ಶಿಡ್ಲಘಟ್ಟ: ರಾಜ್ಯ ಪ್ರಾಥಮಿಕ ಸಹಕಾರ ಮತ್ತು ಗ್ರಾಮೀಣ ಬ್ಯಾಂಕುಗಳ ಸಾಲದ ಮೇಲಿನ 200 ಕೋಟಿ ರೂ.ಗಳ ಬಡ್ಡಿ ಮನ್ನಾ ಮಾಡಬೇಕೆಂದು ತಾಲೂಕು ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಕಾಳನಾಯಕನಹಳ್ಳಿ ಭೀಮೇಶ್ ಸರ್ಕಾರವನ್ನು ಆಗ್ರಹಿಸಿದರು.
ನಗರದ ಪಿಕಾರ್ಡ್ ಬ್ಯಾಂಕಿನಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿನ 170 ಪಿಕಾರ್ಡ್ ಬ್ಯಾಂಕುಗಳ ಮೂಲಕ ನೀಡಿರುವ ಸಾಲದ ಮೇಲಿನ ಸುಮಾರು 200 ಕೋಟಿ ರೂ.ಗಳ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು. ಪಿಕಾರ್ಡ್ ಬ್ಯಾಂಕುಗಳ ಬಡ್ಡಿಯನ್ನು ಮನ್ನಾ ಮಾಡಲು ಈಗಾಗಲೇ ಕರ್ನಾಟಕ ರಾಜ್ಯ ಸಹಕಾರ ಕೃಷಿ ಬ್ಯಾಂಕ್(ಕಾಸ್ಕಾ) ಸಹಕಾರ ಸಚಿವರನ್ನು ಮನವಿ ಮಾಡಿದ್ದು, ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಕೂಡಲೇ ಬಡ್ಡಿಯನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಶಿಡ್ಲಘಟ್ಟ ತಾಲೂಕಿನಲ್ಲಿ ಪಿಕಾರ್ಡ್ ಬ್ಯಾಂಕಿನ ಮೂಲಕ 2018-19 ನೇ ಸಾಲಿನಲ್ಲಿ 18 ಕೋಟಿ ರೂ.ಗಳ ಸಾಲ ನೀಡಲಾಗಿದ್ದು, ಅದರಲ್ಲಿ ಗುರಿ ಸಾಧನೆ ಮಾಡಲು 9.30 ಕೋಟಿ ರೂ. ಇದುವರೆಗೆ ಪಾವತಿಯಾಗಬೇಕಿತ್ತು. ಆದರೇ ಕೇವಲ 3 ಕೋಟಿ ರೂ.ಗಳು ಮಾತ್ರ ಮರುಪಾವತಿಯಾಗಿದ್ದು, ವಸೂಲಿಯಲ್ಲಿ ಶೇ. 27ರಷ್ಟು ಸಾಧನೆಯಾಗಿದೆ ಎಂದರು.
ಬ್ಯಾಂಕುಗಳ ಮೂಲಕ ನೀಡಿರುವ ಸಾಲ ಮರುಪಾವತಿಸಲು ರೈತರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. 2013-14ನೇ ಸಾಲಿನಲ್ಲಿ ಶೇ. 63, 2014-15 ರಲ್ಲಿ 71,2015-16ನೇ ಸಾಲಿನಲ್ಲಿ 71,2016-17ನಲ್ಲಿ ಶೇ. 66 ಹಾಗೂ 2017-18 ನೇ ಸಾಲಿನಲ್ಲಿ ಶೇ. 45.03 ಸಾಲ ವಸೂಲಿಯಾಗಿದ್ದು ರೈತರು ಪಡೆದಿರುವ ಸಾಲವನ್ನು ಮರುಪಾವತಿ ಮಾಡುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ರಾಜ್ಯ ಸರ್ಕಾರ ಪಿಕಾರ್ಡ್ ಬ್ಯಾಂಕಿನ ಸಾಲ ಸಹ ಮನ್ನಾ ಮಾಡುತ್ತದೆ ಎಂದು ತಪ್ಪು ಕಲ್ಪನೆಯಿಂದ ರೈತರು ಸಾಲವನ್ನು ಮರುಪಾವತಿಸಲು ಉದಾಸೀನ ತೋರಿಸುತ್ತಿದ್ದಾರೆ ಇದರಿಂದ ರೈತರ ಸಾಲದ ಮೇಲೆ ಬಡ್ಡಿ ಹೆಚ್ಚಾಗುತ್ತದೆ ನಿಗಧಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡಿದರೆ ಕೇವಲ ಶೇ.3 ಬಡ್ಡಿ ಬೀಳುತ್ತದೆ ಅವಧಿ ಮೀರಿದರೆ ಶೇ. 13.5 ಬಡ್ಡಿಯನ್ನು ರೈತರು ಪಾವತಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಬ್ಯಾಂಕಿನ ಮೂಲಕ ಕಂದಾಯ ದಾಖಲೆಗಳನ್ನು ಪರಿಶೀಲಿಸಿ ರೈತರಿಗೆ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕಾಗಿ ಗರಿಷ್ಠ 5ಲಕ್ಷ, ದ್ರಾಕ್ಷಿ ಬೆಳೆಗೆ 7 ಲಕ್ಷ ಹಾಗೂ ಟ್ರ್ಯಾಕ್ಟರ್ ಖರೀದಿಗೆ 10 ಲಕ್ಷ ವರೆಗೆ ಸಾಲ ಸೌಲಭ್ಯ ನೀಡಲು ಅವಕಾಶಗಳಿದ್ದು, ಸಾಲ ಮರುಪಾವತಿಸಲು ತಲಾ 8 ವರ್ಷ ಹಾಗೂ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣದ ಸಾಲವನ್ನು ಮರುಪಾವತಿಸಲು 7 ವರ್ಷಗಳ ಕಾಲಾವಕಾಶ ನೀಡಲಾಗುತ್ತದೆ ಎಂದರು. ಜಿಪಂ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಎನ್.ಮುನಿಯಪ್ಪ, ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ರಾಯಪ್ಪನಹಳ್ಳಿ ಅಶ್ವತ್ಥನಾರಾಯಣ,ಬ್ಯಾಂಕಿನ ವ್ಯವಸ್ಥಾಪಕ ಮುನಿಯಪ್ಪ, ತಾಪಂ ಮಾಜಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಆರಾಧನಾ ಸಮಿತಿಯ ಮಾಜಿ ಸದಸ್ಯ ದ್ಯಾವಪ್ಪ ಮತ್ತಿತರರು ಉಪಸ್ಥಿತರಿದ್ದರು.