ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ 2,77,471 ಮಂದಿ ಅಟಲ್ ಪಿಂಚಣಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು, ಈ ಮೂಲಕ ಶೇ. 44ರಷ್ಟು ಗುರಿ ಸಾಧಿಸಲಾಗಿದೆ ಪಿಂಚಣಿ ಅನುದಾನ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ ಡಿಎ) ಕಾರ್ಯಕಾರಿ ನಿರ್ದೇಶಕ ಅನಂತ ಗೋಪಾಲ್ ತಿಳಿಸಿದರು.
ರಾಜ್ಯಮಟ್ಟದ ಬ್ಯಾಂಕರ್ಸ್ ಸಮಿತಿಯು ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಸೋಮವಾರ ಆಯೋಜಿಸಿದ್ದ ಅಟಲ್ ಪಿಂಚಣಿ ಯೋಜನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ವಿವಿಧ ಬ್ಯಾಂಕ್‌ಗಳಿಗೆ ಒಟ್ಟಾರೆ 6.33 ಲಕ್ಷ ಜನರ ನೋಂದಣಿ ಗುರಿ ನೀಡಲಾಗಿದ್ದು, ಈ ಪೈಕಿ 2.77 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗೆ “ವನಿತಾ ಸಂಗಾತಿ’
ಇದರೊಂದಿಗೆ ಈವರೆಗೆ 20,97,697 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಫಲಾನುಭವಿಗಳ ನೋಂದಣಿ ಹಾಗೂ ವೇಗವಾಗಿ ಪಿಂಚಣಿ ನೀಡಲು ತಂತ್ರಜ್ಞಾನ ಬಳಸಿಕೊಳ್ಳುವ ಅವಶ್ಯಕತೆ ಇದೆ ಎಂದು ಸಲಹೆ ಮಾಡಿದರು.
ಯಾವ ಬ್ಯಾಂಕ್ ಎಷ್ಟು ಗುರಿ ಸಾಧನೆ?: ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಹಲವು ಸವಾಲುಗಳ ನಡುವೆಯೂ ಬ್ಯಾಂಕ್ ಸಿಬ್ಬಂದಿ ಕಾರ್ಯಕ್ಷಮತೆ ಅಭಿನಂದನಾರ್ಹವಾಗಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿರುವ ಮತ್ತಷ್ಟು ಮಂದಿಗೆ ಇನ್ನಷ್ಟು ವೇಗವಾಗಿ ಪಿಂಚಣಿ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಬ್ಯಾಂಕುಗಳು ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದ ಅವರು, ಬಹುತೇಕ ಬ್ಯಾಂಕ್‌ಗಳು ಪಿಂಚಣಿ ನೋಂದಣಿಯಲ್ಲಿ ನಿಗದಿತ ಗುರಿ ತಲುಪಿಲ್ಲ.
ಕೆನರಾ ಬ್ಯಾಂಕ್ ಶೇ. 65, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ. 64, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸೇರಿ ಶೇ. 74 ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ಶೇ. 42ರಷ್ಟು ಗುರಿ ಸಾಧಿಸಿವೆ ಎಂದು ಹೇಳಿದರು. ಸಮಿತಿಯ ಉಪ ಪ್ರಧಾನ ವ್ಯವಸ್ಥಾಪಕ ಪಿ.ಸಿ. ದಾಮೋದರನ್, ಸಂಚಾಲಕ ಎ. ಮುರಳಿಕೃಷ್ಣ, ಉಪ ನಿರ್ದೇಶಕರಾದ ಸಪ್ತಶ್ರೀ ಮತ್ತು ನಬಾರ್ಡ್ ಪ್ರಧಾನ ವ್ಯವಸ್ಥಾಪಕ ಸಿ.ವಿ. ರೆಡ್ಡಿ ಪಾಲ್ಗೊಂಡಿದ್ದರು.