Advertisement

ಕೊರಗ, ಜೇನುಕುರುಬರಿಗೆ ಒಳಮೀಸಲಾತಿ: ಆಂಜನೇಯ

03:45 AM Jan 01, 2017 | |

ಕುಂದಾಪುರ: ಆರ್ಥಿಕವಾಗಿ ಹಿಂದುಳಿದಿರುವ ಕೊರಗ ಹಾಗೂ ಜೇನುಕುರುಬ ಜಾತಿಗೆ ಒಳಮೀಸಲಾತಿಯನ್ನು ಜಾರಿಗೆ ತರುವಲ್ಲಿ ಸರಕಾರ ಚಿಂತನೆ ನಡೆಸಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾರ್ಯೋನ್ಮುಖವಾಗಲಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್‌. ಆಂಜನೇಯ ಹೇಳಿದರು.

Advertisement

ಅವರು ಶನಿವಾರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಕ್ಷೇತ್ರದ ಕಾಲೊ¤àಡು ಗ್ರಾ.ಪಂ. ವ್ಯಾಪ್ತಿಯ ಮುರೂರು ಕೊರಗ ಕಾಲನಿಯಲ್ಲಿ ಗ್ರಾಮವಾಸ್ತವ್ಯ ಮಾಡುವ ಮುನ್ನ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು.
ಈ ವರ್ಗದ ಜನರ ಆರೋಗ್ಯವನ್ನು ಕಾಪಾಡಲು ಈಗಾಗಲೇ ಕೋಟ್ಯಂತರ ರೂ. ವಿನಿಯೋಗಿಸಲಾಗಿದ್ದು ರಾಜ್ಯದ ಪ್ರಮುಖ ಆಸ್ಪತ್ರೆಗಳಲ್ಲಿ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಪ.ಪಂಗಡದ 50 ಜಾತಿಗಳು ಸೂಕ್ತವಾದ ನಾಗರಿಕ ಸೌಲಭ್ಯ, ಸವಲತ್ತುಗಳಿಂದ ವಂಚಿತವಾಗಿವೆ. ಉದ್ಯೋಗದಲ್ಲಿ ಮೀಸಲಾತಿ ಅವಕಾಶ ದೊರೆತಿಲ್ಲ. ಒಳಮೀಸಲಾತಿ ಬೇಡಿಕೆ ಇದ್ದರೂ ಇದು ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಇಲ್ಲದೇ ಇರುವುದರಿಂದ ಈ ಬಗ್ಗೆ ಮುಖ್ಯಮಂತ್ರಿಯವರಲ್ಲಿ ಚರ್ಚೆ ನಡೆಸಿ ಕೇಂದ್ರ ಸರಕಾರಕ್ಕೆ ಮನವಿಯನ್ನು ನೀಡಲಾಗುವುದು ಎಂದರು.

ಕೊರಗರ ಸರ್ವತೋಮುಖ ಅಭಿವೃದ್ಧಿ ಹಾಗೂ ಅವರ ಮೂಲಸೌಕರ್ಯಗಳಿಗಾಗಿ ಉಡುಪಿ ಜಿಲ್ಲೆಗೆ ಈಗಾಗಲೇ 82 ಕೋ.ರೂ ನೀಡಲಾಗಿದೆ. ಅದರಲ್ಲಿ 54 ಕೋ.ರೂ. ಖರ್ಚಾಗಿದ್ದು ಉಳಿಕೆ 29 ಕೋಟಿ ರೂ.ಗಳನ್ನು ಈ ವರ್ಗದ ಕಲ್ಯಾಣಕ್ಕೆ ಬಳಸಲಾಗುವುದು. ಇನ್ನೂ ಹೆಚ್ಚಿನ ಅನುದಾನವನ್ನು ನೀಡಲಾಗುವುದು ಎಂದರು.

ಸಮಾನ ಸಮಾಜ ಸಂಕಲ್ಪ
ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಈಗಾಗಲೇ ನೀಡಿರುವ ಪ್ಯಾಕೇಜ್‌ನ ಬಳಕೆಯಲ್ಲಿ ಇರುವ ಆಡಳಿತಾತ್ಮಕ ನ್ಯೂನತೆಗಳನ್ನು ಸರಿಪಡಿಸಬೇಕಾಗಿದೆ. ಮನೆ ನಿವೇಶನ ವೆಚ್ಚವನ್ನು ಹೆಚ್ಚಿಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರಲ್ಲಿ ಚರ್ಚಿಸಲಾಗಿದೆ. ಸಮಾನ ಸಮಾಜವನ್ನು ನಿರ್ಮಿಸುವ ಸಂಕಲ್ಪವನ್ನು ನಮ್ಮ ಸರಕಾರ ಹೊಂದಿದ್ದು ಈ ನಿಟ್ಟಿನಲ್ಲಿ ಈ ಹಾಡಿ ವಾಸ್ತವ್ಯ ಬಹಳಷ್ಟು ಮುಖ್ಯವಾಗಿದೆ ಎಂದರು.

ಅರಣ್ಯ ವಾಸಿಗಳ-ಭೂಮಿ ಹಕ್ಕಿಗಾಗಿ ಅರಣ್ಯ ಹಕ್ಕು ಕಾಯಿದೆ ಜಾರಿ ಮಾಡಲಾಗಿದೆ. ಅವರ ಕನಸುಗಳನ್ನು ನನಸಾಗಿಸುವುದೇ ಈ ಗ್ರಾಮವಾಸ್ತವ್ಯದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

Advertisement

ಆರೋಗ್ಯ, ಶಿಕ್ಷಣ
ಅಂಕಿ-ಅಂಶಗಳ ಪ್ರಕಾರ ಇಂದು ಕೊರಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಮೂಢನಂಬಿಕೆಯೇ ಇದಕ್ಕೆ ಪ್ರಮುಖ ಕಾರಣ. ಪ್ರತಿಯೊಬ್ಬರೂ ಆರೋಗ್ಯ, ಶಿಕ್ಷಣದ ಅರಿವನ್ನು ಬೆಳೆಸಿಕೊಳ್ಳಬೇಕಾಗಿದೆ. ಪ.ಪಂಗಡದವರಿಗೆ ಅನುಕೂಲವಾಗುವಂತೆ ಗುಣಮಟ್ಟದ ಶಾಲೆಗಳನ್ನು ತೆರಯಲಾಗಿದ್ದು, ಅಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸುವಲ್ಲಿ ಹೆಚ್ಚು ನಿಗಾ ವಹಿಸಬೇಕು ಎಂದು ಸಚಿವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಕೊರಗ ಸಮಾಜಕ್ಕೆ ಒಂದು ಪರಿಪೂರ್ಣ ಪ್ಯಾಕೇಜನ್ನು ರೂಪಿಸಿ ಅವರ‌ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಆಗಬೇಕಾಗಿದೆ. ಮನೆ ನಿರ್ಮಾಣದ ಅನುದಾನವನ್ನು ಹೆಚ್ಚಿಸಬೇಕು. ಕೃಷಿಗೆ ಅವಕಾಶ ಕಲ್ಪಿಸಬೇಕು, ಸಮಾಜಕ್ಕೆ ವಿಶೇಷವಾಗಿ ಒಳ ಮೀಸಲಾತಿಯನ್ನು ಜಾರಿಗೆ ತಂದು ನೇರ ನೇಮಕಾತಿಯ ಸೌಲಭ್ಯವನ್ನು ಈ ಸಮಾಜದ ವಿದ್ಯಾವಂತರಿಗೆ ನೀಡಬೇಕು ಎಂದು ಹೇಳಿದರು.

ಕೈಪಿಡಿ ಬಿಡುಗಡೆ
ಪ.ಪಂಗಡದ ಸರ್ವತೋಮುಖ ಅಭಿವೃದ್ಧಿಗಾಗಿ ಸರಕಾರದ ಯೋಜನೆಗಳು ಎನ್ನುವ ಕೈಪಿಡಿಯನ್ನು ಸಚಿವರು ಬಿಡುಗಡೆಗೊಳಿಸಿದರು. ಸಂತ್ರಸ್ತರ ಅಹವಾಲುಗಳನ್ನು ಸ್ವಿಕರಿಸಿದರು.  ಪ.ವರ್ಗದ ಜನರೊಂದಿಗೆ ಸಂವಾದ ನಡೆಸಿದರು.

ಸಮಾಜಕಲ್ಯಾಣ ಇಲಾಖೆಯ ತಾಂತ್ರಿಕ ಸಲಹೆಗಾರ ವೆಂಕ್ಟಯ್ಯ, ಉಡುಪಿ ಜಿಲ್ಲಾಧಿಕಾರಿ ವೆಂಕಟೇಶ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್‌, ಬಸವನ ಗೌಡ, ತಾ.ಪಂ. ಸದಸ್ಯ ವಿಜಯ ಶೆಟ್ಟಿ, ಗ್ರಾ.ಪಂ. ಸದಸ್ಯರು, ಜಿಲ್ಲಾ ಕೊರಗ ಸಂಘಟನೆ ಅಧ್ಯಕ್ಷ ಗೋಗ್ರ ಕೊರಗ, ಕೊರಗ ಒಕ್ಕೂಟದ ಗೌರಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಲೊ¤ಡು ಗ್ರಾ.ಪಂ. ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಸ್ವಾಗತಿಸಿದರು. ಬಿ.ಸಿ.ಎಂ. ಇಲಾಖೆಯ ನರಸಿಂಹ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪ್ರಭಾರ ಯೋಜನಾ ಸಮನ್ವಯಾಧಿಕಾರಿ ಹರೀಶ್‌ ಗಾಂವ್ಕರ್‌ ವಂದಿಸಿದರು.

ಬುಡಕಟ್ಟು ಜನಾಂಗದ ಸಮಾವೇಶ
ಸಮಾಜದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಪ್ರತಿಯೊಬ್ಬರ ಮನಸ್ಸುಗಳು ಬದಲಾಗಬೇಕು ಸಮಾಜದಲ್ಲಿ ಸೌಹಾರ್ದ ಮೂಡಬೇಕು. ಈಗಾಗಲೇ ರಾಜ್ಯದ 7 ಜಿಲ್ಲೆಗಳಲ್ಲಿ ಆದಿವಾಸಿಗಳ ನಡುವೆ ವಾಸ್ತವ್ಯ 
ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ಆ ಏಳು ಜಿಲ್ಲೆಗಳ ಪರಿಶಿಷ್ಟ ಬುಡಕಟ್ಟು ಜನಾಂಗದ ಸಮಾವೇಶವನ್ನು ಮುಂದಿನ ತಿಂಗಳಲ್ಲಿ ನಡೆಸಿ ಅವರಿಗೆ ಸವಲತ್ತುಗಳನ್ನು ನೀಡುವುದು ಮತ್ತು ಸಮಸ್ಯೆಗಳ ಅವಲೋಕನ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಅಲ್ಲದೇ ಕೊರಗ, ಜೇನುಕುರುಬ ಜಾತಿಗಳ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವ ಕುರಿತು ಚಿಂತನೆ ನಡೆಸಲಾಗಿದೆ.
ಸಚಿವ ಎಚ್‌. ಆಂಜನೇಯ

ಒಳಮೀಸಲಾತಿ ಅಗತ್ಯ: ಪ್ರಮೋದ್‌
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಪ್ರಸ್ತಾವನೆಗೈದು, ಅಳಿವಿನಂಚಿಗೆ ಸಾಗುತ್ತಿರುವ ಕೊರಗ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವರಲ್ಲಿ ಚೈತನ್ಯ ತುಂಬುವ ಕೆಲಸಗಳು ನಡೆಯಬೇಕಾಗಿವೆ. ಅವರಿಗೆ ಸೂಕ್ತ ಮೂಲಸೌಕರ್ಯದ ಕೊರತೆ ಇದೆ. ಶೈಕ್ಷಣಿಕವಾಗಿ, ಆರೋಗ್ಯಕರವಾಗಿ ಅತ್ಯಂತ ಹಿಂದುಳಿದ ಈ ಸಮಾಜಕ್ಕೆ ಕಾಯಕಲ್ಪವನ್ನು ನೀಡುವ ಕಾರ್ಯ ನಡೆಯಬೇಕಾಗಿದೆ. ಮುಗª, ವಿಶಾಲ ಮನೊಭಾವದ ಕೊರಗ ಸಮಾಜದ ಜನರಿಗೆ ವಿಶೇಷ ಪ್ಯಾಕೇಜ್‌ ನೀಡುವ ಕಾರ್ಯ ನಡೆಯಬೇಕು. ಇತರ ಸಮಾಜದೊಂದಿಗೆ ಸ್ಪರ್ಧೆ ನಡೆಸಬೇಕಾದ ಅನಿವಾರ್ಯತೆ ಇರುವುದರಿಂದ ಅವರಿಗೆ ವಿಶೇಷವಾಗಿ ಒಳಮೀಸಲಾತಿ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next