ಲಂಡನ್: ಸುಮಾರು 13.5 ಕಿಲೋ ತೂಕದ, ಚಂದ್ರನ ಶಿಲೆಯ ತುಣುಕು ಇದೀಗ 18.74 ಕೋಟಿ ರೂ.ಗೆ ಹರಾಜಾಗಿದೆ. ಭೂಮಿ ಮೇಲೆ ಲಭ್ಯವಿರುವ 5ನೇ ಅತಿದೊಡ್ಡ ಚಂದ್ರಶಿಲೆ ಇದಾಗಿದೆ.
ಪ್ರಬಲ ಉಲ್ಕೆಯೊಂದು ಚಂದ್ರನ ಮೇಲ್ಮೈಗೆ ಅಪ್ಪಳಿಸಿದ ಪರಿಣಾಮವಾಗಿ ಈ ಶಿಲೆ, ಕೆಲ ವರ್ಷಗಳ ಹಿಂದೆ ಭೂಮಿಗೆ ಬಿದ್ದಿರಬಹುದು ಎಂದು ಊಹಿಸಲಾಗಿದೆ.
ಸಹರಾ ಮರುಭೂಮಿಯಲ್ಲಿ ಪತ್ತೆಯಾಗಿದ್ದ ಈ ಶಿಲೆಯನ್ನು ಅನಾಮಿಕ ವ್ಯಕ್ತಿಯೊಬ್ಬ, ಬ್ರಿಟನ್ನಿನ ಪ್ರಸಿದ್ಧ ಹರಾಜು ಸಂಸ್ಥೆ ಕ್ರಿಸ್ಟಿಗೆ ಒಪ್ಪಿಸಿದ್ದ. ಈಗ ಇದು ಬೃಹತ್ ಮೊತ್ತಕ್ಕೆ ಹರಾಜುಗೊಂಡು ಖಾಸಗಿ ಸಂಸ್ಥೆಯೊಂದರ ಪಾಲಾಗಿದೆ.
ಚಂದ್ರನ ಶಿಲೆಗೆ ಹೋಲಿಕೆ: 1970ರ ಸುಮಾರಿನಲ್ಲಿ ಅಮೆರಿಕದ ಅಪೊಲೊ ನೌಕೆಯಲ್ಲಿ ಚಂದ್ರಯಾನ ಕೈಗೊಂಡ ವಿಜ್ಞಾನಿಗಳು, ತಮ್ಮೊಂದಿಗೆ 400 ಕಿಲೋ ತೂಕದ ಚಂದ್ರಶಿಲೆಯನ್ನು ತಂದಿದ್ದರು. ಕ್ರಿಸ್ಟಿ ಸಂಸ್ಥೆಯು ತನಗೆ ಸಿಕ್ಕ ಈ ಶಿಲೆಯನ್ನು, ಅಪೊಲೊ ತಂದ ಶಿಲೆಯೊಂದಿಗೆ ಹೋಲಿಸಿ ಪರೀಕ್ಷಿಸಿದಾಗ, ಇದು ಕೂಡ ಚಂದ್ರನ ಶಿಲೆ ಎಂಬ ಸಂಗತಿ ವಿಜ್ಞಾನಿಗಳಿಗೆ ದಟ್ಟವಾಯಿತು.
ಫುಟ್ಬಾಲ್‌ಗಿಂತ ತುಸು ಕಡಿಮೆ ಗಾತ್ರದ, ಮನುಷ್ಯನ ತಲೆಗಿಂತ ತುಸು ದೊಡ್ಡದಿರುವ ಈ ಶಿಲೆ, 4.5 ಬಿಲಿಯನ್ ವರ್ಷಗಳಷ್ಟು ಹಿಂದಿನದ್ದು ಎಂದು ಅಂದಾಜಿಸಲಾಗಿದೆ. ಲಭ್ಯವಿರುವ ಮಾಹಿತಿಯಂತೆ, ಒಟ್ಟಾರೆ ಭೂಮಿ ಮೇಲೆ 650 ಕಿಲೋ ತೂಕದ ಚಂದ್ರನ ಶಿಲೆಗಳು ಇವೆ.