Advertisement
ಭ್ರಷ್ಟಾಚಾರ ವಿರುದ್ಧ ದೇಶ ನಡೆಸಿದ ಸುದೀರ್ಘ ಹೋರಾಟಕ್ಕೆ ಕಡೆಗೂ ಸಿಕ್ಕಿದ ಜಯ ಇದು ಎಂಬ ಕಾರಣಕ್ಕೆ ಮೋದಿ ಸರಕಾರ ತನ್ನ ಅಧಿಕಾರವಧಿಯ ಕಡೇ ಗಳಿಗೆಯಲ್ಲಿ ಮಾಡಿದ ಈ ನೇಮಕಾತಿ ಮಹತ್ವ ಪಡೆಯುತ್ತದೆ.
ಕಾಯಿದೆ ರಚನೆಯಾದರೂ ಲೋಕಪಾಲರ ನೇಮಕವಾಗಲು ಐದು ವರ್ಷ ಹಿಡಿದಿದೆ ಎನ್ನುವುದು ನಮ್ಮ ಸರಕಾರಿ ವ್ಯವಸ್ಥೆ ಯಾವ ರೀತಿ ಕಾರ್ಯವೆಸಗುತ್ತಿದೆ ಎನ್ನುವುದನ್ನು ತಿಳಿಸುತ್ತದೆ. ಹಿಂದಿನ ಸರಕಾರದ ಭ್ರಷ್ಟಾಚಾರ ವಿರುದ್ಧ ನಡೆದ ಹೋರಾಟದ ಅಲೆಯಲ್ಲಿಯೇ ಅಧಿಕಾರ ಹಿಡಿದಿದ್ದ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೇರಿದ ತಕ್ಷಣವೇ ಲೋಕಪಾಲರನ್ನು ನೇಮಕಾತಿ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಲೋಕಸಭೆಯಲ್ಲಿ ವಿಪಕ್ಷ ನಾಯಕರು ಇಲ್ಲ ಎಂಬ ಚಿಕ್ಕದೊಂದು ತಾಂತ್ರಿಕ ಕಾರಣ ನೆಪವಾಗಿ ಲೋಕಪಾಲ ನೇಮಕಾತಿ ಮುಂದೂಡಿಕೆಯಾಗುತ್ತಾ ಹೋಯಿತು. ಒಂದು ತಿದ್ದುಪಡಿಯಿಂದ ಈ ತಾಂತ್ರಿಕ ಲೋಪವನ್ನು ಸರಿಪಡಿಸುವ ಅವಕಾಶವಿತ್ತು. ಆದರೆ ಅದಕ್ಕೆ ಸರಕಾರದ ರಾಜಕೀಯ ಇಚ್ಚಾಶಕ್ತಿ ಅಡ್ಡಿಯಾಯಿತು.ಪ್ರತಿಪಕ್ಷ ಸ್ಥಾನ ಸಿಗದೆ ಹತಾಶ ಸ್ಥಿತಿಯಲ್ಲಿದ್ದ ಲೋಕಸಭೆಯ ಅತಿ ದೊಡ್ಡ ಪಕ್ಷ ಕಾಂಗ್ರೆಸ್ ತನ್ನನ್ನು ವಿಶೇಷ ಆಹ್ವಾನಿತ ಎಂದು ಪರಿಗಣಿಸಿದ್ದನ್ನು ಪ್ರತಿಭಟಿಸಿ ಲೋಕಸಭೆ ನೇಮಕಾತಿಗಾಗಿ ನಡೆದ ಏಳು ಸಭೆಗಳನ್ನೂ ಬಹಿಷ್ಕರಿಸಿತು. ಹೀಗೆ ಲೋಕಪಾಲ ನೇಮಕಾತಿ ವಿಳಂಬವಾಗಿರುವುದಕ್ಕೆ ಸರಕಾರದ್ದಷ್ಟೇ ಕಾಂಗ್ರೆಸ್ ಸಮಾನ ಹೊಣೆಯಾಗಿದೆ.ಕೊನೆಗೆ ನ್ಯಾಯಾಂಗ ನಿಂದನೆ ದಾವೆ ದಾಖಲಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತಾಕೀತು ಮಾಡಿದ ಬಳಿಕವಷ್ಟೇ ಸರಕಾರ ಲೋಕಪಾಲರ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿತು.
ಸಿಬಿಐ, ವಿಚಕ್ಷಣ ದಳದಂಥ ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಿರುವ ವಿಶ್ವಾಸವೂ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಲೋಕಪಾಲರ ನೇಮಕಾತಿಯಾಗಿದೆ. ಲೋಕಪಾಲರ ತನಿಖಾ ವ್ಯಾಪ್ತಿ ಮತ್ತು ಅವರಿಗಿರುವ ಅಧಿಕಾರದ ಹಿನ್ನೆಲೆಯಲ್ಲಿ ಹೇಳುವುದಾದರೆ ಲೋಕಪಾಲರಿಗೆ ದೇಶದಲ್ಲಿ ಗುಣಾತ್ಮಕವಾದ ಬದಲಾವಣೆಗಳನ್ನು ತರುವ ಧಾರಾಳ ಅವಕಾಶಗಳಿವೆ. ಮುಖ್ಯವಾಗಿ ಸಾರ್ವಜನಿಕ ರಂಗದ ಭ್ರಷ್ಟಾಚಾರವನ್ನು ನಿರ್ಮೂಲನಗೊಳಿಸುವಲ್ಲಿ ಲೋಕಪಾಲರು ನಿರ್ಣಾಯಕವಾದ ಪಾತ್ರವನ್ನು ವಹಿಸಬಹುದು. ಇಂದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ತೊಡಕಾಗಿರುವುದೇ ಎಲ್ಲೆಡೆ ವ್ಯಾಪಿಸಿರುವ ಭ್ರಷ್ಟಾಚಾರ. ಸಮಸ್ತ ಸರಕಾರಿ ನೌಕರರು ಮಾತ್ರವಲ್ಲದೆ ಉನ್ನತ ಅಧಿಕಾರ ಸ್ಥಾನದಲ್ಲಿರುವವರನ್ನು ಕೂಡಾ ತನಿಖೆ ನಡೆಸುವ ಅಧಿಕಾರ ಲೋಕಪಾಲರಿಗಿದೆ ಎನ್ನುವುದೇ ಈ ಹುದ್ದೆ ಎಷ್ಟು ಮಹತ್ವದ್ದು ಎನ್ನುವುದನ್ನು ತಿಳಿಸುತ್ತದೆ. ಇಷ್ಟು ಕಾಲ ಇಂಥ ಒಂದು ಕಣ್ಗಾವಲು ವ್ಯವಸ್ಥೆ ಇಲ್ಲದಿರುವುದರಿಂದಲೇ ಭ್ರಷ್ಟಾಚಾರ ಸರ್ವವ್ಯಾಪಿಯಾಗಿ ದೇಶ ಹಿಂದುಳಿಯಲು ಕಾರಣವಾಯಿತು.
Related Articles
Advertisement