Advertisement
ಗುಂಡ್ಯದಲ್ಲಿರುವ ಪಿಲಿಕಜೆ ಗುಂಡ್ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ತನಕ ವ್ಯಾಸಂಗ ಮಾಡಿದ ಮಕ್ಕಳು ಮುಂದಿನ ಶಿಕ್ಷಣಕ್ಕಾಗಿ ದೂರದ ಸುಬ್ರಹ್ಮಣ್ಯಕ್ಕೆ 22 ಕಿ.ಮೀ. ದೂರ ಪ್ರಯಾಣಿಸುವ ಅನಿವಾರ್ಯ ಎದುರಾಗಿದೆ. ಆದುದರಿಂದ ಪಿಲಿಕಜೆ ಗುಂಡ್ಯ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಿ ಶಿಕ್ಷಕ-ವಿದ್ಯಾರ್ಥಿಗಳ ಅನು ಪಾತವನ್ನು ಪರಿಗಣಿಸದೆ ಅಗತ್ಯ ಶಿಕ್ಷಕರನ್ನು ನೀಡಿ ಪರಿಸರದ ಮಕ್ಕಳು ಅದೇ ಶಾಲೆಯಲ್ಲಿ 6 ಮತ್ತು 7ನೇ ತರಗತಿಯ ಶಿಕ್ಷಣ ಪಡೆಯುವಂತೆ ವ್ಯವಸ್ಥೆ ಕಲ್ಪಿಸಬೇಕೆನ್ನುವುದು ಸ್ಥಳೀಯ ಮಕ್ಕಳ ಪೋಷಕರ ಆಗ್ರಹವಾಗಿದೆ.
Related Articles
Advertisement
ಕೊಂಬಾರಿನ ಬೋಳ್ನಡ್ಕ, ಸಿರಿಬಾಗಿಲು ಗ್ರಾಮದ ಗಡಿ ಭಾಗವಾದ ಮಣಿಭಾಂಡ ಹಾಗೂ ಮುಗೇರಡ್ಕದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಗುಂಡ್ಯ ಭಾಗದ ಮಕ್ಕಳು ಆ ಶಾಲೆಗೆ ಹೋಗಬೇಕಿದ್ದರೆ ಅಲ್ಲಿಗೆ ಸಮರ್ಪಕ ವಾಹನದ ವ್ಯವಸ್ಥೆಗಳಿಲ್ಲ. ಗುಂಡ್ಯದ ತನಕ ನಡೆದು ಬಂದು ಅಲ್ಲಿಂದ ಬಸ್‌ನಲ್ಲಿ ಪ್ರಯಾಣಿಸಿ ಶಾಲೆ ತಲುಪಬೇಕಿದ್ದರೆ ಬಸ್ ಇಳಿದು ಸಾಕಷ್ಟು ದೂರ ನಡೆದು ಕ್ರಮಿಸಬೇಕಿದೆ. ಈ ಎಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿ ಗುಂಡ್ಯದಿಂದ ಬಸ್ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಮಕ್ಕಳು ಸುಬ್ರಹ್ಮಣ್ಯದ ಶಾಲೆಯನ್ನು ಅವಲಂಬಿಸಿದ್ದಾರೆ.
ಮಕ್ಕಳು ಹೆತ್ತವರಿಂದ ದೂರವಿದ್ದು ಉನ್ನತ ಶಿಕ್ಷಣ ಪಡೆಯುವುದು ಸಹಜ. ಆದರೆ ನಮ್ಮಲ್ಲಿನ ಮಕ್ಕಳು ಪ್ರಾಥಮಿಕ ಶಿಕ್ಷಣಕ್ಕೇ ಹಾಸ್ಟೆಲ್ ಅಥವಾ ಸಂಬಂಧಿಕರ ಮನೆಯನ್ನು ಆಶ್ರಯಿಸುವಂತಾಗಿದೆ. ಆದುದರಿಂದ ಪಿಲಿಕಜೆ ಗುಂಡ್ಯ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಿ ಸ್ಥಳೀಯ ಮಕ್ಕಳಿಗೆ ನೆರವಾಗಬೇಕು ಎನ್ನುವುದು ನಮ್ಮೆಲ್ಲರ ಬೇಡಿಕೆಯಾಗಿದೆ. –ದಾಮೋದರ ಗುಂಡ್ಯ,
ಯಾವುದೇ ಶಾಲೆಯನ್ನು ಮೇಲ್ದರ್ಜೆಗೇರಿಸಬೇಕಿದ್ದರೆ ಸರಕಾರದ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಮಕ್ಕಳ ಅನುಕೂಲಕ್ಕಾಗಿ ಇಲಾಖೆಯ ನಿಯಮಾನುಸಾರ ಪಿಲಿಕಜೆ ಗುಂಡ್ಯ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. –ಲೋಕೇಶ್ ಸಿ., ಕ್ಷೇತ್ರ ಶಿಕ್ಷಣಾಧಿಕಾರಿ
ನಾಗರಾಜ್ ಎನ್.ಕೆ.