ಮಂಗಳೂರು: ಕರಾವಳಿ ಭಾಗದಲ್ಲೇ ಸರಕಾರಿ ಪ್ರಾಯೋಜ ಕತ್ವದಲ್ಲಿ ನಡೆಯುವ ಏಕೈಕ “ಪಿಲಿಕುಳ ಕಂಬಳ’ವನ್ನು 10 ವರ್ಷಗಳ ಬಳಿಕ ಈ ಬಾರಿ ಮತ್ತೆ ಆರಂಭಿಸಲು ದ.ಕ. ಜಿಲ್ಲಾಡಳಿತ ನಿರ್ಧರಿಸಿದ್ದು, ಇದರ ಪೂರ್ವಭಾವಿಯಾಗಿ ಕರೆಯ ಕೆಲಸಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮ ದಲ್ಲಿ ವೇ| ಟಿ. ಬಾಲಕೃಷ್ಣ ಭಟ್ ನೇತೃತ್ವ ದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಪಿಲಿಕುಳ ಕಂಬಳದ ಜತೆಗೆ ತುಳು ನಾಡ ಉತ್ಸವ ಕಾರ್ಯಕ್ರಮವನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಸುವ ಬಗ್ಗೆ ಬೆಂಗಳೂರಿನಲ್ಲಿ ಸದ್ಯದಲ್ಲೇ ಸ್ಪೀಕರ್ ಯು.ಟಿ.ಖಾದರ್ ಹಾಗೂ ಸಚಿವ ದಿನೇಶ್ ಗುಂಡೂ ರಾವ್ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ತುಳು ಉತ್ಸವದ ಕಾರ್ಯಕ್ರಮಗಳ ಬಗ್ಗೆ ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗು ವುದು ಎಂದು ಡಿ.ಸಿ.ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಪಿಲಿಕುಳದಲ್ಲಿ ಸಾಕಷ್ಟು ಮೂಲಸೌಲಭ್ಯ ಹಾಗೂ ಪ್ರವಾಸಿಗರಿಗೆ ಬೇಕಾದ ವ್ಯವಸ್ಥೆಗಳಿವೆ. ಆದರೆ ಇದನ್ನು ಆಕರ್ಷಿಸುವ ಪ್ರಯತ್ನ ನಮ್ಮಲ್ಲಿ ನಡೆಯುತ್ತಿಲ್ಲ. ಈ ಕಾರಣದಿಂದ ಪಿಲಿಕುಳ ಕಂಬಳವನ್ನು ತುಳುನಾಡು ಉತ್ಸವವಾಗಿ ರೂಪಿಸಲು ಉದ್ದೇಶಿಸಲಾಗಿದೆ ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಪಂಚಾಯತ್ ಸಿಇಒ ಡಾ|ಆನಂದ್, ಮುಡಾ ಆಯುಕ್ತ ನೂರ್ ಝಹರಾ ಖಾನಂ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ| ಬೆಳಪು ದೇವೀಪ್ರಸಾದ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ, ಅದಾನಿ ಸಂಸ್ಥೆಯ ಕಿಶೋರ್ ಆಳ್ವ, ಪ್ರಮುಖರಾದ ಪಿ.ಆರ್.ಶೆಟ್ಟಿ, ಶ್ರೀಕಾಂತ್ ಭಟ್ ನಂದಳಿಕೆ, ಚಂದ್ರಹಾಸ್ ಶೆಟ್ಟಿ ಪುತ್ತೂರು, ನವೀನ್ಚಂದ್ರ ಆಳ್ವ ತಿರುವೈಲುಗುತ್ತು, ವಿಜಯ್ ಕುಮಾರ್ ಕಂಗಿನಮನೆ, ಸತೀಶ್ಚಂದ್ರ ಸಾಲಿಯಾನ್, ಮುಚ್ಚಾರು ಕೆ.ಲೋಕೇಶ್ ಶೆಟ್ಟಿ, ಇರ್ವತ್ತೂರು ಭಾಸ್ಕರ ಕೋಟ್ಯಾನ್, ಚಂದ್ರಹಾಸ್ ಸನಿಲ್, ಶೆಡ್ಡೆ ಮಂಜುನಾಥ ಭಂಡಾರಿ, ಮೂಡುಜಪ್ಪುಗುತ್ತು ಸತೀಶ್ ಶೆಟ್ಟಿ, ಓಂಪ್ರಕಾಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
5 ದಿನಗಳ ಕಾರ್ಯಕ್ರಮ
ಒಟ್ಟು 5 ದಿನ ಸರಕಾರದ ವತಿಯಿಂದಲೇ ವಿಶೇಷ ಕಾರ್ಯಕ್ರಮಗಳನ್ನು ಪಿಲಿಕುಳದಲ್ಲಿ ಆಯೋಜಿಸಲಾಗುತ್ತದೆ. ಮಕ್ಕಳ ಹಬ್ಬ, ಕೃಷಿ ಮೇಳ, ವಿಜ್ಞಾನ ಮೇಳ, ಸಾಂಸ್ಕೃತಿಕ ಉತ್ಸವ 5 ದಿನ ನಡೆಯಲಿದ್ದು, ಕೊನೆಯ 2 ದಿನವಾದ ನ.18 ಹಾಗೂ 19ರಂದು ಪಿಲಿಕುಳ ಕಂಬಳ ನಡೆಯಲಿದೆ ಎಂದು ಡಾ|ಬೆಳಪು ದೇವೀಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.