ಬೆಂಗಳೂರು: ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಮಿರಾಜ್ 2000 ಯುದ್ಧ ವಿಮಾನ ಪತನಗೊಂಡ ಅವಘಡದಲ್ಲಿ ಮೃತರಾದ ಪೈಲಟ್‌ಗಳಾದ ಸಿದ್ಧಾರ್ಥ್ ನೇಗಿ (32) ಹಾಗೂ ಸಮೀರ್ ಅಬ್ರೋಲ್ ( 33) ಅವರ ಮೃತದೇಹಗಳನ್ನು ಅವರ ಕುಟುಂಬ ವರ್ಗಕ್ಕೆ ಶನಿವಾರ ವಾಯುಪಡೆ ಹಸ್ತಾಂತರಿಸಿದೆ.
ಕಮಾಂಡೋ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಇಬ್ಬರೂ ಪೈಲಟ್‌ಗಳಿಗೆ ಗೌರವ ಸಲ್ಲಿಸಿ ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಗಿದೆ. ಈ ಪೈಕಿ ಸಿದ್ದಾರ್ಥ್ ನೇಗಿ ಮೃತದೇಹದ ಅಂತಿಮ ಸಂಸ್ಕಾರವನ್ನು ಸೇನಾಗೌರವಗಳೊಂದಿಗೆ ಕಲ್ಪಹಳ್ಳಿ ಸ್ಮಶಾನದಲ್ಲಿ ಕುಟುಂಬ ವರ್ಗದವವರು ನೆರವೇರಿಸಿದ್ದಾರೆ.
ಮತ್ತೂಬ್ಬ ಪೈಲೆಟ್ ಸಮೀರ್ ಅಬ್ರೋಲ್ ಮೃತದೇಹವನ್ನು ಸ್ವಂತ ಊರಾದ ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ಕುಟುಂಬಸ್ಥರು ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಪತನಗೊಂಡಿರುವ ವಿಮಾನದ “ಬ್ಲಾಕ್ ಸ್ಪಾಟ್’ ಪಡೆದುಕೊಂಡಿರುವ ವಾಯುಪಡೆ ಅಧಿಕಾರಿಗಳು ಹಾಗೂ ಎಚ್‌ಎಎಲ್ ತಜ್ಞರ ತಂಡ ದುರಂತಕ್ಕೆ ನೈಜ ಕಾರಣ ಪತ್ತೆಹಚ್ಚುವ ಸಲುವಾಗಿ ಆಂತರಿಕ ತನಿಖೆ ಮುಂದುವರಿಸಿದೆ.
ವಿಮಾನ ಟೇಕಾಫ್ ಆಗುವ ವೇಳೆ ಬಳಕೆಯಾಗುವ ಗೇರ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದೆ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ
ಹುಟ್ಟುಹಬ್ಬದ ದಿನವೇ ಉಸಿರು ಚೆಲ್ಲಿದ ನೇಗಿ!: ಮಿರಾಜ್ ಯುದ್ಧವಿಮಾನ ಪತನ ದುರಂತದಲ್ಲಿ ಶುಕ್ರವಾರ ಪ್ರಾಣಕಳೆದುಕೊಂಡು ಪೈಲೆಟ್ ಸಿದ್ಧಾರ್ಥ ನೇಗಿ ಹುಟ್ಟುಹಬ್ಬದ ದಿನವೇ ಪ್ರಾಣಕಳೆದುಕೊಂಡಿದ್ದಾರೆ. ಮಿರಾಜ್ ಯುದ್ಧ ವಿಮಾನ ಪ್ರಾಯೋಗಿಕ ಹಾರಾಟದ ಬಳಿಕ ಬರ್ತಡೇ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದರು. ಆದರೆ, ದುರಂತದಲ್ಲಿ ಮಡಿದರು ಎಂದು ಹೆಸರು ಹೇಳಲು ಇಚ್ಛಿಸಿದ ಅಧಿಕಾರಿಯೊಬ್ಬರು ಬೇಸರವ್ಯಕ್ತಪಡಿಸಿದರು.