Advertisement

ಶಿರಾಳಕೊಪ್ಪ ಬಸ್‌ ನಿಲ್ದಾಣದಲ್ಲಿ ಹಂದಿ- ನಾಯಿ ಕಾಟ!

05:42 PM Jul 23, 2018 | |

ಶಿರಾಳಕೊಪ್ಪ: ಸರ್ಕಾರ ಕೋಟ್ಯಂತರ ರೂ. ವೆಚ್ಚದಲ್ಲಿ ಸುಂದರವಾದ ಬಸ್‌ ನಿಲ್ದಾಣವನ್ನು ಪ್ರಯಾಣಿಕರಿಗೆಂದು ಕಟ್ಟಿಸಲಾಗುತ್ತದೆ. ಆದರೆ ಇಲ್ಲಿನ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗಿಂತ ಹೆಚ್ಚಾಗಿ ಹಂದಿ, ನಾಯಿ ಮತ್ತು ದನಗಳ ಕಾಟ ಹೆಚ್ಚಾಗಿ ಪ್ರಯಾಣಿಕರಿಗೆ ಮತ್ತು ವ್ಯಾಪಾರಿಗಳಿಗೆ ತೀವ್ರ ತಲೆನೋವಾಗಿ ಪರಿಣಿಮಿಸಿದೆ.

Advertisement

ದಿನದ 24 ಗಂಟೆ ಹಂದಿ- ನಾಯಿಗಳು ಬಸ್‌ ನಿಲ್ದಾಣದಲ್ಲಿ ಇರುತ್ತವೆ. ಆದರೆ ಸಂಜೆಯಾಗುತ್ತಿದ್ದಂತೆ ತಂಡೋಪ ತಂಡವಾಗಿ ಹಂದಿ, ನಾಯಿ,ದನಗಳು ಬಸ್‌ ನಿಲ್ದಾಣದೊಳಗೆ ಆಗಮಿಸಿ ಪ್ರಯಾಣಿಕರಿಗೆ ತೀವ್ರ ಕಿರಿಕಿರಿ ಮಾಡುವುದರ ಜೊತೆಗೆ ಅಂಗಡಿಗಳ ಮೇಲೆ ದಾಳಿ ಮಾಡುತ್ತವೆ.
 
ಬಸ್‌ ನಿಲ್ದಾಣದಲ್ಲಿ ಬಸ್‌ಗಳು ಬಂದು ನಿಂತ ತಕ್ಷಣ ಹಂದಿಗಳು ಬಸ್‌ ಕೆಳಗಡೆ ಮಲಗಿಕೊಂಡು ಬಸ್‌ ಸಂಚಾರಕ್ಕೆ ತೀವ್ರ ಅಡತಡೆ ಉಂಟು ಮಾಡುತ್ತಿವೆ. ಪ್ರಯಾಣಿಕರು ತಮ್ಮ ಬ್ಯಾಗ್‌ಗಳನ್ನು ಇಟು ಸ್ವಲ್ಪ ಮೈಮರೆತರೆ ಬ್ಯಾಗ್‌ಗಳನ್ನೂ ಎಳೆದುಕೊಂಡು ಹೋಗುತ್ತವೆ. ಅಂಗಡಿ ಮಾಲೀಕರು ವ್ಯಾಪಾರ ಬಿಟ್ಟು ಕೋಲು ಹಿಡಿದು ಹಂದಿ, ನಾಯಿ ಮತ್ತು ದನಗಳನ್ನು ಕಾಯುವುದೇ ದೊಡ್ಡ ಕೆಲಸವಾಗಿ ಪರಿಣಮಿಸಿದೆ.
 
ವ್ಯಾಪಾರಿಗಳು ಸ್ವಲ್ಪ ಯಾಮಾರಿದರೂ ಹಂದಿ- ನಾಯಿಗಳು ಒಳನುಗ್ಗುತ್ತವೆ. ದನಗಳು ಬಾಯಿ ಹಾಕಿ ಸಿಕ್ಕಿದ್ದನ್ನು ಎಳೆದು ಹಾಳು ಮಾಡುವುದರ ಜೊತೆಗೆ ಕೆಲವು ಬಾರಿ ಬಾಟಲಿಗಳನ್ನು ಕೆಡವಿ ವ್ಯಾಪಾರಿಗಳಿಗೆ ನಷ್ಟ ಉಂಟು ಮಾಡುತ್ತಿವೆ. ಜೊತೆಗೆ ಅಂಗಡಿಗಳ ಮುಂದೆ ಮಲಮೂತ್ರ ವಿಸರ್ಜನೆ ಮಾಡಿ ದುರ್ವಾಸನೆ ಉಂಟು ಮಾಡಿ ಗ್ರಾಹಕರು ಅಂಗಡಿಗಳಿಗೆ ಬರಲು ಅಸಹ್ಯ ಪಟ್ಟುಕೊಳ್ಳುತ್ತಾರೆ. ಬಸ್‌ ನಿಲ್ದಾಣದಲ್ಲಿ ಕುಳಿತಂತಹ ಪ್ರಯಾಣಿಕರು ಮತ್ತು ನಾಗರಿಕರು ಪಪಂಗೆ ಹಿಡಿಶಾಪ ಹಾಕುತ್ತಾರೆ.
 
ಬಸ್‌ ನಿಲ್ದಾಣದ ಅಂಗಡಿ ಮಾಲಿಕ ನೂರುಲ್ಲಾ ಈ ಕುರಿತು ಮಾತನಾಡಿ, ಬಸ್‌ ನಿಲ್ದಾಣದಲ್ಲಿ ದುಬಾರಿಯಾದ 10 ಸಾವಿರಕ್ಕೂ ಹೆಚ್ಚು ಬಾಡಿಗೆ ಕಟ್ಟುತ್ತಿರುವ ನಾವು ವ್ಯಾಪಾರ ಮಾಡಿ ಬಾಡಿಗೆ ಕಟ್ಟುವುದೇ ಕಷ್ಟವಾಗಿದೆ. ಈ ಮಧ್ಯೆ ನಾಯಿ, ಹಂದಿ, ದನಗಳ ಕಾಟದಿಂದ ನಮ್ಮ ವ್ಯಾಪಾರಕ್ಕೆ ತೀವ್ರವಾಗಿ ಹಿನ್ನಡೆ ಆಗುತ್ತಿದ್ದು ಪಪಂ ಗಮನಕ್ಕೆ ಬಂದರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು. 

ಇನ್ನೊಬ್ಬ ಅಂಗಡಿ ಮಾಲೀಕ ಶಿವಕುಮಾರ ಮಾತನಾಡಿ, ದಿನ ನಿತ್ಯ ವ್ಯಾಪಾರ ಮಾಡಿ ಆಯಾಸ ಪಡುವ ನಾವು ಹಂದಿ, ನಾಯಿ,ದನಗಳ ಕಾಟದಿಂದ ರೋಸಿ ಹೋಗಿದ್ದೇವೆ. ನಮ್ಮ ಆರೋಗ್ಯದ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಾಗೆಯೇ ಬಸ್‌ ನಿಲ್ದಾಣದಲ್ಲಿ ಹಾಕಿರುವ ಕುಡಿಯುವ ನೀರಿನ ಟ್ಯಾಂಕ್‌ ಸೋರುತ್ತಿದ್ದು ಸುತ್ತಮುತ್ತಲಿನ ಅಂಗಡಿಗಳಿಗೆ ನೀರು ನುಗ್ಗುತ್ತಿದೆ. ಅಂಗಡಿಯಲ್ಲಿ ಕೆಳಗಡೆ ಇಟ್ಟ ಎಲ್ಲಾ ವಸ್ತುಗಳು ಹಾಳಾಗುತ್ತಿವೆ ಎಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. 

ಪ್ರತಿದಿನ ಪ್ರಯಾಣಿಸುವ ಉದ್ಯೋಗಿ ಎಸ್‌. ರಮೇಶ ಮಾತನಾಡಿ, ಬಸ್‌ ನಿಲ್ದಾಣದಲ್ಲಿ ಪಪಂ ಸ್ವತ್ಛತೆ ಬಗ್ಗೆ ಗಮನ ಹರಿಸಬೇಕಿದೆ. ಬಸ್‌ ನಿಲ್ದಾಣದಲ್ಲಿ ಕಸ ಮತ್ತು ಎಲೆ ಅಡಕೆ ಉಗಿಯುವ ತೊಟ್ಟಿಗಳು ಗಬ್ಬೆದ್ದು ನಾರುತ್ತಿವೆ. ಪಪಂ ಕಾರ್ಯವೈಖರಿ ಕುರಿತು ಗಮನ ಹರಿಸಿ ಸ್ವತ್ಛತೆ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಂಡು ಈ ಸಮಸ್ಯೆ ಬಗೆಹರಿಸುವಂತಾಗಲಿ ಎಂದಿದ್ದಾರೆ.
 
ಬಸ್‌ ನಿಲ್ದಾಣ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಸುರೇಶ ಸ್ವಾಮಿ ಮಾತನಾಡಿ, ಈ ಸಮಸ್ಯೆಗಳು ಒಂದು ದಿನದ ಮಾತಲ್ಲ. ದಿನ ನಿತ್ಯ ವ್ಯಾಪಾರ ಮಾಡುವ ನಮಗೆ ತೊಂದರೆಯಾಗುತ್ತಿದ್ದು ಪಪಂ ಮುಖ್ಯಾಧಿಕಾರಿ ತಕ್ಷಣ ಗಮನ ಹರಿಸಬೇಕು ಎಂದು ವಿನಂತಿಸಿದ್ದಾರೆ.

„ಸಂತೋಷ ಕುಲಕರ್ಣಿ

Advertisement
Advertisement

Udayavani is now on Telegram. Click here to join our channel and stay updated with the latest news.

Next