಟು, ಕರಿಬೇವು, ಎಣ್ಣೆ ಸ್ವಲ್ಪ, ತೆಂಗಿನ ಕಾಯಿ ತುರಿ 2ಕಪ್, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ
ಮೊದಲು ಎಳ್ಳನ್ನು (ಎಣ್ಣೆ ಹಾಕದೇ)ಹುರಿಯಿರಿ. ದನಿಯಾ, ಕರಿಬೇವನ್ನು ಎಣ್ಣೆ ಹಾಕಿ ಹುರಿಯಿರಿ. ಎಲ್ಲವನ್ನು ಮಿಕ್ಸಿಗೆ ಹಾಕಿ ತೆಂಗಿನ ತುರಿಯೊಂದಿಗೆ ರುಬ್ಬಿಕೊಳ್ಳಿ. ಹುಣಸೇ ರಸ, ಉಪ್ಪು, ಅರಶಿನ ಪುಡಿ, ಬೆಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿ ಕುದಿಯಲು ಇಡಿ. ಕುದಿಯುವ ಮಿಶ್ರಣಕ್ಕೆ ಪೈನಾಪಲ್ ಹೋಳುಗಳನ್ನು ಹಾಕಿ ಅನಂತರ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಕುದಿಸಿ ಇದಕ್ಕೆ ಕರಿಬೇವು ಸೇರಿಸಿದ ಸಾಸಿವೆ ಒಗ್ಗರಣೆ ಹಾಕಿರಿ. ಪೈನಾಪಲ್ ಮೆಣಸಿನಕಾಯಿ ಸವಿಯಲು ಸಿದ್ಧ. ಆನ್ನಕ್ಕೆ ಮಾತ್ರವಲ್ಲದೆ ಚಪಾತಿ, ದೋಸೆಗಳಿಗೂ ಇದು ರುಚಿಕರ.

Advertisement

ಪೈನಾಪಲ್ ಸಾಸಿವೆ
ಬೇಕಾಗುವ ಸಾಮಗ್ರಿ
ಪೈನಾಪಲ್ 1ಕಪ್, ಬೆಲ್ಲ 2 ಚಮಚ, ತೆಂಗಿನ ತುರಿ ಅರ್ಧ ಕಪ್, ಸಾಸಿವೆ 2 ಚಮಚ, ಒಣಮೆಣಸು 3ರಿಂದ 5, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಸಣ್ಣಗೆ ಹೆಚ್ಚಿದ ಪೈನಾಪಲ್ ಹಣ್ಣಿನ ಹೋಳುಗಳಿಗೆ ಬೆಲ್ಲವನ್ನು ಬೆರೆಸಿಡಿ. ತೆಂಗಿನ ತುರಿಗೆ ಸಾಸಿವೆ ಹಾಗೂ ಒಣ ಮೆಣಸನ್ನು ಸೇರಿಸಿ ನುಣ್ಣಗೆ ರುಬ್ಬಿ. ಪೈನಾಪಲ್ ಹೋಳುಗಳಿಗೆ ಸೇರಿಸಿ. ಇದಕ್ಕೆ ರುಚಿಗೆ ಬೇಕಷ್ಟು ಉಪ್ಪು ಮತ್ತು ನೀರು ಸೇರಿಸಿ ಹದ ಮಾಡಿಕೊಳ್ಳಿ. ಈಗ ರುಚಿಕರವಾದ ಪೈನಾಪಲ್ ಸಾಸಿವೆ ಸವಿಯಲು ಸಿದ್ಧ. ಚಪಾತಿ, ಅನ್ನದ ಜೊತೆ ಸೇರಿಸಿ ಸವಿಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next