ಸಿಂಧನೂರು: ಇಂದು ದೇಶದಲ್ಲಿ ಇಲ್ಲದ ಧಾರ್ಮಿಕ ಭ್ರಮೆಗಳನ್ನು ತುಂಬುವ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸಹಬಾಳ್ವೆ, ಸೌಹಾರ್ದತೆ ಉಳಿಸಲು ಎಲ್ಲರೂ ಜಾಗೃತರಾಗಬೇಕಿದೆ ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ ಹೇಳಿದರು.
ನಗರದ ಎಪಿಎಂಸಿ ಯಾರ್ಡ್‌ನಲ್ಲಿ ದಲಿತ ಹಿಂದುಳಿದ, ಅಲ್ಪಸಂಖ್ಯಾತರ ಪ್ರಗತಿಪರರ ಒಕ್ಕೂಟದಿಂದ ಭಾನುವಾರ ಹಮ್ಮಿಕೊಂಡಿದ್ದ ಬಹುತ್ವ ಭಾರತೀಯರ ಭಾವೈಕ್ಯ ಸಮಾವೇಶ ದಲ್ಲಿ ಅವರು ಮಾತನಾಡಿದರು.
ಪ್ರಾಣಿ-ಬಲಿದಾನಗಳಿಂದ ಸ್ವಾತಂತ್ರ್ಯ ಪಡೆದುಕೊಳ್ಳಲಾಗಿದೆ. ಇಂತಹ ದೇಶದಲ್ಲಿ ಮತ್ತೆ ಅಶಾಂತಿ ಸೃಷ್ಟಿಸುವ ಕೆಲಸವಾಗುತ್ತಿದೆ. ಹಿಂದೂ ರಾಷ್ಟ್ರ ಕಟ್ಟುವವರನ್ನು ವಿರೋಧಿಸಬೇಕಿದೆ. ಪ್ಯಾಸಿಸಂ ಈ ದೇಶಕ್ಕೆ ಮಾರಕ ಎಂಬುದನ್ನು ತಿಳಿಸಿ ಹೇಳಬೇಕಿದೆ. ಧಾರ್ಮಿಕ ಅಲ್ಪಸಂಖ್ಯಾತರು ನೆಮ್ಮದಿಯಿಂದ ಬದುಕುವುದಕ್ಕೆ ಈ ನಾಡಿನಲ್ಲಿ ಅವಕಾಶವಿದೆ. ಅದಕ್ಕೆ ಕೊಳ್ಳಿ ಇಡುವ ಪ್ರಯತ್ನ ಒಳ್ಳೆಯದಲ್ಲ. 12ನೇ ಶತಮಾನದಲ್ಲಿ ಶರಣರು, ಸಂತರು ಈ ನಾಡಿನಲ್ಲಿ ಸೌಹಾರ್ದತೆಯನ್ನು ಎತ್ತಿಹಿಡಿದಿದ್ದಾರೆ. ಇದೀಗ ವರ್ಣಾಶ್ರಮವನ್ನು ಹೇರುವ, ದೇಶದ ಬಹುಸಂಸ್ಕೃತಿಯನ್ನು ನಾಶ ಮಾಡುವ ಶಕ್ತಿಗಳನ್ನು ಹತ್ತಿಕ್ಕಬೇಕಿದೆ ಎಂದರು.
ಸಾಂಸ್ಕೃತಿಕ ಪ್ರತಿರೋಧ: ಸಮಾವೇಶದ ಮುಂದುವರಿದ ಭಾಗವಾಗಿ ತಿಂಥಣಿ ಮೌನೇಶ್ವರದಲ್ಲಿ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮವನ್ನು 3 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಸೌಹಾರ್ದ ಮತ್ತು ದುಡಿಮೆಯ ಸಂಸ್ಕೃತಿಯನ್ನು ಸಾರುವುದು ನಮ್ಮ ಉದ್ದೇಶ ಎಂದರು.
ಬಸವಕಲ್ಯಾಣದ ಬಸವಸ್ವಾಮಿ ಮಹಾಪ್ರಭು, ಚಿಂತಕ ಶಿವಸುಂದರ್, ಒಕ್ಕೂಟದ ಪ್ರಧಾನ ಸಂಚಾಲಕರಾದ ಡಿ.ಎಚ್. ಪೂಜಾರ್, ಎಚ್.ಎನ್. ಬಡಿಗೇರ್, ನಾರಾಯಣ ಬೆಳಗುರ್ಕಿ, ಕೆ.ಷರೀಫಾ, ಖಾದರ್ ಸುಬಾನಿ, ಎಂ.ಗಂಗಾಧರ, ನಿಡಿಗೋಳ ಮಾನವಧರ್ಮ ಪೀಠದ ಸೂಪಿ ಶರಣ, ವೆಂಕೋಬ ನಾಯಕ ಸೇರಿದಂತೆ ಅನೇಕರು ಇದ್ದರು.