Advertisement

ಚುನಾವಣೆ ಇತಿಹಾಸ ಹೇಳುವ ಚಿತ್ರಗಳು

12:21 PM Apr 06, 2018 | |

ಬೆಂಗಳೂರು: ಮತದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಚುನಾವಣಾ ಪ್ರಕ್ರಿಯೆ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ಹುಟ್ಟಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ರಾಜಧಾನಿಯ ಚುನಾವಣಾ ಇತಿಹಾಸ ಸಾರುವ ಅಪರೂಪದ “ಛಾಯಚಿತ್ರ ಪ್ರದರ್ಶನ’ ಆಯೋಜಿಸಿದೆ.

Advertisement

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಏಳು ದಿನಗಳ ಕಾಲ ನಡೆಯುವ ಈ ಛಾಯಚಿತ್ರ ಪ್ರದರ್ಶನಕ್ಕೆ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌ ಗುರುವಾರ ಚಾಲನೆ ನೀಡಿದರು. ದೇಶದಲ್ಲಿ ಚುನಾವಣಾ ಪ್ರಕ್ರಿಯೆ ನಡೆದು ಬಂದ ದಾರಿಯನ್ನು ಛಾಯಾಚಿತ್ರಗಳ ಮೂಲಕ ಪರಿಚಯಿಸಲಾಗಿದೆ. ಮುಖ್ಯವಾಗಿ 60ರ ದಶಕದಿಂದ ಇಲ್ಲಿವರೆಗೆ ಬೆಂಗಳೂರಿನಲ್ಲಿ ನಡೆದ ಚುನಾವಣೆಗಳ ಅಪರೂಪದ ಕ್ಷಣ ಮತ್ತು ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ.

ಮತಪತ್ರ ಮುದ್ರಣ, ಮಸ್ಟರಿಂಗ್‌, ಮತಗಟ್ಟೆಗಳು, ನಾಮಪತ್ರ ಸಲ್ಲಿಕೆ, ಮತಪತ್ರ ಮೂಲಕ ಮತದಾನ, ಸ್ಟ್ರಾಂಗ್‌ ರೂಂ, ಮತಎಣಿಕೆ ಪ್ರಕ್ರಿಯೆ, ಮತದಾನದಲ್ಲಿ ಮಹಿಳೆಯರು, ಹಾಗೂ ದಿವ್ಯಾಂಗರ  ಭಾಗವಹಿಸುವಿಕೆ,  ವಯೋವೃದ್ಧರು ಮತ ಚಲಾಯಿಸುವುದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಮತಯಂತ್ರ ಮತ್ತು ಮತದಾನ, ವಿವಿ ಪ್ಯಾಟ…ಯಂತ್ರಗಳ ಮಾಹಿತಿ. ರಾಷ್ಟ್ರೀಯ ಮತದಾರರ ದಿನಾಚರಣೆ, ಭಾರತ ಚುನಾವಣಾ ಆಯೋಗದ ಭೇಟಿ, ಮತದಾರರ ಪ್ರತಿಜ್ಞಾ ಸ್ವೀಕಾರ ಮತ್ತು ಮತದಾರರ ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಒಟ್ಟು 17 ವಿಷಯಗಳ 50ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.

ಅಲ್ಲದೆ, ಇವಿಎಂ ಮತ್ತು ವಿವಿಪ್ಯಾಟ್‌ ಬಳಸುವ ವಿಧಾನ, ಅವು ಹೇಗೆ ಕೆಲಸ ಮಾಡುತ್ತವೆ? ಹಾಕಿದ ಮತವನ್ನು ಹೇಗೆ ಖಾತರಿಪಡಿಸಿಕೊಳ್ಳಬಹುದು ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಲು ಎರಡು ಪ್ರಾತ್ಯಾಕ್ಷಿಕೆ ಮಳಿಗೆಗಳನ್ನು ತೆರೆಯಲಾಗಿದೆ. ಜತೆಗೆ ಮತದಾನ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಲು ಮತ್ತು ಆಸಕ್ತಿ ಹೆಚ್ಚಿಸಲು “ಎಲೆಕ್ಷನ್‌ ಕ್ವಿಜ್‌’ ಮಳಿಗೆಯೂ ಇದೆ. 

ಇದೇ ವೇಳೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ದೂರು ನೀಡಲು ಚುನಾವಣಾಧಿಕಾರಿಗಳ ಸಂಪರ್ಕ ಸಂಖ್ಯೆಗಳಿರುವ ಡೈರಕ್ಟರಿ ಹಾಗೂ ಎಲೆಕ್ಷನ್‌ ಕ್ವಿಜ್‌ ಆ್ಯಪ್‌ಗ್ಳನ್ನು ಬಿಡುಗಡೆ ಮಾಡಲಾಯಿತು. ಚುನಾವಣಾ ಆಯುಕ್ತರಾದ ಉಮೇಶ್‌ ಸಿನ್ಹಾ, ಅಶೋಕ್‌ ಲವಾಸ, ಸುನೀಲ್‌ ಆರೋರ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌, ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌, ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ, ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ ಮತ್ತಿತರರು ಇದ್ದರು

Advertisement

ಜಾಗೃತಿ ವಾಹನಗಳಿಗೆ ಗ್ರೀನ್‌ ಸಿಗ್ನಲ್‌: ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಗೆ ಇವಿಎಂ ಮತ್ತು ವಿವಿಪ್ಯಾಟ್‌ ಬಗ್ಗೆ ಅರಿವು ಮೂಡಿಸಲು ಸಜ್ಜುಗೊಳಿಸಲಾಗಿರುವ 8 ವಿಶೇಷ ಜಾಗೃತಿ ವಾಹನಗಳಿಗೆ ಓಂ ಪ್ರಕಾಶ್‌ ರಾವತ್‌ ಹಸಿರು ನಿಶಾನೆ ತೋರಿಸಿದರು. ಪಾಲಿಕೆಯ ಎಂಟು ವಲಯಗಳಲ್ಲಿ ಪ್ರತಿ ವಲಯದಲ್ಲಿ ಒಂದು ವಾಹನ ಒಂದು ತಿಂಗಳು ಸಂಚರಿಸಲಿದೆ.

ಇದರಲ್ಲಿ ಇವಿಎಂ ಹಾಗೂ ವಿವಿಪ್ಯಾಟ್‌ ಇರಿಸಲಾಗಿದ್ದು, ಪ್ರಾತ್ಯಾಕ್ಷಿಕೆ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು. ಅಲ್ಲದೆ, ಈ ಜಾಗೃತಿ ವಾಹನಗಳಲ್ಲಿ ಮತದಾರರ ಪಟ್ಟಿಗೆ ಹೆರಸು ಸೇರ್ಪಡೆಗೆ ಭರ್ತಿ ಮಾಡಬೇಕಾದ ಅರ್ಜಿ ನಮೂನೆ-6 ಸಹ ಇರುತ್ತದೆ. ಹೆಸರು ಸೇರಿಸಲು ಇಚ್ಛಿಸುವವರು ಈ ಸೇವೆ ಬಳಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next