Advertisement

Belthangady: ಗರ್ಭಿಣಿಯನ್ನು ಎತ್ತಿಕೊಂಡು ಹೋಗಿ ಚಿಕಿತ್ಸೆಗೆ ನೆರವಾದ ಆರೋಗ್ಯ ಸಿಬಂದಿ

01:46 PM Jul 29, 2024 | Team Udayavani |

ಬೆಳ್ತಂಗಡಿ: ತುಂಬು ಗರ್ಭಿಣಿಯೋರ್ವರನ್ನು ಆರೋಗ್ಯ ಇಲಾಖೆ ಸಿಬಂದಿ ಮಳೆಯಲ್ಲೇ ಸ್ಟ್ರೆಚರ್‌ನಲ್ಲಿ ಎತ್ತಿಕೊಂಡು ಹೋಗಿ
ಹೆರಿಗೆ ಮಾಡಿಸಿದ್ದು, ಇದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕಣಿಯೂರು ಗ್ರಾಮದ ಅಡೆಂಜ ನಿವಾಸಿ ಅಭಿಷೇಕ್‌ ಅವರ
ಪತ್ನಿ ವಿಲಾಸಿನಿ (30) ಅವರಿಗೆ ವೈದ್ಯರು ಜು.20ಕ್ಕೆ ಹೆರಿಗೆ ದಿನಾಂಕ ನೀಡಿದ್ದರು. ಈ ಬಗ್ಗೆ ಸ್ಥಳೀಯ ಆಶಾ ಕಾರ್ಯಕರ್ತೆಯರು ಜು.10ಕ್ಕೆ ಮನೆಗೆ ಭೇಟಿ ನೆನಪಿಸಿದ್ದರು. ಆದರೆ ಮನೆ ಮಂದಿ ಇದನ್ನು ಮರೆತಿದ್ದರು.

Advertisement

ಜು.25ರಂದು ಹೆರಿಗೆ ನೋವು ಬಂದಿದ್ದು, ಆರೋಗ್ಯ ಇಲಾಖೆ ಸಿಬಂದಿ ಮನೆಗೆ ತೆರಳಿದ್ದರು. ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೂ
ಸಿಕ್ಕಿರಲಿಲ್ಲ. ಮನೆ ಸಮೀಪ ವಾಹನ ಬರಲೂ ವ್ಯವಸ್ಥೆಯೂ ಇರಲಿಲ್ಲ.ಆದ್ದರಿಂದ ಆರೋಗ್ಯ ಸಿಬಂದಿಯೇ ಗರ್ಭಿಣಿಯನ್ನು ಮನೆಯಿಂದ ಸ್ವಲ್ಪ ದೂರ ಎತ್ತಿಕೊಂಡು ಹೋಗಿ ತಾವು ಬಂದಿದ್ದ ಆಟೋದಲ್ಲಿ ಕೂರಿಸಿದರು. ಆದರೆ ಅಷ್ಟರಲ್ಲಾಗಲೇ ಡೆಲಿವರಿಯಾಗಿತ್ತು.

ಕೂಡಲೇ ತಾಯಿ ಮತ್ತು ಮಗುವನ್ನು ಆರೈಕೆ ಮಾಡಿ ರಿಕ್ಷಾದಲ್ಲೇ ಬೆಳ್ತಂಗಡಿ ಸಮುದಾಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಒದಗಿಸಿ
ಮಂಗಳೂರು ಲೇಡಿಗೋಷನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ, ಮಗು ಸುರಕ್ಷಿತವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಆರೋಗ್ಯ ಸಿಬಂದಿಯ ಕಾರ್ಯಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ತಿಮ್ಮಯ್ಯ ಎಚ್‌. ಆರ್‌. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಶ್ವೇತಾ, ಸುನೀತಾ ಹೆಗ್ಡೆ, ಆಶಾ ಕಾರ್ಯಕರ್ತೆ ಕುಸುಮಾ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next