ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸಂಖ್ಯೆ ಏರುಗತಿಯಲ್ಲಿರುವ ಹಿನ್ನೆಲೆಯಲ್ಲಿ ಸರಕಾರದ ನಿರ್ದೇಶನದಂತೆ ಜಿಲ್ಲಾಡಳಿತ ದೇವಸ್ಥಾನಗಳಲ್ಲಿ ದೇವರ ದರ್ಶನ ಹೊರತುಪಡಿಸಿ ಸೇವೆಗಳು ಹಾಗೂ ಅನ್ನಪ್ರಸಾದ, ವಸತಿ ನಿಷೇಧಿಸಿದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದರ್ಶನಕ್ಕೆ ಬಂದ ಭಕ್ತರು ರವಿವಾರ ರಾತ್ರಿ ರಸ್ತೆ ಬದಿಯಲ್ಲಿ, ಅಂಗಡಿ ಮುಂಗಟ್ಟುಗಳ ಜಗಲಿಯಲ್ಲಿ ನಿದ್ರಿಸಿ ರಾತ್ರಿ ಕಳೆದರು.
ರಾಜ್ಯದ 8 ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಸರಕಾರದ ಸೂಚನೆಯ ಬೆನ್ನಲ್ಲೇ ದ.ಕ. ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ವಿಧಿಸಿದೆ. ಜಿಲ್ಲೆಯ ಮೂರು ಪ್ರಸಿದ್ಧ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮತ್ತು ಕಟೀಲು ಕ್ಷೇತ್ರಗಳಲ್ಲಿ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ ದೇವರ ದರ್ಶನಕ್ಕೆ ಅವಕಾಶ ಇರುವುದು ಮತ್ತು ಬಸ್ ವ್ಯವಸ್ಥೆಯೂ ಇರುವುದರಿಂದ ಭಕ್ತರು ಮಾಮೂಲಾಗಿ ಬರುವಂತೆ ವಾರಾಂತ್ಯ ಮತ್ತು ಸೋಮವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಕ್ಷೇತ್ರದ ವತಿಯಿಂದ ಭಕ್ತರಿಗೆ ಯಾವುದನ್ನೂ ನಿರಾಕರಿಸುವ ಪ್ರಶ್ನೆಯಿಲ್ಲ. ಆದರೆ ಜಿಲ್ಲಾಡಳಿತದ ಕ್ರಮ ಅನುಸರಿಸಲೇ ಬೇಕಾಗಿದ್ದರಿಂದ ಕೇವಲ ದರ್ಶನಕ್ಕಷ್ಟೆ ಅವಕಾಶ ಕಲ್ಪಿಸಿದೆ. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಚೆಕ್‌ಪೋಸ್ಟ್‌ಗಳಲ್ಲೇ ಪ್ರವಾಸಿಗರನ್ನು ತಡೆಯುವುದೇ ಮೊದಲಾದ ಪರ್ಯಾಯ ಕ್ರಮಗಳನ್ನು ಅನುಸರಿಸದ ಕಾರಣ ಭಕ್ತರು ಬೀದಿ ಬದಿ ರಾತ್ರಿ ಕಳೆಯುವಂತಾಗಿದೆ.
ಉಜಿರೆಯಲ್ಲೆ ಹರಕೆ ಮಂಡೆ ಸಮರ್ಪಣೆ! :
ಕೋವಿಡ್ ನಿಯಮನುಸಾರ ಕ್ಷೇತ್ರದಲ್ಲಿ ಹರಕೆ ಮಂಡೆ ನೀಡಲು ನಿರ್ಬಂಧವಿದೆ. ಕ್ಷೇತ್ರದವರೆಗೆ ಬಂದು ಸಂಪ್ರದಾಯ ಪಾಲಿಸುವ ಮಂದಿ ಉಜಿರೆ ಪೇಟೆಯ ಸೆಲೂನ್‌ಗಳಲ್ಲೆ ಹರಕೆ ಮಂಡೆ ಒಪ್ಪಿಸಿ ಹೋಗಿದ್ದರಿಂದ ಉಜಿರೆ ಪೇಟೆಯಲ್ಲಿ ಬಹಳಷ್ಟು ಜನಸಂದಣಿ ಕಂಡುಬಂತು.