ಬೆಂಗಳೂರು: ಮೂಡಬಿದಿರೆಯಲ್ಲಿರುವ ಪ್ರಾಚೀನ ಚೌಟರ ಅರಮನೆ ಸಮೀಪ ಮಾರುಕಟ್ಟೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ. ಈ ಸಂಬಂಧ ಪುಚುಮೊಗರು ಗ್ರಾಮದ ಜೇಸನ್ ಮಾರ್ಷಲ್ ನವಾರಸ್ ಅರ್ಜಿ ಸಲ್ಲಿಸಿದ್ದು, ಮೂಡಬಿದಿರೆಯಲ್ಲಿ ಪ್ರಾಚೀನ ಕಾಲದ ಚೌಟರ ಅರಮನೆಯಿದ್ದು, ಇದನ್ನು ಪುರಾತತ್ವ ಇಲಾಖೆ ಸಂರಕ್ಷಣ ಸ್ಮಾರಕ ಎಂದು ಘೋಷಿಸಿದೆ. ಇದೀಗ ನಗರಸಭೆ ನಿಯಮಬಾಹಿರವಾಗಿ ಅರಮನೆಗೆ 200 ಮೀಟರ್ ದೂರದಲ್ಲಿರುವ ಹಳೆಯ ಮಾರುಕಟ್ಟೆ ಕಟ್ಟಡ ಕೆಡವಿ, ಹೊಸ ಕಟ್ಟಡ ನಿರ್ಮಿಸಲು ಮುಂದಾಗಿದೆ. ಇದರಿಂದ ಸಂರಕ್ಷಿತ ಸ್ಮಾರಕ ಎಂದೆನಿಸಿರುವ ಚೌಟರ ಅರಮನೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಹೊಸ ಕಟ್ಟಡ ನಿರ್ಮಾಣ ಮಾಡದಂತೆ ರಾಜ್ಯ ಸರಕಾರ, ನಗರಸಭೆಗೆ ನಿರ್ದೇಶಿಸುವಂತೆ ಕೋರಲಾಗಿತ್ತು.
Advertisement
ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಪ್ರತಿವಾದಿಗಳಾದ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ, ಕೇಂದ್ರ ಪುರಾತತ್ವ ಸರ್ವೇಕ್ಷಣಾಲಯ, ಕೇಂದ್ರದ ರಸ್ತೆ-ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ, ರಾ.ಹೆ. ಪ್ರಾಧಿಕಾರ, ಮೂಡಬಿದಿರೆ ನಗರಸಭೆಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.