Advertisement

ಒಮ್ಮೆ ನನ್ನ ಅಪ್ಪಿಕೊಳ್ಳಿ ಎಂದು ಪೀಡಿಸುತ್ತಿದ್ದವ ಸೆರೆ

11:48 AM Jan 12, 2017 | |

ಬೆಂಗಳೂರು: ವೈಯಾಲಿಕಾವಲ್‌ ಹಾಗೂ ಮಲ್ಲೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಗಳಲ್ಲಿ ರಸ್ತೆಯಲ್ಲಿ ದಾರಿಹೋಕ ಯುವತಿಯರಿಗೆ “ತನ್ನನ್ನು ಒಮ್ಮೆ ಅಪ್ಪಿಕೊಳ್ಳುವಂತೆ’ ಪೀಡಿಸುತ್ತಿದ್ದ ಪುಂಡ ಯುವಕ ಬುಧವಾರ ಮುಂಜಾನೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

Advertisement

ಮುನೇಶ್ವರ ಬ್ಲಾಕ್‌ ನಿವಾಸಿ ಮಣಿಕಂಠನ್‌ (20) ಬಂಧಿತ ಆರೋಪಿ. ವೈಯಾಲಿಕಾವಲ್‌ 13ನೇ ಅಡ್ಡರಸ್ತೆ ಹಾಗೂ ಮಲ್ಲೇಶ್ವರ ಠಾಣೆ ವ್ಯಾಪ್ತಿಯ ಈಜುಕೊಳ ಬಳಿ ಮಂಗಳವಾರ ಮಧ್ಯಾಹ್ನ ಪ್ರೌಢಶಾಲಾ ವಿದ್ಯಾರ್ಥಿನಿಯರು ಹಾಗೂ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಗಳ ಜತೆ ಅನುಚಿತವಾಗಿ ವರ್ತಿಸಿ ತಪ್ಪಿಸಿಕೊಂಡಿದ್ದ ಮಣಿಕಂಠನ್‌ ಬುಧವಾರ ಮುಂಜಾನೆ 3 ಗಂಟೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಗಾಂಜಾ ಮತ್ತಿನಲ್ಲಿ ಯುವತಿಯರ ಜತೆ ಅನುಚಿತವಾಗಿ ವರ್ತಿಸಿದ್ದಾಗಿ ಆತ ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಗೂಸ ತಿಂದು ಪರಾರಿ: ರಸ್ತೆಯಲ್ಲಿ ಅಡ್ಡಾಡುವ ಯುವತಿಯರಿಗೆ “ನಿಮಗೆ ಅಭ್ಯಂತರವಿಲ್ಲವೆಂದರೆ ಒಮ್ಮೆ ನನ್ನ ಅಪ್ಪಿಕೊಳ್ಳುತ್ತೀರಾ?’ ಎಂದು ಮಣಿಕಂಠನ್‌ ಪೀಡಿಸುತ್ತಿದ್ದ. ಮಂಗಳವಾರ ಮಧ್ಯಾಹ್ನ ಈಜುಕೊಳ ಸಮೀಪ ನಡೆದು ಹೋಗುತ್ತಿದ್ದ 20 ವರ್ಷದ ಯುವತಿಗೆ ಇದೇ ರೀತಿ ಕೇಳಿದಾಗ ಆಕೆ “ನಾನ್‌ಸೆನ್ಸ್‌’ ಎಂದು ಬೈದು ಕಳುಹಿಸಿದ್ದರು. ಬಳಿಕ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಯುವಕನೊಬ್ಬನ ಪುಂಡಾಟಿಕೆ ಬಗ್ಗೆ ಮಾಹಿತಿ ನೀಡಿದ್ದರು.

ತಕ್ಷಣ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ವೈಯಾಲಿಕಾವಲ್‌ ಪೊಲೀಸರು ಆರೋಪಿಗೆ ಬಲೆ ಬೀಸಿದ್ದರು. ಇದರ ಮಧ್ಯೆ ಮಧ್ಯಾಹ್ನ ವೈಯಾಲಿಕಾವಲ್‌ 13ನೇ ಅಡ್ಡರಸ್ತೆಗೆ ಸ್ಕೂಟರ್‌ನಲ್ಲಿ ಬಂದ ಮಣಿಕಂಠನ್‌ಗೆ ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರ ಗುಂಪು ಎದುರಾಗಿದ್ದು, ಅವರೊಂದಿಗೂ ಆತ ಅನುಚಿತವಾಗಿ ವರ್ತಿಸಿದ್ದ. ವಿದ್ಯಾರ್ಥಿನಿಯರು ತಿರುಗಿ ಬಿದ್ದಿದರಿಂದ ತಣ್ಣಗಾದ ಆತ ಅಲ್ಲಿಂದ ತೆರಳಿದ್ದ.

ಅದೇ ರಸ್ತೆಯ ಕೊನೆಯಲ್ಲಿ ಗುಂಪಾಗಿದ್ದ ವಿದ್ಯಾರ್ಥಿನಿಯರು ಚದುರುತ್ತಿದ್ದಂತೆ ಆ ಪೈಕಿ ಒಬ್ಬಳನ್ನು ತನ್ನ ಸ್ಕೂಟರ್‌ನಲ್ಲಿ ಹಿಂಬಾಲಿಸಿದ ಮಣಿಕಂಠನ್‌, “ನನ್ನನ್ನು ಒಮ್ಮೆ ಅಪ್ಪಿಕೋ’ ಎಂದು ಹೇಳಿದ್ದ. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿ ರಕ್ಷಣೆಗಾಗಿ ಪಕ್ಕದವಲ್ಲೇ ಇದ್ದ ಮನೆಗೆ ನುಗ್ಗಿದ್ದಳು.

Advertisement

ಅಷ್ಟರಲ್ಲಿ ಈ ಮಾಹಿತಿ ತಿಳಿದು ಸ್ಥಳಕ್ಕೆ ಜಮಾಯಿಸಿದ ಸುತ್ತಲಿನ ನಿವಾಸಿಗಳು ಮಣಿಕಂಠನ್‌ನನ್ನು ಹಿಡಿದು ಚೆನ್ನಾಗಿ ಥಳಿಸಿದ್ದರು. ಆ ಸಂದರ್ಭದಲ್ಲಿ ಸ್ಕೂಟರ್‌ಅನ್ನು ಅಲ್ಲೇ ಬಿಟ್ಟು ಮಣಿಕಂಠನ್‌ ತಪ್ಪಿಸಿಕೊಂಡಿದ್ದ. ಆತ ಬಿಟ್ಟುಹೋಗಿದ್ದ ಸ್ಕೂಟರ್‌ನ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ. 

ಅಪ್ರಾಪ್ತ ವಯಸ್ಸಿನಲ್ಲೇ ಪುಂಡಾಟ: ಪಿಯುಸಿಗೆ ವ್ಯಾಸಂಗ ಮೊಟುಕುಗೊಳಿಸಿದ್ದ ಮಣಿಕಂಠನ್‌, ನಿರ್ಮಾಣ ಹಂತದ ಕಟ್ಟಡಗಳಲ್ಲಿ ಗಾರೆ ಕೆಲಸ ಮಾಡುತ್ತಿದ್ದ. ಆತನ ಪೋಷಕರು ಮೂಲತಃ ತಮಿಳುನಾಡಿನವರಾಗಿದ್ದು, ಹಲವು ವರ್ಷಗಳಿಂದ ಮುನೇಶ್ವರ ಬ್ಲಾಕ್‌ನಲ್ಲಿ ನೆಲೆಸಿದ್ದಾರೆ. ಅಪ್ರಾಪ್ತ ವಯಸ್ಸಿನಿಂದಲೇ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದ ಮಣಿಕಂಠನ್‌, ಯುವತಿಯೊಬ್ಬಳ ಪ್ರೇಮ ವಿಚಾರವಾಗಿ 2013ರಲ್ಲಿ ಗಲಾಟೆ ಮಾಡಿದ್ದ. ಈ ಸಂಬಂಧ ಆತನ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪಿಯು ವಿದ್ಯಾರ್ಥಿನಿಗೆ ಚಾಕು ಇರಿತ?
ಬೆಂಗಳೂರು:
ನಗರದ ಡೇರಿ ವೃತ್ತ ಸಮೀಪ ಪ್ರತಿಷ್ಠಿತ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳಿಗೆ ದುಷ್ಕರ್ಮಿಗಳು ಎರಡು ದಿನಗಳ ಹಿಂದೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎನ್ನಲಾದ ಘಟನೆ ಈಗ ಹಲವು ಗೊಂದಲಗಳಿಗೆ ಕಾರಣವಾಗಿದೆ. 

“ತನ್ನನ್ನು ರಸ್ತೆಯಲ್ಲಿ ಅಡ್ಡಗಟ್ಟಿದ ಕಿಡಿಗೇಡಿಗಳು, ನಿನ್ನನ್ನು ಹಾಗೂ ನಿಮ್ಮಪ್ಪನನ್ನು ಕೊಲ್ಲುತ್ತೇವೆ’ ಎಂದು ಬೆದರಿಸಿ ಚಾಕುವಿನಿಂದ ಎರಡು ಕೈಗಳಿಗೆ ಚುಚ್ಚಿ ಪರಾರಿಯಾದರು ಎಂದು ವಿದ್ಯಾರ್ಥಿನಿ ಆಡುಗೋಡಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ. ಆದರೆ, ತನಿಖೆ ಆರಂಭಿಸಿದ ಪೊಲೀಸರಿಗೆ ಇದೀಗ ಕೃತ್ಯ ನಡೆದಿರುವ ಬಗ್ಗೆಯೇ ಅನುಮಾನ ಉಂಟಾಗಿದೆ. ವಿದ್ಯಾರ್ಥಿಗೆ ಕೈಗಳಿಗೆ ತರಚಿದ ಗಾಯಗಳಾಗಿದ್ದು, ಗಂಭೀರ ಸ್ವರೂಪದ ಗಾಯವಾಗಿಲ್ಲ.

ಅಲ್ಲದೆ, ಘಟನೆ ಬಗ್ಗೆ ಆಕೆ ಪದೇ ಪದೇ ಹೇಳಿಕೆ ಬದಲಾಯಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಅನುಮಾನ ಮೂಡಿವೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.  ಆಕೆಯ ವರ್ತನೆ ನೋಡಿದ ಬಳಿಕ ಪರೀಕ್ಷೆಯ ಭಯ ಅಥವಾ ಮತ್ಯಾವುದೋ ವೈಯಕ್ತಿಕ ಕಾರಣಗಳಿಗೆ ಪೋಷಕರ ದಿಕ್ಕು ತಪ್ಪಿಸಲು ವಿದ್ಯಾರ್ಥಿನಿ ಈ ರೀತಿ ಸುಳ್ಳು ಹೇಳಿರಬಹುದು ಎಂದೂ ಪೊಲೀಸರು ಶಂಕಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ಸೋಮವಾರ ಬೆಳಗ್ಗೆ 8.30ರ ವೇಳೆಗೆ ಕಾಲೇಜಿಗೆ ತೆರಳುತ್ತಿದ್ದಾಗ ಡೇರಿ ಸರ್ಕಲ್‌ ಬಳಿ ಆಕೆಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಆಕೆಗೆ ಅವರ ತಂದೆ ಭಾವಚಿತ್ರ ತೋರಿಸಿ ಜೀವ ಬೆದರಿಕೆ ಹಾಕಿದ್ದಲ್ಲದೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next