Advertisement

ಕೊಡಗು: ಹಂದಿ ಜ್ವರ ಪತ್ತೆ; ವಧೆಗೆ ಸೂಚನೆ

12:46 AM Oct 26, 2022 | Team Udayavani |

ಮಡಿಕೇರಿ: ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ಹಂದಿ ಸಾಕಾಣಿಕೆ ಕೇಂದ್ರದ ಹಂದಿಗಳಲ್ಲಿ ಆಫ್ರಿಕನ್‌ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಿದೆ.

Advertisement

ಈ ಹಂದಿ ಸಾಕಾಣಿಕ ಕೇಂದ್ರದ 1 ಕಿ.ಮೀ. ವ್ಯಾಪ್ತಿಯನ್ನು ರೋಗ ಪೀಡಿತ ವಲಯ ಮತ್ತು 10 ಕಿ.ಮೀ. ವ್ಯಾಪ್ತಿಯನ್ನು ಜಾಗೃತ ವಲಯವೆಂದು ಘೋಷಿಸಲಾಗಿದೆ. ಸೋಂಕಿಗೆ ತುತ್ತಾಗಿರುವ ಹಂದಿಗಳನ್ನು ವಧಿಸಿ ವೈಜ್ಞಾನಿಕ ರೂಪದಲ್ಲಿ ಸಂಸ್ಕಾರ ಮಾಡಬೇಕೆಂದು ಆದೇಶಿಸಲಾಗಿದೆ. ರೋಗ ಪಸರಿಸದಂತೆ ಮುಂಜಾಗ್ರತೆ ಕ್ರಮವಾಗಿ ರೋಗ ಪೀಡಿತ ಹಂದಿ ಫಾರಂನಿಂದ 1 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಎಲ್ಲ ಹಂದಿ ಸಾಕಣೆ ಕೇಂದ್ರಗಳನ್ನು ಮುಚ್ಚುವಂತೆ ಮತ್ತು ಅಲ್ಲಿರುವ ಎಲ್ಲ ಹಂದಿಗಳನ್ನು ನಿಯಮಾನುಸಾರ ವಧಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಸೋಂಕು ಕಂಡುಬಂದ ಹಂದಿ ಫಾರಂನ್ನು ಶುಚಿಗೊಳಿಸಿ, ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಬೇಕು. ಈ ಪ್ರದೇಶದ ಬಳಿ ವಾಹನ ಮತ್ತು ಜನರ ಸಂಚಾರವನ್ನು ನಿರ್ಬಂಧಿಸಬೇಕೆಂದು ಜಿಲ್ಲಾ ದಂಡಾಧಿಕಾರಿಗಳು ಆದೇಶಿಸಿದ್ದಾರೆ.

ಮಾರಾಟ ನಿರ್ಬಂಧ
ರೋಗ ಪೀಡಿತ ಪ್ರದೇಶದಿಂದ ತಂದ ಜೀವಂತ ಹಂದಿಗಳ ಮಾರಾಟ, ಮಾಂಸದ ಮಾರಾಟ ನಿಷೇಧಿಸಲಾಗಿದೆ. ರೋಗ ಪೀಡಿತ ಹಂದಿ ಫಾರಂ ನಿಂದ 10 ಕಿ.ಮೀ. ಒಳಗಿನ ಎಲ್ಲ ಹಂದಿ ಸಾಕಣೆದಾರರು ಹೊಸದಾಗಿ ಹಂದಿಗಳನ್ನು ಬೇರೆ ಕಡೆ ಯಿಂದ ಕೊಂಡು ತರಬಾರದು, ಹಂದಿ ಗಳ ಮತ್ತು ಹಂದಿ ಸಾಕಣೆ ಕೇಂದ್ರ ಗಳಲ್ಲಿನ ಕೆಲಸಗಾರರ ಸಂಚಾರವನ್ನು ನಿಯಂತ್ರಿಸಬೇಕು, ಹಂದಿಗಳಿಗೆ ಹೊಟೇಲ್‌, ಹಾಸ್ಟೆಲ್‌ಗ‌ಳಲ್ಲಿ ಮಿಕ್ಕಿದ ಆಹಾರವನ್ನು ಸಂಗ್ರಹಿಸಿ ತಿನ್ನಿಸು ವವರು ಕಡ್ಡಾಯವಾಗಿ ಅಂತಹ ಆಹಾರ ಪದಾರ್ಥವನ್ನು ಕನಿಷ್ಟ 20 ನಿಮಿಷಗಳ ಕಾಲ ಬೇಯಿಸಿ ಕೊಡಬೇಕು. ಸಂದರ್ಶಕರಿಗೆ ಹಂದಿ ಫಾರಂ ಒಳಗೆ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ.
ವಿವಿಧ ಇಲಾಖೆಗಳ ಅಧಿಕಾರಿಗಳು ನಿಗಾ ವಹಿಸಿ ಪಶುಸಂಗೋಪನ ಇಲಾಖೆ ಅಧಿಕಾರಿಗಳಿಗೆ ಸಹಕಾರ ನೀಡಿ ಹಂದಿ ಜ್ವರದ ಹತೋಟಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ದಂಡಾಧಿಕಾರಿಗಳು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next