Advertisement

ಪಿಲಿ ಬತ್ತ್ಂಡ್‌ ಪಿಲಿ…ಬಲಿಪುಲೇ ಬಲಿಪುಲೇ…

06:30 AM May 05, 2018 | |

ಕಾಪು: ಭೂತಾರಾಧನೆಯಲ್ಲೇ ವಿಶಿಷ್ಟ ಆಚರಣೆಯಾದ ಕಾಪುವಿನ ಪಿಲಿಕೋಲ ಮೇ 5ರಂದು ನಡೆಯಲಿದೆ. ಈ ದ್ವೆ„ವಾರ್ಷಿಕ ಕೋಲಕ್ಕೆ ದಿನ ನಿಗದಿಯಿಂದ ಹಿಡಿದು, ಕೋಲ ನಡೆಯುವ ದಿನದ ವರೆಗೆ ಆಚರಣೆ ಪದ್ಧತಿಗಳು ಕುತೂಹಲಕಾರಿಯಾಗಿವೆ. 

Advertisement

ಪಿಲಿಕೋಲದ ನಂಬಿಕೆ
ಕಾರ್ಕಳದ ಅರಸನಾದ ಭೈರ ಸೂಡನ ಕಾಲದಲ್ಲಿ ಕಾಡು ಪ್ರಾಣಿಗಳ ಹಾವಳಿ ತೀವ್ರವಾಗುತ್ತದೆ. ಆಗ ಆತ ಬೇಟೆಯಾಡಿ ಎರಡು ಹುಲಿಗಳನ್ನು ಸೆರೆ ಹಿಡಿಯುತ್ತಾನೆ. ಬಳಿಕ ಅರಮನೆಯಲ್ಲಿ ನಿದ್ದೆ ಹೋಗುತ್ತಾನೆ. ಈ ವೇಳೆ ಕನಸಲ್ಲಿ ಬಂದ ಚಂಡಿಕಾ ದೇವಿ, ಅವುಗಳು ನನ್ನ ಮಾಯಾ ಹುಲಿಗಳು. ಅವುಗಳನ್ನು ಸತ್ಕರಿಸಿ ಬಡಗು ದಿಕ್ಕಿಗೆ ಗಂಗಾಸ್ನಾನ ಮಾಡಲು ತೆರಳುತ್ತಿರುವ ಸಾವಿರಮಾನಿ ದೈವಗಳ ಜತೆಗೆ ಕಳುಹಿಸಿ ಬಿಡು ಎಂದು ಅಪ್ಪಣೆ ನೀಡುತ್ತಾಳೆ.

ಅನಂತರ ರಾಜನ ಸತ್ಕಾರ ಮುಗಿಸಿ ಗಂಗಾಸ್ನಾನ ಮುಗಿಸಿ ಬರುವ ದೈವಗಳು, ಕಾಪುವಿನ ಲಕ್ಷ್ಮೀ ಜನಾರ್ದನ ಮತ್ತು ಮಾರಿಯಮ್ಮ ಸನ್ನಿಧಾನಕ್ಕೆ ಬಂದು ನೆಲೆಗೆ ಅವಕಾಶ ಕೇಳುತ್ತವೆ. ಬಳಿಕ ದೇವರ ಅಪ್ಪಣೆಯಂತೆ ಕಾಪು ಸಾವಿರ ಸೀಮೆಯಲ್ಲಿ ನೆಲೆಯಾಗುತ್ತವೆ. ಇವುಗಳ ಪೈಕಿ ಹುಲಿಚಂಡಿ, ತನ್ನಿಮಾನಿಗ ದೈವಗಳು ಮಾರಿಯಮ್ಮ ದೇವಿಯ ಬಲಭಾಗದ ಪಲ್ಲತ್ತಪಡು³ವಿನಲ್ಲಿ ನೆಲೆಯೂರಿದವು ಎನ್ನುವುದು ಐತಿಹ್ಯ.

ದ್ವೆ„ವಾರ್ಷಿಕ ಆಚರಣೆ 
ಉಡುಪಿ ಪರ್ಯಾಯ ವರ್ಷವೇ ಪಿಲಿಕೋಲ ನಡೆಯುಯತ್ತದೆ. ಪಿಲಿ ಕೋಲದ ಮುಖ್ಯ ಹೊಣೆಗಾರಿಕೆ ಕಾಪುವಿನ ಮಾರ ಗುರಿಕಾರ ವರ್ಗದವರದಾಗಿದೆ.

ವಿಭಿನ್ನ ಆಚರಣೆ
ಪಿಲಿಕೋಲದ ನರ್ತಕನನ್ನು ಕಾಪು ಹಳೇ ಮಾರಿಯಮ್ಮ ದೇವಿಯ ಸನ್ನಿಧಿ ಯಲ್ಲಿ ನಿರ್ಧರಿಸಲಾಗುತ್ತದೆ. ಅಲ್ಲಿ ಅಪ್ಪಣೆ ಬಳಿಕ ಸೀಮೆಯ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥಿಸಿ ಬರುವುದು ವಾಡಿಕೆ. ಅನಂತರ ಕೋಲದ ಹಿಂದಿನ ದಿನ ನರ್ತಕ ದೈವಸ್ಥಾನಕ್ಕೆ ಬಂದು ವೀಳ್ಯ ಪಡೆಯುತ್ತಾನೆ. 

Advertisement

ಕೋಲದ ದಿನದಂದು ಕೆರೆಯಲ್ಲಿ ಸ್ನಾನ ಮಾಡಿಸಿ ಬಟ್ಟೆ ಮುಚ್ಚಿ ಬಣ್ಣಗಾರಿಕೆಗೆ ಒಲಿಮದೆಯೊಳಗೆ ಕಳುಹಿಸಲಾಗುತ್ತದೆ. ಅಲ್ಲಿ ಹುಲಿ ಬಣ್ಣ ಬಳಿದು ಭೂತವು ಪಟೇಲರ ಅನುಮತಿ ಪಡೆದು ಸಿರಿ ಒಲಿಗಳಿಂದ  ಸಿಂಗರಿಸಿದ ಪಂಜರದಿಂದ ಹೊರ ಬರುತ್ತದೆ.

ಸಮಾಪನಕ್ಕೂ ಸಂಪ್ರದಾಯ
5 ಗಂಟೆಯ ನಿರಂತರ ಬೇಟೆ ಬಳಿಕ  ಹುಲಿಯು ಮಾರಿಯಮ್ಮ ದೇವಿಯ ಸಮ್ಮುಖ ತೆಂಗಿನ ಕಾಯಿ ಮತ್ತು ಕೋಳಿಯನ್ನು ಬಲಿ ಪಡೆದು ಬ್ರಹ್ಮರ ಗುಂಡಕ್ಕೆ ಸುತ್ತು ಹೊಡೆದು ಬಾಳೆ ಎಲೆಯ ಮೇಲೆ ಬಂದು ಮಲಗುತ್ತದೆ. ಮಾರ ಗುರಿಕಾರ ಹುಲಿಯ ಮೇಲೆ ನೀರು ತಳಿದು, ಹಗ್ಗ ಹಿಡಿದು ಕೊಂಡವರು ವೇಷಧಾರಿಯ ಮೈ ತಿಕ್ಕುತ್ತಾರೆ. ಇದರಿಂದ ಆವೇಶ ಇಳಿಯುತ್ತದೆ. ಅಲ್ಲಿಗೆ ಆಚರಣೆಯೂ ಸಮಾಪನಗೊಳ್ಳುತ್ತದೆ. 

ಹುಲಿ ಮುಟ್ಟಿದವರಿಗೆ ಕಂಟಕ?
ಪಂಜರದೊಳಗಿಂದ ಹೊರ ಬರುವ ಹುಲಿ ಭೂತವು ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಬಂದ ಬಳಿಕ, ಮಾರಿಗುಡಿಯ ಮುಂಭಾಗದಲ್ಲಿ ನೆಡಲಾಗುವ ಬಂಟ ಕಂಬವನ್ನೇರಿ ಜೀವಂತ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ಬೇಟೆಗಾಗಿ ಹೊರಡುವುದು ವಾಡಿಕೆ. ಪಿಲಿ ಕೋಲದ ಸಂದರ್ಭದಲ್ಲಿ ಮುಟ್ಟಲ್ಪಟ್ಟವರು ಮುಂದಿನ ಕೋಲದ ಒಳಗೆ ಸಾಯುತ್ತಾರೆ ಅಥವಾ ಕಷ್ಟಕ್ಕೆ ಸಿಲುಕುತ್ತಾರೆ ಎಂಬ ಪ್ರತೀತಿಯಿದೆ.  

ಹುಲಿಯ ಕೈಗೆ ಸಿಗುವುದನ್ನು ತಪ್ಪಿಸಿಕೊಳ್ಳಲು ಭಕ್ತರು ಓಡುತ್ತಾರೆ. ಹುಲಿ ಯಾರನ್ನೂ ಮುಟ್ಟ ದಿದ್ದಲ್ಲಿ  ನರ್ತಕನೇ ಸಾವಿಗೀಡಾಗುತ್ತಾನೆ ಎಂಬ ಪ್ರತೀತಿಯೂ ಇದೆ. ಆ ಕಾರಣದಿಂದ ಹುಲಿ ತನ್ನ ಬೇಟೆಯ ಅವಧಿಯಲ್ಲಿ ಯಾರನ್ನಾದರೂ ಮುಟ್ಟಿಯೇ ಮುಟ್ಟುತ್ತದೆ.

ಚಿತ್ರಗಳು: ಲಕ್ಷ್ಮಣ್‌ ಸುವರ್ಣ,ಕಾಪು

Advertisement

Udayavani is now on Telegram. Click here to join our channel and stay updated with the latest news.

Next