Advertisement
ಸಿದ್ಧನಹಳ್ಳಿ ಗ್ರಾಮದ ಪಕ್ಕದಲ್ಲಿ ಹರಿದು ಹೋಗುವ ಬಳ್ಳಾರಿ ನಾಲಾ ಇಡೀ ರೈತರ ಬದುಕನ್ನೇ ನುಂಗಿ ಹಾಕಿದೆ. ಜತೆಗೆ ರೈತರ ಹೊಲಗಳಿಗೂ ಕೊಳ್ಳೆ ಇಟ್ಟಿದ್ದು, ಎಲ್ಲವನ್ನೂ ನುಂಗಿ ನೀರು ಕುಡಿದಿದೆ. ಹಿಂದೆಂದೂ ಕಂಡು ಕೇಳರಿಯದಷ್ಟು ಬಳ್ಳಾರಿ ನಾಲಾದಲ್ಲಿ ನೀರು ಬಂದು ಸುತ್ತಲಿನ ಕೃಷಿ ಜಮೀನುಗಳನ್ನೇ ನುಂಗಿ ಹಾಕಿದೆ. ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಸಿದ್ಧನಹಳ್ಳಿ ಎಂಬ ಮುಳುಗಡೆ ಪ್ರದೇಶದ ಹೊಲಗಳು ಯಾವುದಕ್ಕೂ ಉಪಯೋಗಕ್ಕೆ ಬಾರದಂತಾಗಿವೆ.
Related Articles
Advertisement
ಕಲ್ಲು ಬೇರೆಡೆ ಸಾಗಿಸುವುದು ಕಷ್ಟ: ಆಗ ರೈತರು ಭತ್ತ, ಜೋಳ, ಗೋವಿನ ಜೋಳ, ತರಕಾರಿ ಬೆಳೆದಿದ್ದರು. ಆದರೆ ಈಗ ಹೊಲಗಳು ಕಲ್ಲಿನ ಪಾಲಾಗಿವೆ. ಮಣ್ಣೆಲ್ಲ ಕಿತ್ತು ಹೊಲಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳೂ ಬಿದ್ದಿವೆ. ಅದನ್ನು ಸಮತಟ್ಟು ಮಾಡುವುದು, ಕಲ್ಲುಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವುದು, ಮತ್ತೆ ಬೆಳೆ ಬೆಳೆಯುವುದು ಆಗದ ಮಾತು ಎನ್ನುತ್ತಾರೆ ರೈತರು.
ಮುಳುಗಡೆ ಪ್ರದೇಶ ಇದ್ದರೂ ಯಾವುದೇ ಸೌಲಭ್ಯವೂ ಇಲ್ಲ ಪರಿಹಾರವೂ ಇಲ್ಲ, ಪುನರ್ವಸತಿಯೂ ಕಲ್ಪಿಸಿಲ್ಲ. ಈ ಗ್ರಾಮವನ್ನು ಇನ್ನೂವರೆಗೆ ಸ್ಥಳಾಂತರ ಮಾಡದೇ, ಸೌಲಭ್ಯವನ್ನೂ ಕಲ್ಪಿಸಿಲ್ಲ. ಬಳ್ಳಾರಿ ನಾಲಾ ಅಣೆಕಟ್ಟು ಕಾಮಗಾರಿ ಆರಂಭಗೊಂಡರೂ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಈ ಅಧಿಕಾರಿಗಳಿಗೆ ಇಲ್ಲವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ತರಕಾರಿಯ ತವರೂರು ಎಂದೇ ಈ ಊರಿಗೆ ಕರೆಯಲಾಗುತ್ತಿದೆ. ಟೋಮೆಟೊ, ಕೋತಂಬರಿ,
ಭೇಂಡಿಕಾಯಿ, ಹಾಗಲಕಾಯಿ, ಚವಳಿಕಾಯಿ, ಮೆಣಸಿನಕಾಯಿ, ಹಿರೇಕಾಯಿ, ಸವತೆಕಾಯಿ, ಬದನೆಕಾಯಿ, ಸವರೆಕಾಯಿ, ಫ್ಲಾವರ್, ಎಲೆಕೂಸು(ಕ್ಯಾಬಿಜ್), ಬೀನ್ಸ್ ಸೇರಿದಂತೆ ಅನೇಕ ತರಕಾರಿ ಬೆಳೆಯಲಾಗುತ್ತದೆ. ಇಲ್ಲಿ ವಿವಿಧ ತರಹದ ತರಕಾರಿಗಳನ್ನು ಬೆಳೆದು ದಿನಾಲೂ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕಳುಹಿಸಲಾಗುತ್ತಿದೆ. ನೆರೆ ಬಂದು ಅಪ್ಪಳಿಸಿದಾಗಿನಿಂದ ತರಕಾರಿ ಹೋಗುತ್ತಿಲ್ಲ. ಕೃಷಿಯನ್ನೇ ನಂಬು ಬದುಕುತ್ತಿರುವ ಇಲ್ಲಿಯ ರೈತರು ಪ್ರವಾಹದ ಹೊಡೆತದಿಂದ ಹೊರ ಬಂದಿಲ್ಲ.
-ಭೈರೋಬಾ ಕಾಂಬಳೆ