Advertisement

ಗಾಲ್ವಾನ್‌ ಕಣಿವೆಯಲ್ಲಿ ಹತನಾಗಿದ್ದ ಚೀನ ಸೈನಿಕರ ಗೋರಿ ಚಿತ್ರ ವೈರಲ್‌

10:58 AM Aug 30, 2020 | sudhir |

ಬೀಜಿಂಗ್‌: “ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬ ಭ್ರಮೆ ಚೀನದ್ದು. ಗಾಲ್ವಾನ್‌ ತೀರದಲ್ಲಿ ಜೂ.15ರಂದು 43 ಪಿಎಲ್‌ಎ ಸೈನಿಕರು ಹತರಾದರೂ “ಒಬ್ಬನೇ ಒಬ್ಬ ಸೈನಿಕ ಹತನಾಗಿದ್ದಾನೆ’ ಎಂದು ಚೀನ ಇದುವರೆಗೂ ಒಪ್ಪಿಕೊಂಡಿಲ್ಲ. ಆದರೆ ಚೀನದ ಸಾಮಾಜಿಕ ಜಾಲತಾಣಗಳು ಮಾತ್ರ ತಮ್ಮ ಸೈನಿಕರ ಸಾವಿನ ಗೌಪ್ಯತೆ ಬಹಿರಂಗಪಡಿಸಿ, ಬೀಜಿಂಗ್‌ನ ಮಾನ ಕಳಚಿವೆ.
ಹೌದು, ಭಾರತೀಯ ವೀರಯೋಧರಿಂದ ಹತನಾದ ಚೀನೀ ಯೋಧನ ಸಮಾಧಿ ಚಿತ್ರ ಚೀನದ ಜನಪ್ರಿಯ ಸಾಮಾಜಿಕ ಜಾಲತಾಣ “ವೈಬೋ’ದಲ್ಲಿ ವೈರಲ್‌ ಆಗಿದೆ. ಸಮಾಧಿ ಮೇಲೆ ಮ್ಯಾಂಡರಿನ್‌ ಭಾಷೆಯಲ್ಲಿ ಯೋಧನ ಪರಿಚಯ, ಕೆಲವು ಸಾಲುಗಳನ್ನು ಬರೆಯಲಾಗಿದೆ.

Advertisement

ಗೋರಿ ಮೇಲೆ ಏನಿದೆ?: “ಚೆನ್‌ ಕ್ಸಿಯಾಂಗ್‌ರಾಂಗ್‌ನ ಸಮಾಧಿ. 69316 ಟ್ರೂಪ್‌ನ ಸೈನಿಕ, ಪಿಂಗ್ನಾನ್‌, ಫ‌ುಜಿಯಾನ್‌ ಪ್ರಾಂತ್ಯ’ ಎಂದು ಚುಟುಕಾಗಿ ಸೈನಿಕನ ಪರಿಚಯ ನೀಡಲಾಗಿದೆ. ಅಲ್ಲದೆ “2020ರ ಜೂನ್‌ನಲ್ಲಿ ಭಾರತೀಯ ಗಡಿ ಭದ್ರತಾ ಪಡೆಗಳ ವಿರುದ್ಧದ ಘರ್ಷಣೆಯಲ್ಲಿ ಮಡಿದ 19 ವರ್ಷದ ಸೈನಿಕ. ಕೇಂದ್ರ ಮಿಲಿಟರಿ ಆಯೋಗ ಮರಣೋತ್ತರ ವಾಗಿ ಇವನ‌ನ್ನು ಸ್ಮರಿಸಿದೆ’ ಎಂಬ ಸಾಲುಗಳನ್ನು ಕೆತ್ತಲಾಗಿದೆ.

ಸಮಾಧಿ ಎಲ್ಲಿದೆ?: ಲಡಾಖ್‌ನ ಎಲ್‌ಎಸಿಗೆ ಸಮೀಪದ ದಕ್ಷಿಣ ಕ್ಸಿನ್‌ಜಿಯಾಂಗ್‌ ಮಿಲಿಟರಿ ಪ್ರದೇಶದಲ್ಲಿ ಆ.5ರಂದು ಈ ಸಮಾಧಿಯನ್ನು ನಿರ್ಮಿಸಿರುವ ಬಗ್ಗೆ ಗೋರಿ ಮೇಲಿನ ಸಾಲುಗಳು ದೃಢಪಡಿಸಿವೆ. 69316ನೇ ಟ್ರೂಪ್‌, ಪೀಪಲ್ಸ್‌ ಲಿಬ ರೇಶನ್‌ ಆರ್ಮಿಯ (ಪಿಎಲ್‌ಎ) 13ನೇ ರೆಜಿಮೆಂಟ್‌. ಮುಖ್ಯವಾಗಿ ಲಡಾಖ್‌ ಸನಿಹದ ಎಲ್‌ಎಸಿಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

ವಿತಂಡವಾದ: ಸೈನಿಕನ ಗೋರಿಯ ಚಿತ್ರ ವೈಬೋದಲ್ಲಿ ಹರಿದಾಡಿ, ಟ್ವಿಟ್ಟರ್‌- ಫೇಸ್‌ಬುಕ್‌ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದ್ದಂತೆ ವೈಬೋ ಚೀನೀ ಬಳಕೆದಾರರು ವಿತಂಡವಾದ ಆರಂಭಿಸಿದ್ದಾರೆ. “ಗಾಲ್ವಾನ್‌ ಘರ್ಷಣೆ ಯಲ್ಲಿ ಚೆನ್‌ ಕ್ಸಿಯಾಂಗ್‌ರಾಂಗ್‌ ಸಾವನ್ನಪ್ಪಿಲ್ಲ. ಅವರು ಈಗಲೂ ಪಿಎಲ್‌ಎ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಕೆಲವರು ಗೋರಿ ಪ್ರಕರಣಕ್ಕೆ ತೇಪೆ ಹಚ್ಚಿದ್ದಾರೆ.

ಆದರೆ, ಬಹಿರಂಗವಾದ ಗೋರಿ ಚಿತ್ರದ ಬಗ್ಗೆ ಬೀಜಿಂಗ್‌ ಆಡಳಿತ ಮಾತ್ರ ಇದುವರೆಗೂ ತುಟಿ ಪಿಟಿಕ್‌ ಎಂದಿಲ್ಲ.

Advertisement

“ಕವ್ಕಾಜ್‌’ ಬಹಿಷ್ಕಾರ
ಚೀನ- ಪಾಕಿಸ್ಥಾನಕ್ಕೆ ಮತ್ತೂಂದು ಮುಖಭಂಗವಾಗಿದೆ. ಮುಂದಿನ ತಿಂಗಳು ರಷ್ಯಾದಲ್ಲಿ ಆಯೋಜನೆಗೊಂಡಿರುವ “ಕವ್ಕಾಜ್‌-2020′ ಬಹುರಾಷ್ಟ್ರಗಳ ಮಿಲಿಟರಿ ಕವಾಯತನ್ನು ಬಹಿಷ್ಕರಿಸಲು ಭಾರತ ನಿರ್ಧರಿಸಿದೆ. ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ಸೇನಾಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ ಉಪಸ್ಥಿತಿಯಲ್ಲಿ ನಡೆದ ಉನ್ನತಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. “ಕವ್ಕಾಜ್‌-2020’ರಲ್ಲಿ ಭಾರತ, ಚೀನ, ಪಾಕಿಸ್ಥಾನ ಸೇರಿದಂತೆ 18ಕ್ಕೂ ಹೆಚ್ಚು ರಾಷ್ಟ್ರಗಳನ್ನು ರಷ್ಯಾ ಆಹ್ವಾನಿಸಿತ್ತು. ಭಾರತದ ಗಡಿ ಶಾಂತಿಗೆ ಚೀನ, ಪಾಕ್‌ ನಿರಂತರ ಭಂಗ ತರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ದಿಟ್ಟ ನಿಲುವು ಕೈಗೊಂಡಿದೆ.

ಆ ಫೋಟೋ ಕೂಡ ಡಿಲೀಟ್‌!
ಸೈನಿಕನ ಗೋರಿ ಚಿತ್ರ ಆಧರಿಸಿ ಸಿಂಗಾಪುರದ ಕೆಲವು ಚೀನೀ ಪತ್ರಿಕೆಗಳು ಸುದ್ದಿ ಬಿತ್ತರಿಸಿವೆ. ಆದರೆ ಚೀನ ಅಧಿಕಾರಿಗಳು ಈ ಫೋಟೋವನ್ನು ವೈಬೋದಿಂದ ಡಿಲೀಟ್‌ ಮಾಡಿಸಿದ್ದಾರೆ. ಚಿತ್ರವನ್ನು ಹರಿಬಿಟ್ಟ ಬಳಕೆದಾರನ ಖಾತೆಯಲ್ಲಿ ಗೋರಿಯ ಫೋಟೋ ಈಗ ಕಾಣಿಸುತ್ತಿಲ್ಲ.

ಕುತಂತ್ರಿ ಚೀನದಿಂದ ಹೆದ್ದಾರಿ ನಿರ್ಮಾಣ
1962ರ ಯುದ್ಧಕ್ಕೆ ಕಾರಣವಾದ ಪ್ರದೇಶಗಳಿಗೆ ಸಂಪರ್ಕ ಬೆಸೆಯುವಂತೆ ಚೀನ ಈಗ ಲಡಾಖ್‌ನ ಎಲ್‌ಎಸಿ ಸಮೀಪ ಹೊಸ ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಟಿಬೆಟ್‌ ಮೂಲಕವಾಗಿ ಪ್ರಸ್ತುತ ಅಸ್ತಿತ್ವದಲ್ಲಿರುವ ರಸ್ತೆಗಳಿಗೆ ಪರ್ಯಾಯ ಮಾರ್ಗ ಇದಾಗಿದ್ದು, ತ್ವರಿತ ಸಮಯದಲ್ಲಿ ಸೇನಾ ತುಕಡಿ ರವಾನಿಸಲು ಪಿಎಲ್‌ಎಗೆ ನೆರವಾಗಲಿದೆ. ಲಾಸಾದಿಂದ ಕಶರ್‌ಗೆ ಈ ರಸ್ತೆ ಸಂಪರ್ಕ ಬೆಸೆಯಲಿದೆ. ಇದರ ನಿರ್ಮಾಣದ ದೃಶ್ಯಗಳನ್ನು ಉಪಗ್ರಹ ಚಿತ್ರಗಳು ಸೆರೆಹಿಡಿದಿವೆ. 1950-57ರ ಸುಮಾರಿನಲ್ಲಿ ಚೀನ ಇಲ್ಲಿ ರಸ್ತೆ ನಿರ್ಮಿಸಿತ್ತು. 1962ರ ಯುದ್ಧಕ್ಕೆ ಇಲ್ಲಿನ ನಿರ್ಮಾಣಗಳೂ ಪ್ರಚೋದನೆಯೊಡ್ಡಿದ್ದವು.

ಡೋಕ್ಲಾಂ ಸಮೀಪ ಚೀನ ರಾಡಾರ್‌ ಸೈಟ್‌
ಲಡಾಖ್‌ನ ಎಲ್‌ಎಸಿಯಲ್ಲಿ ಬಿಕ್ಕಟ್ಟು ಜೀವಂತವಿರು ವಾಗಲೇ ಚೀನ, ಡೋಕ್ಲಾಂ ಮತ್ತು ಸಿಕ್ಕಿಂ ಗಡಿಯಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುತ್ತಿದೆ. ಈ ಸಂಬಂಧಿತ ಕಾಮಗಾರಿ ಚಿತ್ರಗಳನ್ನು ಮುಕ್ತ ಗುಪ್ತಚರ ಮೂಲ ಡೆಟ್ರೆಸಾ# ಟ್ವಿಟ್ಟರಿನಲ್ಲಿ ಹಂಚಿ ಕೊಂಡಿದೆ. ಸಂಶಯಾಸ್ಪದ ಮುನ್ಸೂಚಕ ರಾಡಾರ್‌ ಸೈಟ್‌ಗಳ ಸ್ಥಾಪನೆಗೆ ಚೀನ ಮುಂದಾಗಿದೆ ಎಂದು ಮೂಲಗಳು ವಿಶ್ಲೇಷಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next