Advertisement

ಹಾವೇರಿಯಲ್ಲಿ ಪಿಲಿಕುಳ ಮಾದರಿ ವಿಜ್ಞಾನ ಕೇಂದ್ರ

04:56 PM Oct 01, 2018 | Team Udayavani |

ಹಾವೇರಿ: ಸ್ಥಳೀಯ ಜಿಲ್ಲಾಡಳಿತ ಭವನದ ಬಳಿ ಪಿಲಿಕುಳ ಮಾದರಿಯಲ್ಲಿ ಜಿಲ್ಲಾ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಯಾಗುತ್ತಿದ್ದು, ಅಂದುಕೊಂಡಂತೆ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡರೆ ಮುಂದಿನ ವರ್ಷವೇ ಈ ಕೇಂದ್ರ ಕಾರ್ಯಾರಂಭಗೊಳ್ಳಲಿದೆ.

Advertisement

ಶೈಕ್ಷಣಿಕ ಪ್ರವಾಸೋದ್ಯಮದ ಮೂಲಕ ಗಮನ ಸೆಳೆದಿರುವ ಪಿಲಿಕುಳದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದ ಮಾದರಿಯಲ್ಲಿ ಇಲ್ಲಿಯೂ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಜಿಲ್ಲಾಡಳಿತ ಭವನದ ಎದುರಿಗೆ 9.5 ಎಕರೆ ಜಾಗದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ಕೇಂದ್ರದ ಕಟ್ಟಡ ಕಾಮಗಾರಿ ಭರದಿಂದ ಶುರುವಾಗಿದೆ.

ಈ ವಿಜ್ಞಾನ ಕೇಂದ್ರದಲ್ಲಿ ವಿಷಯಾಧಾರಿತ ವಿಜ್ಞಾನ, ಮನರಂಜನಾ ವಿಜ್ಞಾನಕ್ಕೆ ಸಂಬಂಧಿ ಸಿದ ಗ್ಯಾಲರಿಗಳು ಇರಲಿದ್ದು ಅದರಲ್ಲಿ ಜೀವವೈವಿಧ್ಯ ಮತ್ತು ಆಧುನಿಕ ಸಂಶೋಧನೆ, ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಭಾಗಗಳು ಇರುತ್ತವೆ. ಈ ಗ್ಯಾಲರಿಗಳಲ್ಲಿ ವಿದ್ಯಾರ್ಥಿಗಳು ಸ್ವತಃ ಬಳಸಬಹುದಾದ ವಿಜ್ಞಾನ ಮಾದರಿಗಳಿರುತ್ತವೆ. ಇದಲ್ಲದೇ ಮಾನವ ವಿಕಾಸ, ವಿನಾಶದ ಅಂಚಿನಲ್ಲಿರುವ ಪ್ರಬೇಧಗಳು, ಅವುಗಳನ್ನು ಉಳಿಸುವುದರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟಾಗುವ ರೀತಿಯಲ್ಲಿ ವಿವರಣೆ ನೀಡುವ ಪ್ರಯತ್ನಗಳು ಇಲ್ಲಿ ಮಾಡಲು ಉದ್ದೇಶಿಸಲಾಗಿದೆ. ನ್ಯಾನೋ ತಂತ್ರಜ್ಞಾನ, ರಾಕೆಟ್‌ ತಂತ್ರಜ್ಞಾನ, ಸಂವಹನ ತಂತ್ರಜ್ಞಾನ, ವೈದ್ಯಕೀಯ ತಂತ್ರಜ್ಞಾನದ ಕುರಿತ ಮಾದರಿಗಳು ಹಾಗೂ ಪ್ರಾತ್ಯಕ್ಷಿಕೆಗಳು ಈ ಕೇಂದ್ರದಲ್ಲಿ ಇರಲಿದ್ದು, ಪರಿಸರ ಜಾಗೃತಿ ಜತೆಗೆ ವಿಜ್ಞಾನದ ವಿಸ್ಮಯಗಳು ಇಲ್ಲಿ ಅನಾವರಣಗೊಳಿಸುವ ಯೋಜನೆ ಇದೆ.

ಗೊಂದಲಮುಕ್ತ: ವಿಜ್ಞಾನ ಕೇಂದ್ರ ಹಲವು ವರ್ಷಗಳಿಂದ ಕ್ರಿಯಾಯೋಜನೆ, ಸ್ಥಳ ಗೊಂದಲದಲ್ಲೇ ಕಳೆಯಿತು. 2006ರಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಬಸವರಾಜ ಹೊರಟ್ಟಿ ಹಾವೇರಿಗೆ ವಿಜ್ಞಾನ ಕೇಂದ್ರ ಮಂಜೂರು ಮಾಡಿ 1.5 ಕೋಟಿ ಅನುದಾನವನ್ನೂ ನೀಡಿದ್ದರು. ಬಳಿಕ ದೇವಗಿರಿಯಲ್ಲಿ ಮೂರು ಎಕರೆ ಜಾಗವನ್ನು ಕೇಂದ್ರ ಸ್ಥಾಪನೆಗೆ ಮೀಸಲಾಗಿಡಲಾಗಿತ್ತು. ಬಳಿಕ ಯಾರೂ ಈ ಬಗ್ಗೆ ಆಸಕ್ತಿ ತೋರದೆ ಇರುವುದರಿಂದ ವಿಜ್ಞಾನ ಕೇಂದ್ರ ಸ್ಥಾಪನೆ ವಿಚಾರವೇ ಕೈಬಿಡಲಾಗಿತು.

ಎರಡು ವರ್ಷಗಳ ಹಿಂದೆ ವಿಜ್ಞಾನ ಕೇಂದ್ರ ಸ್ಥಾಪನೆ ವಿಚಾರಕ್ಕೆ ಚಾಲನೆ ದೊರೆತು, ಕರ್ಜಗಿಯ ಕೇಂದ್ರೀಯ ವಿದ್ಯಾಲಯದ ಪಕ್ಕದಲ್ಲೇ ವಿಜ್ಞಾನ ಕೇಂದ್ರ ಸ್ಥಾಪನೆಗೆ ಜಿಲ್ಲಾಡಳಿತ ಮುಂದಾಯಿತು. ಈಗಿನ ಜಿಲ್ಲಾ ಧಿಕಾರಿ ಡಾ| ಎಂ.ವಿ.ವೆಂಕಟೇಶ ಅದನ್ನು ಮತ್ತೆ ದೇವಗಿರಿಗೆ ವರ್ಗಾಯಿಸಿದರು ಹಾಗೂ ಕೂಡಲೇ ಹಣ ಬಿಡುಗಡೆ ಮಾಡಿ ಕಟ್ಟಡ ನಿರ್ಮಾಣಕ್ಕೆ ಸೂಚಿಸಿದರು. ತನ್ಮೂಲಕ ಕಳೆದ 12 ವರ್ಷಗಳಿಂದ ಕಡತದಲ್ಲೇ ಉಳಿದಿದ್ದ ವಿಜ್ಞಾನ ಕೇಂದ್ರ ಈಗ ಎಲ್ಲ ಗೊಂದಲಗಳಿಂದ ಮುಕ್ತವಾದಂತಾಗಿದೆ.

Advertisement

ವಿಜ್ಞಾನ ಕೇಂದ್ರ ನಿರ್ಮಾಣ ಕಾರ್ಯ ನಡೆದಿದ್ದು ಕೆಲವೇ ತಿಂಗಳುಗಳಲ್ಲಿ ವಿಜ್ಞಾನ ಕೇಂದ್ರ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ, ಗಣಿತ, ವಿಜ್ಞಾನ ಮುಂತಾದ ವಿಷಯಗಳಲ್ಲಿ ಕಲಿಕಾಸಕ್ತಿ ಮೂಡಿಸುವ ಕೇಂದ್ರವಾಗಿ ತಲೆಎತ್ತಲಿದೆ.

ಜಿಲ್ಲಾಡಳಿತ ಭವನದ ಸಮೀಪದೇ ದೇವಗಿರಿ ಗುಡ್ಡದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣಗೊಳ್ಳುತ್ತಿದ್ದು, ಕಾಮಗಾರಿ ತ್ವರಿತವಾಗಿ ನಡೆದಿದೆ. ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಕಾಮಗಾರಿ ಪೂರ್ಣಗೊಂಡು ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನ ಆಸಕ್ತರಿಗೆ ಸಿಗಲಿದೆ.
ಡಾ| ಎಂ.ವಿ.ವೆಂಕಟೇಶ, ಜಿಲ್ಲಾಧಿಕಾರಿ

„ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next