ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ 15ಕ್ಕೂ ಮಿಕ್ಕಿದ ಪ್ರಾಣಿ, ಪಕ್ಷಿ ಹಾಗೂ ಉರಗಗಳ ಸಂತಾನ ಅಭಿವೃದ್ಧಿ ಆಗುವ ಮೂಲಕ ದಾಖಲೆ ನಿರ್ಮಾಣವಾಗಿದೆ.
ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಮದ್ಯ ಹಾಗೂ ಪೂರ್ವ ಯೂರೋಪ್ ದೇಶಗಳಲ್ಲಿ ಕಂಡುಬರುವ ಮಸ್ಕೋವಿ ಬಾತುಕೋಳಿಗಳು ಮೊಟ್ಟೆ ಇಟ್ಟು 10 ಹೊಸ ಮರಿಗಳು ಹೊರಬಂದಿವೆ. ಬ್ರಝಿಲ್‌ನ ಆಮೆಜಾನ್ ನದಿಯ ಉತ್ತರದ ಅರಣ್ಯ ಪ್ರದೇಶಗಳಲ್ಲಿ ಕಂಡುಬರುವ “ರೆಡ್ ಹ್ಯಾಂಡೆಡ್ ಕಪಿ’ ಎರಡು ಮರಿಗಳನ್ನಿಟ್ಟಿವೆ.
ಉತ್ತರ ಮತ್ತು ಪೂರ್ವ ಆಫ್ರಿಕಾ, ಮಧ್ಯ ಪ್ರಾಚ್ಯ, ಮದ್ಯ ಏಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿ ಕಂಡುಬರುವ ಹೈನಾ ಜಾತಿಯ ಕತ್ತೆಕಿರುಬ ಎರಡು ಮರಿಗಳು, ಬಿಳಿ ಕೃಷ್ಣ ಮೃಗ ಒಂದು ಮರಿ, ಕಾಡು ನಾಯಿ/ ಚೆನ್ನ ನಾಯಿಯು ಐದು ಮರಿಗಳನ್ನು ಹಾಗೂ ಭಾರತ ಉಪಖಂಡದಾದ್ಯಂತ ಕಂಡುಬರುವ ನೀಲಗಾಯ್ ಎಂಬ ಪ್ರಾಣಿ ನಾಲ್ಕು ಮರಿಗಳಿಗೆ ಜನ್ಮ ನೀಡಿವೆ.
ದಕ್ಷಿಣ ಆಫ್ರೀಕಾಕ್ಕೆ ಸ್ಥಳೀಯವಾಗಿರುವ ಅರೆ ಜಲವಾಸಿ ಸಸ್ತನಿ ನೀರಾನೆಯು ಮರಿ ಇಟ್ಟಿದೆ. ಉಳಿದಂತೆ 3 ಬರಿಂಕಗಳು, 3 ಗೋಲ್ಡನ್ (ಸಾಮಾನ್ಯ) ನರಿಗಳು, ನಾಲ್ಕು ಸಾಂಬಾರ್ ಜಿಂಕೆಗಳು ಹಾಗೂ 10 ಚಿಟ್ಟೆ ಜಿಂಕೆಗಳು, 5 ಕೃಷ್ಣ ಮೃಗಗಳು, 2 ಕಾಡು ಕುರಿ, 5 ಮರ್ಷ್ ಮೊಸಳೆ, 103 ನೀರು ಹಾವುಗಳು ಪಿಲಿಕುಳದಲ್ಲಿ ಮರಿಗಳಿಗೆ ಜನ್ಮನೀಡಿವೆ.
ಶೀಘ್ರದಲ್ಲೇ ಬ್ರೆಜಿಲ್‌ನ ಮೊರಮೊಸೆಟ್ ಕಪಿ, ದಕ್ಷಿಣ ಅಮೆರಿಕದ ಅಳಿಲು ಮಂಗಗಳು ಮರಿಗಳನ್ನು ನೀಡಲಿವೆ. ಎರಡು ಕಾಳಿಂಗ ಸರ್ಪಗಳು ಮೊಟ್ಟೆ ಇಡಲು ಸಿದ್ಧವಾಗಿವೆ. ರಾಕ್ ಹೆಬ್ಟಾವು, ರೇಟಿಕುಲಟ್ ಹೆಬ್ಟಾವುಗಳು ಮೊಟ್ಟೆ ಇಡಲು ಆರಂಭಿಸಿವೆ.
ಪ್ರಾಣಿ ಪಕ್ಷಿ ಸಂಖ್ಯೆ ಏರಿಕೆ
ವಂಶಾಭಿವೃದ್ಧಿಯ ಮೂಲಕ ಪಿಲಿಕುಳದಲ್ಲಿ ಪ್ರಸಕ್ತ ಪ್ರಾಣಿ ಪಕ್ಷಿಗಳ ಒಟ್ಟು ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಸದ್ಯ 1200ಕ್ಕೂ ಅಧಿಕ ಪ್ರಾಣಿ-ಪಕ್ಷಿಗಳು ಪಿಲಿಕುಳದಲ್ಲಿವೆ. ದೇಶದಲ್ಲೇ ಕಾಳಿಂಗ ಸರ್ಪಗಳ ಸಂತಾನ ಮಾಡಿರುವ ಏಕೈಕ ಮೃಗಾಲಯವಾದ ಪಿಲಿಕುಳದಲ್ಲಿ ಈ ತಿಂಗಳಿನಲ್ಲಿ ಹಲವಾರು ಪ್ರಾಣಿ ಪಕ್ಷಿ ಹಾಗೂ ಉರಗಗಳು ಸಂತಾನವಾಗಿದೆ. ಅವುಗಳಿಗೆ ಮೃಗಾಲಯದ ಆವರಣವನ್ನು ನೈಸರ್ಗಿಕ ಆವಾಸಸ್ಥಾನವಾಗಿ ಮಾರ್ಪಾಡು ಮಾಡುವುದು ಹಾಗೂ ಪೌಷ್ಟಿಕ ಆಹಾರ-ಉತ್ತಮ ಆರೋಗ್ಯ ಒದಗಿಸುವ ಮೂಲಕ ಸಾಧ್ಯವಾಗಿದೆ. –
ಎಚ್.ಜೆ. ಭಂಡಾರಿ, ನಿರ್ದೇಶಕರು ಪಿಲಿಕುಳ ಜೈವಿಕ ಉದ್ಯಾನವನ