Advertisement
ಸಮಸ್ಯೆ ಏನಾಗಿತ್ತು?ಬೆಳ್ತಂಗಡಿ ತಾ|ನ ಹೊಸಂಗಡಿ ಗ್ರಾಮದ ಅಂಚೆ ಪೆರಿಂಜೆ ಆಗಿರುತ್ತದೆ. ಇಲ್ಲಿಯ ಪಿನ್‌ಕೋಡ್ 574227 ಆಗಿತ್ತು. 2016ರಲ್ಲಿ ಅಂಚೆ ಇಲಾಖೆ ಪೆರಿಂಜೆ ಅಂಚೆ ಕಚೇರಿಯ ಪಿನ್ ಕೋಡನ್ನು 574197 ಎಂಬುದಾಗಿ ಏಕಾ ಏಕಿ ಬದಲಾಯಿಸಿತು. ಅಲ್ಲಿಂದ ಈವರೆಗೆ ಸಮಸ್ಯೆಗಳು ಗ್ರಾಮಸ್ಥರ ಬೆನ್ನುಹತ್ತಿದ್ದವು.
ಪಿನ್ ಕೋಡ್ ಬದಲಾವಣೆಯಿಂದಾಗಿ ಪೆರಿಂಜೆ ಗ್ರಾಮದ ಸುಮಾರು 200ರಷ್ಟು ಬಿಪಿಎಲ್ ಕುಟುಂಬದಾರರು 3 ವರ್ಷ ಸಮಸ್ಯೆ ಎದುರಿಸುವಂತಾಯಿತು. ಪ್ರಧಾನಮಂತ್ರಿ ಆವಾಸ್ ಯೋಜನೆ, ಜಾತಿ-ಆದಾಯ ಪ್ರಮಾಣ ಪತ್ರ, ದೀನ್ ದಯಾಳ್ ಉಚಿತ ವಿದ್ಯುದೀಕರಣ ಯೋಜನೆ, ಆರ್.ಟಿ.ಇ. ಶಿಕ್ಷಣ, ಪಡಿತರ, ಉಚಿತ ಆರೋಗ್ಯ ಸೌಲಭ್ಯ ಹೀಗೆ ಸರಕಾರದ ವಿವಿಧ ಪ್ರಮುಖ ಯೋಜನೆಗಳಿಂದ ವಂಚಿತರಾಗಿದ್ದರು. ಪ್ರತೀ ಗ್ರಾಮಸಭೆಗಳಲ್ಲೂ ಧ್ವನಿ
ಪ್ರತೀ ಬಾರಿ ಗ್ರಾಮಸ್ಥರು ಈ ಸಮಸ್ಯೆಯ ಬಗ್ಗೆ ಗ್ರಾಮಸಭೆಗಳಲ್ಲಿ ಧ್ವನಿ ಎತ್ತುತ್ತಲೇ ಇದ್ದರು. ಈ ಬಗ್ಗೆ ಪಂ. ನಿರ್ಣಯ ಮಾಡಿಕೊಂಡು ಸಂಬಂಧಿತ ಇಲಾಖೆಗಳಿಗೆ ತಲುಪಿಸಿದರೂ ಪ್ರಯೋಜನ ಇರಲಿಲ್ಲ.
Related Articles
ಅಂದಿನ ಆಹಾರ ಸಚಿವರಿಗೆ, ಸಂಸದರಿಗೆ, ಶಾಸಕರಿಗೆ, ಆಧಾರ್ ಇಲಾಖೆಗೆ, ಅಂಚೆ ಇಲಾಖೆಯ ಅಧಿಕಾರಿಗಳಿಗೆ ಹೊಸಂಗಡಿ ಪಂ. ಮನವಿ ಮಾಡಿಕೊಂಡಿದ್ದರೂ ಹಾರಿಕೆಯ ಉತ್ತರ ಲಭಿಸುತ್ತಿತ್ತೇ ಹೊರತು ಸಮಸ್ಯೆ ಬಗೆಹರಿದಿರಲಿಲ್ಲ.
Advertisement
ಪತ್ರಿಕೆ ಗಮನ ಸೆಳೆದಿತ್ತುಪಿನ್ ಕೋಡ್ ಬದಲಾವಣೆಯಿಂದಾಗಿ ಪೆರಿಂಜೆ ಗ್ರಾಮಸ್ಥರು ಸೌಲಭ್ಯ ವಂಚಿತರಾಗಿರುವ ಬಗ್ಗೆ ಉದಯವಾಣಿ ಸುದಿನ ಕಳೆದ ಜ. 12ರಂದು ವರದಿ ಪ್ರಕಟಿಸಿ ಸಮಸ್ಯೆಯ ಗಂಭೀರತೆ ಬಗ್ಗೆ ಗಮನ ಸೆಳೆದಿತ್ತು. ಪಂ. ನಿಯೋಗದಿಂದ ಜಿಲ್ಲಾಧಿಕಾರಿ ಭೇಟಿ
ಮನವಿಗಳಿಗೆ ಸ್ಪಂದನೆ ದೊರಕದ ಕಾರಣ ಹೊಸಂಗಡಿ ಪಂ.ನ ಆಡಳಿತ ಮಂಡಳಿ ಕಳೆದ ಗುರುವಾರ ಜಿ.ಪಂ.ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರನ್ನು ಭೇಟಿಯಾಯಿತು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿತು. ಅವರು ಬೆಂಗಳೂರಿನ ಆಧಾರ್ ಕೇಂದ್ರವನ್ನು ಸಂಪರ್ಕಿಸಿ ಸಮಸ್ಯೆ ವಿವರಿಸಿದರು. ಇದಾದ ಮೂರೇ ದಿನಗಳಲ್ಲಿ ಅಂದರೆ ಸೋಮವಾರ ಸಮಸ್ಯೆ ಬಗೆಹರಿದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ದ.ಕ. ಜಿಲ್ಲೆಯಲ್ಲಿ 43 ಗ್ರಾಮದ ಪಿನ್ ಕೋಡ್ ಗಳು ಬದಲಾವಣೆ ಆಗಿತ್ತು. ಆದರೆ ಸಮಸ್ಯೆ ಉಳಿದದ್ದು ಪೆರಿಂಜೆ ಗ್ರಾಮದ್ದು ಮಾತ್ರ. ತಾಲೂಕು ಗಡಿಭಾಗದ ಸಮಸ್ಯೆಯಿಂದಾಗಿ ಬೆಂಗಳೂರಿನ ಆಧಾರ್ ಕೇಂದ್ರದಲ್ಲಿ ತಂತ್ರಜ್ಞಾನದ ಅಪ್ ಡೇಟ್ ಆಗದೇ ಈ ಸಮಸ್ಯೆ ಸೃಷ್ಟಿಯಾಗಿತ್ತು. ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಹೊಸಂಗಡಿ ಗ್ರಾ.ಪಂ. ಅಧ್ಯಕ್ಷೆ ಹೇಮಾ ವಸಂತ್ ಹಾಗೂ ಆಡಳಿತ ಮಂಡಳಿ, ಪಿಡಿಒ ಗಣೇಶ್ ಶೆಟ್ಟಿ, ದ.ಕ. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಎನ್.ಆರ್. ರವಿ, ಜಿಲ್ಲಾಡಳಿತ ಕಚೇರಿಯ ಆಧಾರ್ ವಿಭಾಗದ ಅಧಿಕಾರಿ ನರೇಂದ್ರ ಅವರ ಸಹಕಾರದಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್ ಅವರು ಸಮಸ್ಯೆಯನ್ನು ಬಗೆಹರಿಸಿದ್ದಾರೆ. ತಿದ್ದುಪಡಿ ಮಾಡಿಸಿ
ಪೆರಿಂಜೆಯ ಗ್ರಾಮಸ್ಥರೆಲ್ಲರೂ ಅವರ ಆಧಾರ್ ಕಾರ್ಡ್‌ನಲ್ಲಿ ಪಿನ್ ಕೋಡ್ ಸಂಖ್ಯೆ 574197 ಅನ್ನು ಸೇರಿಸಬೇಕು. ಹೊಸಂಗಡಿ ಗ್ರಾ.ಪಂ. ಕಚೇರಿ ಅಥವಾ ಸೈಬರ್ ಸೆಂಟರ್, ನೆಮ್ಮದಿ ಕೇಂದ್ರ ಅಥವಾ ಆಧಾರ್ ಸೆಂಟರ್‌ಗಳಲ್ಲಿ ತಿದ್ದುಪಡಿ ಮಾಡಿಸಬಹುದಾಗಿದೆ. ಪರಿಹಾರ
ಈ ಸಮಸ್ಯೆ ಬಗ್ಗೆ ಕಳೆದೆರಡು ವರ್ಷಗಳಿಂದ ವಿವಿಧ ಅಧಿಕಾರಿಗಳಿಗೆ, ಇಲಾಖೆಗೆ ಮನವಿ ನೀಡಿ ವಿವರಿಸಿದ್ದೆವು. ಜಿ.ಪಂ. ಸಭೆಯಲ್ಲಿ ಸಮಸ್ಯೆ ಬಗ್ಗೆ ಧ್ವನಿ ಎತ್ತಲಾಗಿತ್ತು. ಅಪರ ಜಿಲ್ಲಾಧಿಕಾರಿಯವರನ್ನು ಮುಖತಃ ಭೇಟಿ ಮಾಡಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗಿತ್ತು. ಕೊನೆಗೂ ಸ್ಪಂದನೆ ಸಿಕ್ಕಿದೆ. ಬಡ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
– ಪಿ. ಧರಣೇಂದ್ರ ಕುಮಾರ್, ಜಿ.ಪಂ. ಸದಸ್ಯರು, ನಾರಾವಿ — ಪದ್ಮನಾಭ ವೇಣೂರು