ಶಹಾಬಾದ: ನಗರದಲ್ಲಿ ಹಂದಿ, ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಹಂದಿಗಳು ಮತ್ತು ನಾಯಿಗಳ ಸಂತತಿ ಹೆಚ್ಚಾಗಿರುವುದರಿಂದ ಸದ್ಯ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡೇ ಹೋಗುವ ಪರಿಸ್ಥಿತಿಯಿದೆ.
ಕೆಲಸ ಮುಗಿಸಿ ರಾತ್ರಿ ಮನೆಗೆ ಬರುವವರಿಗೆ ಕಳ್ಳರಿಗಿಂತ ನಾಯಿಗಳದ್ದೇ ಭಯ ಹೆಚ್ಚಾಗಿದೆ. ಕಸದ ತೊಟ್ಟಿಯಲ್ಲಿ ಗಲೀಜು ತಿನ್ನಲು ಬೆಳಗ್ಗೆಯೇ ಹಂದಿಗಳು ಲಗ್ಗೆ ಹಾಕಿದರೆ, ಅವುಗಳನ್ನು ಹಿಮ್ಮೆಟ್ಟಿಸಲು ನಾಯಿಗಳು ಬೊಗಳುತ್ತವೆ. ನಗರದ ಮುಖ್ಯ ರಸ್ತೆಗಳಲ್ಲಿಯ ಮನೆಯೊಳಗೆ ಹಂದಿಗಳು, ಬೀದಿ ನಾಯಿಗಳು ರಾಜಾರೋಷವಾಗಿ ನುಗ್ಗುತ್ತಿವೆ. ಈ ಹಿಂದೆ ನಾಯಿಗಳ ಹಿಂಡು ಬಾಲಕರಿಗೆ ಕಚ್ಚಿದ ಅನೇಕ ಉದಾಹರಣೆಗಳು ಇವೆ. ಹಂದಿಗಳ ಕಾಟದಿಂದ ವೃದ್ಧ ಮಹಿಳೆಯೊಬ್ಬರು ಘಾಸಿಯಾಗಿದ್ದರೂ ಕೇಳುವವರೇ ಇಲ್ಲದಂತಾಗಿದೆ.
ನಗರದ ಆರೋಗ್ಯ ನಿರೀಕ್ಷರ ಕಚೇರಿ ಮುಂಭಾಗದಲ್ಲಿನ ತರಕಾರಿ ಮಾರುಕಟ್ಟೆ ಹತ್ತಿರ ನಗರಸಭೆ ಮಳಿಗೆ ಹಂದಿಗಳ ಪಾಲಿಗೆ ಸ್ವರ್ಗವಾದಂತಾಗಿದೆ. ಇಲ್ಲಿನ ತ್ಯಾಜ್ಯಕ್ಕೆ ಸದಾಕಾಲ ಮುತ್ತಿಗೆ ಹಾಕಿಕೊಂಡೇ ಇರುತ್ತವೆ. ನಗರಸಭೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಬೀದಿ ನಾಯಿ, ಹಂದಿಗಳ ಕಾಟ ಹೆಚ್ಚಾದಾಗಲೊಮ್ಮೆ ಕುಂಭಕರ್ಣ ನಿದ್ರೆಯಿಂದ ಎಚ್ಚರಗೊಂಡಂತೆ ತಾತ್ಕಾಲಿಕ ಕಾರ್ಯವೆಸಗುವ ನಗರಸಭೆ ಅಧಿಕಾರಿಗಳು ಕೆಲ ದಿನಗಳ ನಂತರ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ಇರುತ್ತಾರೆ. ಇನ್ನಾದರೂ ಗಮನಹರಿಸುವರೇ ಕಾದು ನೋಡಬೇಕಿದೆ.
ನಗರದ ವಾರ್ಡ್ ನಂ.17ರಲ್ಲಿ ಸಾಕಷ್ಟು ಹಂದಿಗಳು ಮನೆಯೊಳಗೂ ನುಗ್ಗುತ್ತಿವೆ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಳೆದು ರಸ್ತೆಯ ತುಂಬಾ ಹರಡುತ್ತಿವೆ. ಹಂದಿಗಳನ್ನು ಹಿಡಿಯಲು ನಾಯಿಗಳ ದಂಡೇ ಬರುತ್ತಿವೆ. ರಕ್ತದ ರುಚಿ ಕಂಡ ನಾಯಿಗಳು ಹಂದಿಗಳ ಮೇಲೆ ಎರಗುತ್ತಿವೆ. ಇದರಿಂದ ಮಕ್ಕಳನ್ನು ಹೊರಗೆ ಕಳಿಸದಂತಹ ಪರಿಸ್ಥಿತಿ ಇದೆ. ಅಲ್ಲದೇ ಮುಖ್ಯ ರಸ್ತೆಗಳಲ್ಲಿ ನಾಯಿಗಳ ಉಪಟಳ ಹೆಚ್ಚಾಗಿದೆ. ಆದ್ದರಿಂದ ಕೂಡಲೇ ಹಂದಿ-ನಾಯಿಗಳ ಕಾಟ ತಪ್ಪಿಸಿ.
-ನಾಗಣ್ಣ ರಾಂಪೂರೆ, ವಾರ್ಡ್ ನಿವಾಸಿ.