ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿರುವ ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’ (ಸೂಕ್ಷ್ಮ ಬಿಲ್ಲೆ) ಅಳವಡಿಸಲಾಗುತ್ತಿದೆ.
ಉರಗಗಳು ಸಾಮಾನ್ಯವಾಗಿ ಒಂದೇ ತೆರನಾಗಿರುವುದರಿಂದ ಅವುಗಳನ್ನು ಮೇಲ್ನೋಟಕ್ಕೆ ಪ್ರತ್ಯೇಕವಾಗಿ ಗುರುತಿಸುವುದು ಕಷ್ಟ. ಪಿಲಿಕುಳವು ಕಾಳಿಂಗ ಸರ್ಪಗಳ ಸಂತಾನಾಭಿವೃದ್ದಿ ಮತ್ತು ಸಂರಕ್ಷಣ ಕೇಂದ್ರವಾಗಿರುವುದರಿಂದ ಕಾಳಿಂಗ ಸರ್ಪವನ್ನು ಪ್ರತ್ಯೇಕವಾಗಿ ಗುರುತಿಸಬೇಕಾಗುತ್ತದೆ. ಜತೆಗೆ ಸಂತಾನಾಭಿವೃದ್ಧಿಯ ಸಮಯದಲ್ಲಿ ಅವುಗಳು ಅಂತರ್ ಸಂಬಂಧ ಹಾಗೂ ಉತ್ತಮ ಪೀಳಿಗೆಯನ್ನು ಹೊಂದುವಂತೆ ಮಾಡುವ ನಿಟ್ಟಿನಲ್ಲಿ ಮೈಕ್ರೋ ಚಿಪ್ ಅಳವಡಿಕೆ ಮಾಡಲಾಗುತ್ತಿದೆ.
ಮೈಕ್ರೋ ಚಿಪ್‌ಗಳನ್ನು ಪ್ರಾಣಿಗಳ ಚರ್ಮದ ಒಳಗೆ ಅಳವಡಿಸಲಾಗುತ್ತದೆ. ಚಿಪ್‌ನಲ್ಲಿ ನಮೂದಿಸಲಾದ ಕ್ರಮ ಸಂಖ್ಯೆಗಳನ್ನು ಬಾಹ್ಯವಾಗಿ ಸೆನ್ಸಿಂಗ್ ರೀಡರ್‌ನಿಂದ ಪಡೆಯಬಹುದು. ಮೈಕ್ರೋ ಚಿಪ್‌ನಿಂದ ಪ್ರಾಣಿಗಳಿಗೆ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
ಉರಗಗಳನ್ನು ಬಾಹ್ಯ ನೋಟದಿಂದ “ಗಂಡು ಹೆಣ್ಣು’ ಎಂದು ಗುರುತಿಸಲು ಕಷ್ಟ. ವೈಜ್ಞಾನಿಕವಾಗಿ ಅವುಗಳ ಲಿಂಗ ಭೇದವನ್ನು ಪತ್ತೆಹಚ್ಚಲು ಶೋಧ ಉಪಕರಣವನ್ನು ಉಪಯೋಗಿಸಲಾಗುತ್ತದೆ. ಅವುಗಳ ತೂಕ, ಉದ್ದ, ಅಳತೆಯನ್ನು ಈ ಮೂಲಕ ನಿಖರವಾಗಿ ದಾಖಲಿಸಲಾಗುತ್ತದೆ.
ಈ ಮಧ್ಯೆ, ಪಿಲಿಕುಳ ಮೃಗಾಲಯದ ಹುಲಿ, ಸಿಂಹ, ಚಿರತೆಗಳಿಗೆ ಮೈಕ್ರೋ ಚಿಪ್ ಅಳವಡಿಸುವ ಕಾರ್ಯ ಕೈಗೊಳ್ಳಲಾಗಿದೆ. ಅಪರೂಪದ ಜಾತಿಯ ಹೈನಾ, ತೋಳ, ಕಾಡು ನಾಯಿ, ಕರಡಿಗಳು ಅಲ್ಲದೆ “ನೈಲ್’, “ಘರಿಯಾಲ್’ ಲಿಂಗ ಪರೀಕ್ಷೆ ಹಾಗೂ ಗುರುತಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.