ಮಂಗಳೂರು : ಪಿಲಿಕುಳ ಮೊದಲ ಅಂತಾರಾಷ್ಟ್ರೀಯ ಫುಲ್ ಡೋಮ್ ಚಿತ್ರೋತ್ಸವ ಮತ್ತು ತಾರಾಲಯ ಸಮ್ಮೇಳನವು ಬುಧವಾರದಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ವತಿಯಿಂದ ಇನೋವಿಷನ್ ಟೆಕ್ನಾಲಜೀಸ್ ಮುಂಬೈ ಮತ್ತು ಇವಾನ್ಸ್ ಆ್ಯಂಡ್ ಸದರ್‌ಲ್ಯಾಂಡ್ ಯುಎಸ್‌ಎ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವನ್ನು ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸೂರ್ಯ-ಭೂಮಿಯ ವ್ಯವಸ್ಥೆಯ ಸುತ್ತ ಅಧ್ಯಯನಕ್ಕಾಗಿ ಆದಿತ್ಯ ಎಂಬ ಉಪಗ್ರಹವನ್ನು ಉಡಾಯಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧತೆ ನಡೆಸಿದೆ. ಆದಿತ್ಯ ಉಪಗ್ರಹ ಸೂರ್ಯನನ್ನು ನಿರಂತರ ವೀಕ್ಷಣೆ ಮಾಡುವುದಲ್ಲದೆ, ಹೆಚ್ಚುವರಿ ಪ್ರಯೋಗಗಳೊಂದಿಗೆ ಸೂರ್ಯನ ವರ್ಣತಂತು, ದ್ಯುತಿಗೋಳ ಮೊದಲಾದ ಪ್ರಕ್ರಿಯೆಗಳನ್ನು ಅವಲೋಕಿಸಲಿದೆ ಎಂದು ಹೇಳಿದರು.
ಅತಿಥಿಯಾಗಿದ್ದ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವಿಶೇಷ ಕಾರ್ಯದರ್ಶಿ (ತಾಂತ್ರಿಕ) ಡಾ.ಎಚ್. ಹೊನ್ನೇಗೌಡ ಮಾತನಾಡಿ, ಪಿಲಿಕುಳದಲ್ಲಿ ನಿರ್ಮಿಸಲಾಗಿರುವ ತಾರಾಲಯ 18 ಮೀಟರ್‌ನ ಡೋಮ್ ಹೊಂದಿದ್ದು, 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮುಂದಕ್ಕೆ ಉತ್ತರ ಕರ್ನಾಟಕದಲ್ಲಿ 10 ಮೀಟರ್ ಡೋಮ್‌ನ ತಾರಾಲಯಗಳನ್ನು ನಿರ್ಮಿಸುವ ಯೋಜನೆಯಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಮಾತನಾಡಿ, ಪಿಲಿಕುಳ ನಿಸರ್ಗಧಾಮದ ಅಭಿವೃದ್ಧಿಗೆ ಜಿಲ್ಲಾಡಳಿತ ಬದ್ದವಾಗಿದೆ. ಖಗೋಳವಿಜ್ಞಾನದ ಬಗ್ಗೆ ಶಾಲಾ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕಿದೆ. ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯವನ್ನು ಉಚಿತವಾಗಿ ತೋರಿಸಬೇಕು ಎಂದರು.
ಅಂತಾರಾಷ್ಟ್ರೀಯ ತಾರಾಲಯ ಸೊಸೈಟಿ ಅಧ್ಯಕ್ಷ ಡಾ.ಮಾರ್ಕ್ ಸುಬ್ಬರಾವ್, ಇವಾನ್ಸ್ ಆ್ಯಂಡ್ ಸದರ್‌ಲ್ಯಾಂಡ್ ಅಂತಾರಾಷ್ಟ್ರೀಯ ಮಾರಾಟ ನಿರ್ದೇಶಕ ಸ್ಕಾಟ್ ಎ.ನಿಸ್ಕಾಚ್, ಇನೋವಿಷನ್ ಟೆಕ್ನಾಲಜಿಸ್ ವ್ಯವಸ್ಥಾಪಕ ನಿರ್ದೇಶಕ ಅಭಿಜಿತ್ ಶೇಟ್ಯೆ ಅತಿಥಿಯಾಗಿದ್ದರು.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ ಸದಸ್ಯ ಕಾರ್ಯದರ್ಶಿ ಆರ್. ಮೇಘನಾ ಉಪಸ್ಥಿತರಿದ್ದರು. ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ವಿ.ರಾವ್ ಸ್ವಾಗತಿಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಮೋಷನ್ ಸೊಸೈಟಿ ವೈಜ್ಞಾನಿಕ ಅಧಿಕಾರಿ ಸತ್ಯಕುಮಾರ್ ಶರ್ಮಾ ವಂದಿಸಿದರು.